ಕಾರವಾರ: ಕನ್ನಡ ನಾಡಿಗೆ, ನುಡಿಗೆ, ಸಾಹಿತ್ಯಕ್ಕೆ ಉತ್ತರ ಕನ್ನಡದ ನೆಲದ ಕೊಡುಗೆ ಅಪಾರ ಎಂದು ಕನ್ನಡ ಸಾಹಿತ್ಯ ಅಕಾಡೆಮಿಯ ಸದಸ್ಯ ಜಯಪ್ರಕಾಶ ಶೆಟ್ಟಿ ಹೇಳಿದರು.
ಬಾಡ ಶಿವಾಜಿ ಶಿಕ್ಷಣ ಸಂಸ್ಥೆಯ ಆವಣರದಲ್ಲಿ ಆಯೋಜಿಸಿದ್ದ ಕಾರವಾರ ತಾಲೂಕು 9 ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡದ ಮೊದಲ ರಾಜಧಾನಿ ಬನವಾಸಿ ಉತ್ತರ ಕನ್ನಡದಲ್ಲಿ ಸ್ಥಾಪನೆಯಾಯಿತು. ಆದಿ ಕವಿ ಪಂಪನಿಗೆ ಪ್ರೇರಣೆಯಾಗಿದ್ದು, ಬನವಾಸಿ. ಆ ನಂತರವೂ ಕನ್ನಡ ನಾಡಿಗೆ ಉತ್ತರ ಕನ್ನಡ ಜಿಲ್ಲೆಯು ಹಲವು ಸಾಹಿತಿಗಳನ್ನು ಕೊಟ್ಟಿದೆ. ದಿನಕರ ದೇಸಾಯಿ, ಗೌರೀಶ ಕಾಯ್ಕಿಣಿ, ಜಯಂತ ಕಾಯ್ಕಿಣಿ ಮುಂತಾದ ಹಲವು ಸಾಹಿತಿಗಳ ಅದಕ್ಕೆ ಉದಾಹರಣೆ ಎಂದರು.
ಅಜ್ಞಾನದ ಬೆಳಕಿನಿಂದ ಜ್ಞಾನವನ್ನು ನೋಡುವ ಕಾಲಘಟ್ಟದಲ್ಲಿದ್ದೇವೆ. ಸುಳ್ಳು ವಿಜೃಂಭಿಸುವ ಕಾಲದಲ್ಲಿ ಸತ್ಯ ಒದ್ದಾಡುತ್ತದೆ. ಆದರೆ, ಸತ್ಯಕ್ಕೆ ಚಿರಾಯುಷ್ಯ ಇದೆ. ಸುಳ್ಳು ಗುಳ್ಳೆಯಂತೆ ಇದೆ. ಪ್ರೀತಿ ಇರುವ ಕಡೆ, ಭೀತಿ ಇಲ್ಲದ ಕಡೆ, ಆಯುಧ ಸೋಲುವುದನ್ನು ಪಂಪ ತನ್ನ ಕಾವ್ಯಗಳಲ್ಲಿ ಬಿಂಬಿಸಿದ್ದಾನೆ ಎಂದು ವಿವರಿಸಿದರು.
ಸ್ವಾಗತ ಸಮಿತಿಯ ಗೌರವ ಅಧ್ಯಕ್ಷ, ಶಾಸಕ ಸತೀಶ ಸೈಲ್ ಮಾತನಾಡಿ, ಉತ್ತರ ಕನ್ನಡಕ್ಕೆ ಕಾರ್ಖಾನೆ ತರಲು ಕಷ್ಟ ಇದೆ. ಇದರಿಂದ ಇಲ್ಲಿ ಧಾರ್ಮಿಕ ಪ್ರವಾಸೋದ್ಯಮ ಅಭಿವೃದ್ಧಿಗೆ ಮುಂದಾಗಿದ್ದೇನೆ. 25 ಕೋಟಿ ರೂ.ಗಳನ್ನು ವಿವಿಧ ದೇವಾಲಯ ಅಭಿವೃದ್ಧಿಗೆ ವಿನಿಯೋಗಿಸಿದ್ದು, ಇನ್ನೂ 5 ಕೋಟಿ ರೂ.ಗಳನ್ನು ಸಿಎಂ ಬಳಿ ಕೇಳಲಿದ್ದೇನೆ ಎಂದರು.
ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್.ವಾಸರೆ ಮಾತನಾಡಿ, ಸರ್ಕಾರದಿಂದ ಕನ್ನಡ ಶಾಲೆಗಳನ್ನು ಮುಚ್ಚುವ ಹುನ್ನಾರ ನಡೆದಿದೆ. ಅದನ್ನು ಉಳಿಸಿಕೊಳ್ಳುವ ಕಾರ್ಯವನ್ನು ಮಾಡಬೇಕಿದೆ ಎಂದರು. ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಯಾವುದೇ ಅನುದಾನ ಬರುತ್ತಿಲ್ಲ. ಕಾರವಾರದಲ್ಲಿ ಕನ್ನಡ ಸಾಹಿತ್ಯ ಕಾರ್ಯಕ್ರಮ ನಡೆಸಲು ಒಂದು ಭವನ ಸಹ ಇಲ್ಲ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಮಂಗಲಾ ನಾಯ್ಕ, ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಪಿ.ಆರ್.ನಾಯ್ಕ,ಕೋಶಾಧ್ಯಕ್ಷ ಮುರ್ತುಜಾ ಹುಸೇನ್, ಪತ್ರಕರ್ತ ಗಂಗಾಧರ ಹಿರೇಗುತ್ತಿ, ಸುರೇಶ ನಾಯ್ಕ, ದೇವಿದಾಸ ನಾಯ್ಕ, ಕೈರುನ್ನಿಸ್ಸಾ ಶೇಖ್, ಶಿವಾನಂದ ತಾಂಡೇಲ ವೇದಿಕೆಯಲ್ಲಿ ಇದ್ದರು.
ಸ್ವಾಗತ ಸಮಿತಿಯ ಅಧ್ಯಕ್ಷ ಮಾಧವ ನಾಯ್ಕ ಸ್ವಾಗತಿಸಿದರು. ಕಸಾಪ ತಾಲೂಕು ಅಧ್ಯಕ್ಷ ರಾಮಾ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿ.ಡಿ.ಮನೋಜೆ ಸಮ್ಮೇಳನಾಧ್ಯಕ್ಷರನ್ನು ಪರಿಚಯಿಸಿದರು. ಯಮುನಾ ಗಾಂವಕರ್ ಉದ್ಘಾಟಕರನ್ನು ಪರಿಚಯಿಸಿದರು. ನಿಕಟಪೂರ್ವ ಸರ್ವಾಧ್ಯಕ್ಷೆ ಪ್ರೇಮಾ ಟಿಎಂಆರ್ ಧ್ವಜ ಹಸ್ತಾಂತರಿಸಿದರು. ಗಣೇಶ ಬಿಷ್ಠಣ್ಣನವರ್ ಕಾರ್ಯಕ್ರಮ ನಿರೂಪಿಸಿದರು. ಬಾಬು ಶೇಖ್ ವಂದಿಸಿದರು.
ಗೋಷ್ಠಿಗಳು: ರಂಗಭೂಮಿ ಮತ್ತು ಕಾರವಾರ ವಿಷಯದ ಬಗ್ಗೆ ಗೋಷ್ಠಿ ನಡೆಯಿತು. ನಿವೃತ್ತ ಪ್ರಾಚಾರ್ಯ ರಾಮಕೃಷ್ಣ ಗುಂದಿ ಅವರು ಅಧ್ಯಕ್ಷತೆ ವಹಿಸಿದ್ದರು. ನಂತರ ಬಹುಭಾಷಾ ಕವಿಗೋಷ್ಠಿ ನಡೆಯಿತು. ನಾಗೇಶ ಅಣ್ವೇಕರ್ ಅಧ್ಯಕ್ಷತೆ ವಹಿಸಿದ್ದರು. 12 ಕವಿಗಳು ಸ್ವರಚಿತ ಕವನ ವಾಚಿಸಿದರು.
ಕಾರವಾರದಲ್ಲಿ ಬುಡಕಟ್ಟು ಅಧ್ಯಯನ ಕೇಂದ್ರ ಸ್ಥಾಪನೆಯಾಗಲಿ
ಕಾರ್ಯಕ್ರಮದ ಸರ್ವಾಧ್ಯಕ್ಷತೆ ವಹಿಸಿದ್ದ ಜಿ.ಡಿ.ಗೋವಿಂದ ಕುಮಾರ್, ಹಾಲಕ್ಕಿ ಕುಣಬಿ, ಗೌಳಿ ಮುಂತಾದ ಸಮುದಾಯಗಳನ್ನು ವಿಳಂಬವಿಲ್ಲದೇ ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು. ಉತ್ತರ ಕನ್ನಡದ ಕಾರವಾರದಲ್ಲಿ ಬುಡಕಟ್ಟುಗಳ ಅಧ್ಯಯನಕ್ಕೆ ಒಂದು ವಸ್ತು ಸಂಗ್ರಹಾಲಯ ಹಾಗೂ ಜಾನಪದ ಅಧ್ಯಯನ ಕೇಂದ್ರವಾಗಬೇಕು. ಕಲಾವಿದರಿಗೆ ಸೂಕ್ತ ಗೌರವಧನದೊಂದಿಗೆ ಮಾಸಾಶನ ಸಿಗುವಂತಾಗಬೇಕು. ಮಾಸಾಶನಕ್ಕಾಗಿ ಕಲಾವಿದರನ್ನು ಗುರುತಿಸುವ ಮಾನದಂಡವನ್ನು ಸುಲಭೀಕರಿಸಬೇಕು. ರಂಗಭೂಮಿಗೆ ಸಾಹಿತ್ಯಕಾರರ ಕೊಡುಗೆ ಹೆಚ್ಚಲಿ ಎಂದು ಆಶಯ ವ್ಯಕ್ತಪಡಿಸಿದರು.