ಉತ್ತರ ಕನ್ನಡದ 407 ಜನರಿಗೆ ಕೈಗಾದಲ್ಲಿ ಉದ್ಯೋಗ

ವಿನೋದ ಕುಮಾರ್‌
ವಿನೋದ ಕುಮಾರ್‌
Published on
ಕಾರವಾರ: ಎನ್‌ಪಿಸಿಐಎಲ್ ಭಾರತ ಸರ್ಕಾರದ ನೀತಿ ನಿಯಮಾವಳಿಯಂತೆ ಕಾರ್ಯ ನಿರ್ವಹಿಸುತ್ತಿದ್ದು, ಸ್ಥಳೀಯರಿಗೆ ಉದ್ಯೋಗ ನೀಡಲು ಬದ್ಧವಾಗಿದೆ ಎಂದು ಎನ್‌ಪಿಸಿಐಎಲ್ ಸಿಎಂಡಿ ಭುವನ ಚಂದ್ರ ಪಾಠಕ್ ಹೇಳಿದರು.
ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಸ್ಥಳೀಯರಿಗೆ ಉದ್ಯೋಗ ನೀಡುವಲ್ಲಿ ವಯಸ್ಸಿನಲ್ಲಿ ವಿನಾಯಿತಿ ಸೇರಿ ಇನ್ನೂ ಹಲವು ಸೌಲಭ್ಯಗಳಿವೆ. ಎ ದರ್ಜೆಯ ಅಧಿಕಾರಿಗಳ ನೇಮಕಾತಿ ಪರೀಕ್ಷೆಯನ್ನು ಸರ್ಕಾರವೇ ನಡೆಸುತ್ತದೆ. ಬಿ ದರ್ಜೆಯ ಅಽಕಾರಿ ಗಳ ನೇಮಕಾತಿ ಪರೀಕ್ಷೆಯನ್ನು ನಾವು ಮುಂಬೈನಲ್ಲಿ ನಡೆಸಲಿದ್ದೇವೆ. ಸಿ ಹಾಗೂ ಡಿ ದರ್ಜೆಯ ನೇಮಕಾತಿಗಾಗಿ ಆಯಾ ರಾಜ್ಯಗಳಲ್ಲಿ ನೇಮಕಾತಿ ಪರೀಕ್ಷೆಗಳು ನಡೆಯಲಿವೆ. ಆಸಕ್ತರಿಗೆ ಕೌಶಲ ತರಬೇತಿಯನ್ನು ನಾವು ನೀಡಲು ಸಿದ್ಧರಿದ್ದೇವೆ ಎಂದರು.
ಕೈಗಾ ಅಣು ವಿದ್ಯುತ್ ಕೇಂದ್ರದ ಸ್ಥಳ ನಿರ್ದೇಶಕ ವಿನೋದ ಕುಮಾರ್ ಮಾತನಾಡಿ, ಕೈಗಾ ಅಣು ವಿದ್ಯುತ್ ಕೇಂದ್ರದಲ್ಲಿ 1358 ಕಾಯಂ ನೌಕರರಿದ್ದು, ಅದರಲ್ಲಿ 895 ಜನ ಕರ್ನಾಟಕದವರಿದ್ದಾರೆ. 407 ಜನ ಉತ್ತರ ಕನ್ನಡ ಜಿಲ್ಲೆಯವರಿದ್ದಾರೆ. ನಾವು ಸ್ಥಳೀಯ ಯುವಕ, ಯುವತಿಯರಿಗೆ ನೇಮಕಾತಿಗಾಗಿ ತರಬೇತಿಯನ್ನು ಕಳೆದ ವರ್ಷ ಕಾರವಾರ, ಅಂಕೋಲಾ ಹಾಗೂ ಮಲ್ಲಾಪುರದಲ್ಲಿ ಆಯೋಜಿಸಿದ್ದೆವು. ಅದಕ್ಕೆ ಸುಮಾರು 3 ಸಾವಿರ ಅರ್ಜಿಗಳು ಬಂದಿದ್ದವು. ಆದರೆ, 300 ಜನ ಮಾತ್ರ ತರಬೇತಿಗೆ ಹಾಜರಾದರು. ನೇಮಕಾತಿ ಪರೀಕ್ಷೆಗಳು ಆನ್‌ಲೈನ್ ಸ್ವರೂಪದ್ದಾಗಿದ್ದು, ಅವುಗಳನ್ನು ಮಾಡಲು ಕನಿಷ್ಠ 100 ಕಂಪ್ಯೂಟರ್ ಹೊಂದಿರುವ ವಿದ್ಯಾಲಯಗಳು ನಮಗೆ ಬೇಕಿತ್ತು. ಕಾರವಾರದಲ್ಲಿ ಅದು ಸಿಕ್ಕಿಲ್ಲ. ಇದರಿಂದ ಬೇರೆಡೆ ಇಟ್ಟಿದ್ದೇವೆ ಎಂದರು. ಸಿಎಸ್‌ಆರ್ ನಿಽಯಲ್ಲಿ ಪ್ರತಿ ವರ್ಷ ಸುಮಾರು 12 ಕೋಟಿ ರೂ.ಗಳನ್ನು ಸ್ಥಳೀಯ ಅಭಿವೃದ್ಧಿಗೆ ಬಳಸುತ್ತಿದ್ದೇವೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net