ರಾಯಣ್ಣ, ಚನ್ನಮ್ಮ ಹೆಸರಿನ (Install a nameplate) ನಾಮಫಲಕ ಅಳವಡಿಸಿ
ಮುಂಡಗೋಡ ಮುಖ್ಯ ರಸ್ತೆಗೆ ನಾಮಫಲಕ, ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ಹಾಗೂ ಶಿರಸಿ- ಹುಬ್ಬಳ್ಳಿ ಮುಖ್ಯ ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚಬೇಕು ಎಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನ ಬಳಗದವರು ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಸುರೇಶ ಗೋಕಾಕ, ಪ್ರಮುಖರಾದ ಅಶೋಕ ಹಾದಿಮನಿ, ಅಯ್ಯಪ್ಪ ಭಜಂತ್ರಿ, ಪ್ರಕಾಶ ಹುದ್ಲಮನಿ, ಇತರರಿದ್ದರು.
Published on:
Copied
Follow Us
ಮುಂಡಗೋಡ: ತಾಲೂಕಿನ ಮುಖ್ಯ ರಸ್ತೆ, ವಾರ್ಡ್‌ಗಳಿಗೆ ಸರಿಯಾದ ನಾಮಘಲಕ (Install a nameplate) ಗಳನ್ನು ಅಳವಡಿಸುವುದು ಮತ್ತು ಮುಖ್ಯ ರಸ್ತೆಯಲ್ಲಿ ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ನೀಡುವುದು ಹಾಗೂ ಶಿರಸಿ-ಹುಬ್ಬಳ್ಳಿ ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚಬೇಕು ಎಂದು ಒತ್ತಾಯಿಸಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನ ಬಳಗದಿಂದ ಮಂಗಳವಾರ ತಹಸೀಲ್ದಾರ್ ಮುಖಾಂತರ ಶಾಸಕರು, ಜಿಲ್ಲಾಧಿಕಾರಿಗಳು ಹಾಗೂ ಲೋಕೋಪಯೋಗಿ ಇಲಾಖೆಗೆ ಪ್ರತ್ಯೇಕ ಮನವಿಗಳನ್ನು ಸಲ್ಲಿಸಲಾಯಿತು.
ಪಟ್ಟಣದ ಬಂಕಾಪುರ ರಸ್ತೆಗೆ ಹಳೆಯ ಕಾಲದಿಂದಲೂ ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರಸ್ತೆ’ ಹಾಗೂ ಹುಬ್ಬಳ್ಳಿ-ಶಿರಸಿ ರಸ್ತೆಗೆ ‘ಕಿತ್ತೂರು ರಾಣಿ ಚನ್ನಮ್ಮ’ ಎಂಬ ಹೆಸರು ಇದ್ದರೂ ಈವರೆಗೂ ಯಾವುದೆ ನಾಮಫಲಕಗಳನ್ನು ಅಳವಡಿಸಿಲ್ಲ. ಹೀಗಾಗಿ ತಾಲೂಕಿನ ಮುಖ್ಯ ರಸ್ತೆಗಳಿಗೆ ಆಯಾ ಹೆಸರುಗಳ ನಾಮಫಲಕಗಳನ್ನು ಅಳವಡಿಸಬೇಕು.
ತಾಲೂಕಿನ ಮುಖ್ಯ ರಸ್ತೆಗಳಿಗೆ ಕ್ರಾಂತಿ ವೀರರ ಹೆಸರುಗಳಿದ್ದರೂ ಮುಖ್ಯ ರಸ್ತೆಗಳಲ್ಲಿ ಕ್ರಾಂತಿ ವೀರರ ಹೆಸರು ಹಾಗೂ ಪ್ರತಿಮೆಗಳು ಇಲ್ಲದಿರುವುದು ಬೇಸರದ ಸಂಗತಿಯಾಗಿದೆ. ಹೀಗಾಗಿ ಪಟ್ಟಣದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರಸ್ತೆಯ ಆಂಜನೇಯ ದೇವಸ್ಥಾನದ ಹತ್ತಿರ ರಾಯಣ್ಣನವರ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಸಂಪೂರ್ಣ ಗುಂಡಿಮಯವಾಗಿ ಮಾರ್ಪಟ್ಟಿರುವ ತಾಲೂಕಿನ ಶಿರಸಿ-ಹುಬ್ಬಳ್ಳಿ ಮುಖ್ಯ ರಸ್ತೆಗಳ ಸಂಚಾರವು ರೋಗಿಗಳು ಹಾಗೂ ವೃದ್ಧರಿಗೆ ಸಾವಿನ ಕುಣಿಕೆಯಂತಾಗಿದೆ. ಗರ್ಭಿಣಿಯರು ಮತ್ತು ಅಪಘಾತ ಸೇರಿದಂತೆ ಇತರ ಅವಘಡಗಳು ಸಂಭವಿಸಿದಾಗ ಗಾಯಗೊಂಡವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಗೆ ರವಾನಿಸಬೇಕಾಗುತ್ತದೆ. ರೋಗಿಗಳು ನಡು ರಸ್ತೆಯಲ್ಲಿ ಸಾವಿಗೆ ಈಡಾದರೆ ಯಾರು ಹೊಣೆ ಎಂದು ಅಭಿಮಾನ ಬಳಗದವರು ಪ್ರಶ್ನಿಸಿದರು.
ಶಿರಸಿ-ಹುಬ್ಬಳ್ಳಿ ರಸ್ತೆಯನ್ನು ಒಮ್ಮೆ ಸಂಬಂಧಪಟ್ಟ ಅಧಿಕಾರಿಗಳು ಗಮನಿಸಿ ಕೂಡಲೇ ಅದರಲ್ಲಿರುವ ಗುಂಡಿಗಳನ್ನು ಮುಚ್ಚಿ ಅನುಕೂಲ ಮಾಡಿಕೊಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನ ಬಳಗ ಸಂಸ್ಥಾಪಕ ಅಧ್ಯಕ್ಷ ಸುರೇಶ ಗೋಕಾಕ, ಪ್ರಮುಖರಾದ ಅಶೋಕ ಹಾದಿಮನಿ, ಅಯ್ಯಪ್ಪ ಭಜಂತ್ರಿ, ಪ್ರಕಾಶ ಹುದ್ಲಮನಿ, ಅರುಣ ಭಜಂತ್ರಿ, ಮಂಜುನಾಥ ಕುರುಬರ, ಪವನ ಬಡಿಗೇರ ಇತರರಿದ್ದರು.