ಯಲ್ಲಾಪುರ: ಉತ್ತಮ ನಡತೆ, ಆದರ್ಶದ ಮೂಲಕ ಮುಂದಿನ ಪೀಳಿಗೆಗೆ ಮಾದರಿಯಾಗುವ ಪ್ರಯತ್ನ ನಮ್ಮಿಂದ ಆಗಬೇಕು ಎಂದು ಹವ್ಯಕ ಮಹಾಸಭಾದ ಅಧ್ಯಕ್ಷ ಡಾ. ಗಿರಿಧರ ಕಜೆ ಹೇಳಿದರು.
ಪಟ್ಟಣದ ಕಾರ್ಮಿಕ ಭವನದಲ್ಲಿ ಅಖಿಲ ಹವ್ಯಕ ಮಹಾಸಭಾದ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಂಸ್ಕಾರೋತ್ಸವದ ಉದ್ಘಾಟನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹವ್ಯಕತನ ಸಂಸ್ಕಾರದ ಜತೆಯಲ್ಲೇ ಇದೆ. (Sanskar) ಸಂಸ್ಕಾರ ಕೇವಲ ಮಕ್ಕಳಿಗೆ ಅನ್ವಯವಾಗುವುದಲ್ಲ. ಎಲ್ಲರಿಗೂ ಸಂಸ್ಕಾರದ ಅಗತ್ಯವಿದೆ. ನಮ್ಮನ್ನು ನಾವು ಜಾಗೃತಗೊಳಿಸಿಕೊಂಡು ಸಮಾಜಕ್ಕೆ ಆದರ್ಶವಾಗಬೇಕು.
ಸಮಾಜದ ಕೆಲಸದಲ್ಲಿ ನಮ್ಮನ್ನು ತೊಡಗಿಸಿಕೊಂಡರೆ ಸಮಾಜದ ಋಣ ತೀರಿಸಲು ಸಾಧ್ಯ ಎಂದರು.
ಸಂಕಲ್ಪ ಸಂಸ್ಥೆ ಅಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, ಹವ್ಯಕ ಸಮಾಜದ ಮೇಲೆ ಆದ ಪರಕೀಯ ದಾಳಿಗಳನ್ನು ಎದುರಿಸಿಯೂ ಆಚರಣೆ, ಸಂಪ್ರದಾಯಗಳನ್ನು ಹವ್ಯಕರು ಬಿಟ್ಟಿಲ್ಲ. ಭಾರತದ ಸಂಸ್ಕೃತಿಯ ಉಳಿವಿನಲ್ಲಿ ಬ್ರಾಹ್ಮಣರ ಪಾತ್ರ ಬಹುಮುಖ್ಯವಾಗಿದೆ.
ಸಾಮಾಜಿಕ ವಿಷಮತೆಯನ್ನು ದಾಟಿ, ಸಂಪ್ರದಾಯಗಳನ್ನು ಉಳಿಸಿಕೊಂಡು ಮುನ್ನಡೆಯುವ ಬಗ್ಗೆ ಚಿಂತನೆಗಳು ನಡೆಯಬೇಕು ಎಂದರು.
ಮಾಜಿ ಸಂಸದ ಅನಂತಕುಮಾರ ಹೆಗಡೆ ಕಾರ್ಯಕ್ರಮ ಉದ್ಘಾಟಿಸಿದರು. ತಾಲೂಕು ಹವ್ಯಕ ಸಂಘದಿಂದ ಗಿರಿಧರ ಕಜೆ ಅವರನ್ನು ಸನ್ಮಾನಿಸಲಾಯಿತು.
ಅಖಿಲ ಹವ್ಯಕ ಮಹಾಸಭಾದ ಉಪಾಧ್ಯಕ್ಷ ಶ್ರೀಧರ ಭಟ್ಟ ಕೆಕ್ಕಾರ, ನಿರ್ದೇಶಕ ಪ್ರಶಾಂತ ಹೆಗಡೆ ಇದ್ದರು. ಪ್ರಸಾದಿನಿ ಭಟ್ಟ ಪ್ರಾರ್ಥಿಸಿದರು.
ಮಹಾಸಭಾದ ನಿರ್ದೇಶಕ ಗೋಪಾಲಕೃಷ್ಣ ಭಟ್ಟ ಹಂಡ್ರಮನೆ, ವೀಣಾ ಹೆಗಡೆ, ರವೀಂದ್ರ ಗಾಂವ್ಕರ, ತಾಲೂಕು ಹವ್ಯಕ ಸಂಘದ ಅಧ್ಯಕ್ಷ ಡಿ.ಶಂಕರ ಭಟ್ಟ, ಸಂಸ್ಕಾರೋತ್ಸವದ ಸಂಚಾಲಕ ಸಣ್ಣಪ್ಪ ಭಾಗ್ವತ ನಿರ್ವಹಿಸಿದರು.
ಸಂಸ್ಕಾರೋತ್ಸವದ ಪ್ರಯುಕ್ತ ವೈದಿಕರಿಂದ ಗಾಯತ್ರಿ ಜಪಾನುಷ್ಠಾನ, ಗಾಯತ್ರಿ ಹವನ, ಮಾತೆಯರಿಂದ ಕುಂಕುಮಾರ್ಚನೆ, ಭಗವದ್ಗೀತಾ ಪಠಣ ನಡೆಯಿತು. ಶಿಕ್ಷಣದಿಂದ ಸಂಸ್ಕಾರ ಜಾಗೃತಿ ವಿಷಯದ ಕುರಿತು ಚಿಂತನ ಗೋಷ್ಠಿ ನಡೆಯಿತು.
ವಿವಿಧ ಗೋಷ್ಠಿ ಉಪನ್ಯಾಸ
ಸಂಸ್ಕಾರೋತ್ಸವದಲ್ಲಿ ವಿವಿಧ ಗೋಷ್ಠಿ, ಉಪನ್ಯಾಸ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಸಂಸ್ಕಾರಗಳ ವೈಜ್ಞಾನಿಕ ಹಿನ್ನೆಲೆ ಕುರಿತು ಖ್ಯಾತ ವಾಗ್ಮಿ ಜಿ.ಎಸ್. ನಟೇಶ, ಷೋಡಶ ಸಂಸ್ಕಾರಗಳ ಕುರಿತು ವಿದ್ವಾಂಸ ವಿದ್ವಾನ್ ಜಗದೀಶ ಶರ್ಮಾ ಸಂಪ, ಭಾರತೀಯ ಯುವ ಸಂಸ್ಕಾರಗಳ ಕುರಿತು ವಾಗ್ಮಿ ರೋಹಿತ ಚಕ್ರತೀರ್ಥ ಉಪನ್ಯಾಸ ನೀಡಿದರು.
ಅರ್ಥಧಾರಿ ವಿದ್ವಾನ್ ಉಮಾಕಾಂತ ಭಟ್ಟ ಅಧ್ಯಕ್ಷತೆಯಲ್ಲಿ ಆಧುನಿಕ ಬದುಕಿಗೆ ಸಂಸ್ಕಾರಗಳ ತಳಹದಿ ಕುರಿತು ವಿದ್ವತ್ ಗೋಷ್ಠಿ ನಡೆಯಿತು.
ಪ್ರಸಿದ್ಧ ಕಲಾವಿದರಿಂದ ಯಕ್ಷ ಗಾನ ನಾಟ್ಯವೈಭವ, ಹಳವಳ್ಳಿಯ ಆಶಾ ಯುವತಿ ಮಂಡಳದವರಿಂದ ಜಾನಪದ ನೃತ್ಯ ಪ್ರದರ್ಶನ ನಡೆಯಿತು.