ಭುವನೇಶ್ವರ ಐಐಟಿ ಅಧ್ಯಯನಕ್ಕೆ ಆಯ್ಕೆಯಾದ ಸರ್ಕಾರಿ ಕಾಲೇಜ್‌ ಹುಡುಗ

ಅಕ್ಷಯ ಡಿ.ನಾಯ್ಕ
ಅಕ್ಷಯ ಡಿ.ನಾಯ್ಕ
Published on

ಪ್ರಮುಖ ಮುಖ್ಯಾಂಶಗಳು

  • ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜ್‌ ವಿದ್ಯಾರ್ಥಿ ಐಐಡಿ ಭುವನೇಶ್ವರಕ್ಕೆ ಆಯ್ಕೆಯಾಗಿದ್ದಾರೆ
  • ಜಾಮ್‌ ಪರೀಕ್ಷೆಯಲ್ಲಿ ಗಣಿತ ವಿಷಯದಲ್ಲಿ 686 ನೇ ಶ್ರೇಯಾಂಕ
ಕಾರವಾರ:
ಸರ್ಕಾರಿ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ (ಸ್ವಾಯತ್ತ), ವಿಜ್ಞಾನ ವಿಭಾಗದ ಪ್ರತಿಭಾವಂತ ಬಿ.ಎಸ್.ಸಿ. ಆರನೇ
ಸೆಮಿಸ್ಟರ್ ವಿದ್ಯಾರ್ಥಿಯಾದ ಅಕ್ಷಯ್ ಡಿ. ನಾಯ್ಕ ಅವರು ರಾಷ್ಟ್ರೀಯ ಮಟ್ಟದ ಅತ್ಯಂತ ಸ್ಪರ್ಧಾತ್ಮಕ ಜಂಟಿ ಪ್ರವೇಶ ಪರೀಕ್ಷೆಯಲ್ಲಿ (JAM-
2026) ಅದ್ಭುತ ಸಾಧನೆ ಮಾಡುವ ಮೂಲಕ ಪ್ರತಿಷ್ಠಿತ ಭಾರತೀಯ ತಂತ್ರಜ್ಞಾನ ಸಂಸ್ಥೆ (IIT) ಭುವನೇಶ್ವರದಲ್ಲಿ ಸಮಗ್ರ ಪಿ.ಎಚ್.ಡಿ
(Integrated PhD) ಪದವಿಗೆ ಆಯ್ಕೆಯಾಗುವ ಅಪೂರ್ವ ಸಾಧನೆಯ ಮೂಲಕ ಉತ್ತರ ಕನ್ನಡ ಜಿಲ್ಲೆಗೆ ಹಾಗೂ ಸರ್ಕಾರಿ ಶಿಕ್ಷಣ ಸಂಸ್ಥೆಗೆ
ಕೀರ್ತಿಯನ್ನು ತಂದಿದ್ದಾರೆ.
ಭಾರತೀಯ ತಂತ್ರಜ್ಞಾನ ಸಂಸ್ಥೆ (IITs) ನಡೆಸಿದ ಈ ಕಠಿಣ ರಾಷ್ಟçಮಟ್ಟದ ಪರೀಕ್ಷೆಯಲ್ಲಿ ಅಕ್ಷಯ್ ಅವರು ತಮ್ಮ ಶೈಕ್ಷಣಿಕ
ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ಅವರು ಗಣಿತಶಾಸ್ತ್ರ (JAM Mathematics) ಪತ್ರಿಕೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ 686ನೇ ಶ್ರೇಯಾಂಕ ಹಾಗೂ ಭೌತಶಾಸ್ತ್ರ (JAM Physics) ಪತ್ರಿಕೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ 1,390ನೇ ಶ್ರೇಯಾಂಕ ಪಡೆಯುವ ಮೂಲಕ ದೇಶದ ಗಮನ ಸೆಳೆದಿದ್ದಾರೆ. ಅವರ ಈ ಅಸಾಧಾರಣ ಪ್ರದರ್ಶನ ಮತ್ತು ಶ್ರೇಯಾಂಕದ ಆಧಾರದ ಮೇಲೆ, ಐಐಟಿ ಭುವನೇಶ್ವರವು ಅವರಿಗೆ ಗಣಿತಶಾಸ್ತ್ರ ವಿಷಯದಲ್ಲಿ ಅತ್ಯುನ್ನತ ಸಮಗ್ರ ಪಿಎಚ್‌ಡಿ ಸೀಟನ್ನು ಹಂಚಿಕೆ ಮಾಡಿದೆ.
ಸರ್ಕಾರಿ ಕಾಲೇಜಿನ ವಿದ್ಯಾರ್ಥಿಯೊಬ್ಬರು ರಾಷ್ಟ್ರೀಯ ಮಟ್ಟದ ಐ.ಐ.ಟಿ.ಯಂತಹ ಪ್ರಮುಖ ಸಂಸ್ಥೆಯಲ್ಲಿ ನೇರವಾಗಿ ಸಂಶೋಧನಾ ವಿಭಾಗಕ್ಕೆ ಸೀಟು ಗಿಟ್ಟಿಸಿಕೊಳ್ಳುವುದು ಅತ್ಯಂತ ವಿರಳ ಮತ್ತು ಶ್ಲಾಘನೀಯ ಸಾಧನೆಯಾಗಿದೆ. ಇದು ವಿದ್ಯಾರ್ಥಿ ಅಕ್ಷಯ್ ಅವರ ನಿರಂತರ ಅಧ್ಯಯನ ಶೀಲತೆ, ಕಠಿಣ ಪರಿಶ್ರಮ ಮತ್ತು ಗಣಿತ ಹಾಗೂ ಭೌತಿಕ ವಿಜ್ಞಾನದ ಮೂಲ ಪರಿಕಲ್ಪನೆಗಳ ಮೇಲಿರುವ ಅಪಾರ ಹಿಡಿತಕ್ಕೆ ಸಾಕ್ಷಿಯಾಗಿದೆ.
ಈ ಐತಿಹಾಸಿಕ ಯಶಸ್ಸಿನ ಹಿಂದೆ ಕಾಲೇಜು ಸಂಸ್ಥೆಯ ಮತ್ತು ರಾಜ್ಯ ಸರ್ಕಾರದ ಶೈಕ್ಷಣಿಕ ದೂರದೃಷ್ಟಿಯ ಕೊಡುಗೆಯೂ
ಅಪಾರವಾಗಿದ್ದು, ಕಾಲೇಜಿನ ‘ವೃತ್ತಿ ಮಾರ್ಗದರ್ಶನ ಕೋಶ (Career Guidance Cell) ವತಿಯಿಂದ ವಿದ್ಯಾರ್ಥಿಗಳಿಗಾಗಿಯೇ ವಿಶೇಷವಾಗಿ ಆಯೋಜಿಸಲಾಗಿದ್ದ JAM-2026 ಸಮಗ್ರ ದೃಷ್ಟಿಕೋನ ಮತ್ತು ತರಬೇತಿ ಕಾರ್ಯಕ್ರಮವು ಅಕ್ಷಯ್ ಅವರ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದೆ. ಈ ಕಾರ್ಯಕ್ರಮದ ಮೂಲಕ ಪರೀಕ್ಷೆಯ ನೀಲನಕ್ಷೆ, ಕಾರ್ಯತಂತ್ರದ ಸಿದ್ಧತೆ ಮತ್ತು ಸಂಪನ್ಮೂಲಗಳ ಸೂಕ್ತ ಬಳಕೆ ಕುರಿತು ದೊರೆತ ಮಾರ್ಗದರ್ಶನವು ರಾಷ್ಟçಮಟ್ಟದಲ್ಲಿ ಯಶಸ್ವಿಯಾಗಿ ಸ್ಪರ್ಧಿಸಲು ಅವರಿಗೆ ನೆರವಾಗಿದೆ.
ಅಕ್ಷಯ್ ಡಿ. ನಾಯ್ಕ ಅವರ ಈ ಸಾಧನೆಯು, ಅವರ ಪರಿಶ್ರಮ, ಸಮರ್ಪಣೆ ಮತ್ತು ಶೈಕ್ಷಣಿಕ ಶ್ರೇಷ್ಠತೆಯ ಪ್ರತೀಕವಾಗಿದ್ದು,
ಮಹಾವಿದ್ಯಾಲಯ (ಸ್ವಾಯತ್ತ) ಶೈಕ್ಷಣಿಕ ಗುಣಮಟ್ಟಕ್ಕೂ ಸಾಕ್ಷಿಯಾಗಿದೆ. ಜಿಲ್ಲೆಯ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಮುಂದುವರಿಯಲು ಇದು ಪ್ರೇರಣೆಯಾಗಲಿ ಎಂದು ಕಾಲೇಜಿನ ಪ್ರಾಂಶುಪಾಲರು, ವಿಭಾಗ ಮುಖ್ಯಸ್ಥರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಅಭಿನಂದಿಸಿ, ಮುಂದಿನ ಶೈಕ್ಷಣಿಕ ಹಾಗೂ ಸಂಶೋಧನಾ ಜೀವನಕ್ಕೆ ಶುಭ ಹಾರೈಸಿದ್ದಾರೆ.
ಭುವನೇಶ್ವರದ ಭಾರತೀಯ ತಂತ್ರಜ್ಞಾನ ಸಂಸ್ಥೆ (IIT) ಯಲ್ಲಿ ಸಮಗ್ರ ಪಿ.ಹೆಚ್.ಡಿ ಮಾಡಲು ಅವಕಾಶ ದೊರೆತಿರುವುದು ತುಂಬಾ ಸಂತೋಷವಾಗಿದೆ. ಪಿ.ಹೆಚ್.ಡಿ ಪಡೆದ ನಂತರ ಸಂಶೋಧನಾ ಕ್ಷೇತ್ರದಲ್ಲಿ ವಿಜ್ಞಾನಿಯಾಗಿ ಮುಂದುವರೆಯುವ ಇಚ್ಚೆಯಿದ್ದು, ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋದಲ್ಲಿ ಕೆಲಸ ಮಾಡುವ ಗುರಿ ಹೊಂದಿದ್ದೇನೆ ಎನ್ನುತ್ತಾರೆ ವಿದ್ಯಾರ್ಥಿ ಅಕ್ಷಯ್ ಡಿ. ನಾಯ್ಕ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net