Gokrna ಪಂಚಾಯತಿ ಸಭಾಂಗಣದಲ್ಲಿ ಸ್ಥಳೀಯ ಸ್ವಚ್ಛತೆ ಮತ್ತಿತರ ಪ್ರಮುಖ ಸಮಸ್ಯೆಗಳ ಬಗ್ಗೆ ಕುಮಟಾ ಉಪವಿಭಾಗೀಯ ಅಧಿಕಾರಿ ಪಿ. ಶ್ರವಣಕುಮಾರ ನೇತೃತ್ವದಲ್ಲಿ ತಾಲೂಕಿನ ವಿವಿಧ ಇಲಾಖಾ ಅಧಿಕಾರಿಗಳ ವಿಶೇಷ ಸಭೆ ನಡೆಯಿತು.
ಗೋಕರ್ಣ: ಸರ್ಕಾರಿ ಸೇವೆಗಳ ಮೂಲಕ ಕರ್ತವ್ಯ ನಿಭಾಯಿಸುತ್ತಿರುವ ಎಲ್ಲ ಇಲಾಖೆಗಳು Gokrna ಸ್ವಚ್ಛತೆಯ ಕುರಿತಾದ ಜವಾಬ್ದಾರಿಯನ್ನು ಕೂಡ ನಿರ್ವಹಿಸುವಂತಾಗಬೇಕು.
ಇಲ್ಲಿನ ರಸ್ತೆ ಸುರಕ್ಷೆ, ಬೀಚ್‌ಗಳಲ್ಲಿನ ಚಟುವಟಿಕೆಗಳು ಮತ್ತಿತರ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಸಂಬಂಧಿಸಿದ ಈ ಇಲಾಖೆಗಳು ಸ್ಥಳೀಯ ಪಂಚಾಯಿತಿ ಜತೆ ಸಹಯೋಗ ನೀಡುವಂತಾಗಲಿ ಎಂದು ಕುಮಟಾ ವಿಭಾಗೀಯಾಧಿಕಾರಿ ಪಿ. ಶ್ರವಣ ಕುಮಾರ ತಾಲೂಕಿನ ಎಲ್ಲ ಇಲಾಖೆ ಪ್ರಮುಖರಿಗೆ ಸೂಚನೆ ನೀಡಿದರು.
ರಾಜ್ಯದ ಪ್ರಸಿದ್ಧ ಪ್ರವಾಸಿ ಕೇಂದ್ರ ಮತ್ತು ಯಾತ್ರಾ ಸ್ಥಳ ಗೋಕರ್ಣದ ಸ್ವಚ್ಛತೆ ಸೇರಿ ವಿವಿಧ ಪ್ರಮುಖ ಸಮಸ್ಯೆಗಳ ಬಗ್ಗೆ ಸೋಮವಾರ ಕರೆದಿದ್ದ ತಾಲೂಕು ಅಧಿಕಾರಿಗಳ ಮತ್ತು ಮುಖ್ಯ ಸಂಘಟನೆಗಳ ಪ್ರತಿನಿಧಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಶ್ರಮ ವಿಭಜನೆ: ಗೋಕರ್ಣದ ಬೀಚ್‌ಗಳ ಸ್ವಚ್ಛತೆಯನ್ನು ಪ್ರವಾಸೋದ್ಯಮ ಇಲಾಖೆ ಮತ್ತು ಕರಾವಳಿ ವಲಯ ನಿಯಂತ್ರಣ ಇಲಾಖೆ(ಸಿಆರ್‌ಝಡ್) ನೋಡಿಕೊಳ್ಳಬೇಕು.
ಓಂ ಬೀಚ್‌ನಲ್ಲಿ ಅರಣ್ಯ ಇಲಾಖೆ ವಾಹನ ಶುಲ್ಕ ಆಕರಿಸುತ್ತಿರುವ ಹಿನ್ನೆಲೆಯಲ್ಲಿ ಓಂ ಮತ್ತು ಕುಡ್ಲೆ ಬೀಚ್ ಸ್ವಚ್ಛತೆಯ ಬಗ್ಗೆ ಇಲಾಖೆ ಗಮನ ಹರಿಸಬೇಕು.
ಬಸ್ ನಿಲ್ದಾಣದ ಶುಚಿತ್ವವನ್ನು ಸಾರಿಗೆ ಇಲಾಖೆ ವಹಿಸಿಕೊಂಡು, ಲೋಕೋಪಯೋಗಿ ಇಲಾಖೆಯ ಅಡಿಯಲ್ಲಿ ಬರುವ ಮುಖ್ಯ ರಸ್ತೆಗಳ ನಿರ್ವಹಣೆಯನ್ನು ಪಿಡಬ್ಲಿಯು ವಹಿಸಿಕೊಳ್ಳುವಂತಾಗಬೇಕು ಎಂದು ಎಸಿ ಆದೇಶಿಸಿದರು.
ಸಭೆಯಲ್ಲಿ ಸ್ಥಳೀಯ ಗ್ರಾಪಂ ಸ್ವಚ್ಛತೆ ನಿರ್ವಹಣೆ ಸಂಬಂಧ ಎದುರಿಸುತ್ತಿರುವ ತೊಂದರೆಗಳ ಬಗ್ಗೆ ಕಾರ್ಯದರ್ಶಿ ಮಂಜುನಾಥ ಕೆ. ವಿವರಿಸಿ ಪ್ರವಾಸಿಗರನ್ನು ಆಕರ್ಷಿಸುವ ಐದು ಬೀಚ್‌ಗಳು ಮತ್ತು ಪ್ರಮುಖ ಮೀನುಗಾರಿಕೆ ಬಂದರು ಸೇರಿದಂತೆ ಗ್ರಾಪಂ ಏಳು ಕಿಮೀಗೂ ಹೆಚ್ಚಿನ ವ್ಯಾಪ್ತಿಯನ್ನು ಹೊಂದಿದೆ.
ಆದರೆ ಇದಕ್ಕೆ ತಕ್ಕಂತೆ ಹೆಚ್ಚಿನ ಸ್ವಚ್ಛತಾ ಸಿಬ್ಬಂದಿ, ಕಸ ಸಾಗಿಸುವ ವಾಹನಗಳ ವ್ಯವಸ್ಥೆ ಮತ್ತು ಹೆಚ್ಚಿನ ಅನುದಾನದ ಕೊರತೆಯತ್ತ ಗಮನ ಸೆಳೆದರು.
ಇದೇ ವೇಳೆ ರಸ್ತೆ ಸುರಕ್ಷತೆಯ ದೃಷ್ಟಿಯಿಂದ ದ್ವಿಚಕ್ರ ವಾಹನಗಳನ್ನು ಬಾಡಿಗೆಗೆ ಒದಗಿಸುವವರು ಇಬ್ಬರು ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿಕೊಳ್ಳುವಂತೆ ನೋಡಿಕೊಳ್ಳಬೇಕು.
ಇಲ್ಲಿನ ಏಕಮುಖ ಸಂಚಾರವನ್ನು ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸುವ ಬಗ್ಗೆಯೂ ಕ್ರಮ ಜರುಗಿಸಬೇಕು.ಇಲ್ಲಿನ ಮುಖ್ಯ ರಸ್ತೆಗಳನ್ನು ಅಂಗಡಿ ಮುಗ್ಗಟ್ಟುಗಳು ಆಕ್ರಮಿಸಿಕೊಳ್ಳುತ್ತಿರುವ ದೂರುಗಳಿರುವ ಹಿನ್ನೆಲೆಯಲ್ಲಿ ಮುಖ್ಯ ಮಾರ್ಗಗಳಲ್ಲಿ ಗುರುತು ಹಾಕುವ ಕಾರ್ಯವನ್ನು(ಮಾರ್ಕಿಂಗ್) ಲೋಕೋಪಯೋಗಿ ಹಾಗೂ ಸಂಬಂಧಿಸಿದ ಇಲಾಖೆಗಳು ಕೈಗೊಳ್ಳಬೇಕು.ಎಂದು ಸಭೆಯಲ್ಲಿ ಅವರು ಸೂಚಿಸಿದರು.
ಸಭೆಯಲ್ಲಿ ಭಟ್ಕಳ ಡಿಎಸ್‌ಪಿ ಮಹೇಶ ಕೆ., ಸುಮನಾ ಗೌಡ, ಸಣ್ಣು ಗೌಡ, ಶ್ರೀಧರ ಬೋಮ್ಕರ್, ಮೋಹನ ನಾಯ್ಕ, ಅರಣ್ಯ, ಮಹೇಶ ಮೂಡಂಗಿ ಹಾಗೂ ಬೋಟ್, ಬಾಡಿಗೆ ವಾಹನ ನಡೆಸುವವರು ಮತ್ತಿತರರು ಸಭೆಯಲ್ಲಿದ್ದರು.
ತಾಪಂ ಕಾರ್ಯ ನಿರ್ವಹಣಾಧಿಕಾರಿ ರಾಜೇಂದ್ರ ಭಟ್ಟ ಸ್ವಾಗತಿಸಿದರು.
ಕಾರ್ಯದರ್ಶಿ ಮಂಜುನಾಥ ಕೆ., ಉಪತಹಸೀಲ್ದಾರ್ ಟಿ.ಎಸ್. ಗಾಣಿಗೆರ್, ಕಂದಾಯ ಇಲಾಖೆಯ ಸಂತೋಷ ಶೇಟ್, ಮಂಜಪ್ಪ ಎಚ್., ಮತ್ತಿತರರು ನಿರ್ವಹಿಸಿದರು. ಪಿಡಿಒ ವಿ.ಎ.ಪಟಗಾರ ವಂದಿಸಿದರು.
ಅಕ್ರಮ ರೆಸಾರ್ಟ್ ನಿರ್ಮಾಣ
ನಾಡುಮಾಸ್ಕೇರಿ ಗ್ರಾಪಂ ವ್ಯಾಪ್ತಿಯಲ್ಲಿ ಅಕ್ರಮವಾಗಿ ಬೀಚ್ ಅತಿಕ್ರಮಿಸಿ ರೆಸಾರ್ಟ್ ಮತ್ತಿತರ ಕಟ್ಟಡ ನಿರ್ಮಿಸುತ್ತಿದ್ದರೂ ಕಾನೂನು ಕ್ರಮ ಮುಂದುವರಿಸದೆ ಇರುವ ಬಗ್ಗೆ ಗ್ರಾಪಂ ಅಧ್ಯಕ್ಷ ಈಶ್ವರ ಗೌಡ ಸಭೆಯಲ್ಲಿ ದೂರಿದರು.
ಅತಿಕ್ರಮಣ ಸಂಬಂಧ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿರುವ ಬಗ್ಗೆ ತಹಸೀಲ್ದಾರ್ ಶ್ರೀಕೃಷ್ಣ ಕಾಮ್ಕರ ಸಭೆಗೆ ವಿವರಿಸಿದರು.
ಇಲ್ಲಿನ ಕಾನೂನು ನಿರ್ವಹಣೆ ಮತ್ತಿತರ ವಿವರವನ್ನು ಪೊಲೀಸ್ ಇನಸ್ಪೆಕ್ಟರ್ ಶ್ರೀಧರ ಎಸ್.ಆರ್. ಸಭೆಯ ಮುಂದಿಟ್ಟರು.
ಮುಂದಿನ ತಿಂಗಳಿನಲ್ಲಿ ವಿವಿಧ ಇಲಾಖೆಗಳಿಂದ ಆತನಕ ತೆಗೆದುಕೊಳ್ಳಲಾದ ಕ್ರಮ ಮತ್ತು ಮುಂದಿನ ಕಾರ್ಯಕ್ರಮದ ಬಗ್ಗೆ ಇದೇ ಪ್ರಕಾರದ ಸಭೆ ನಡೆಸುವ ಬಗ್ಗೆ ನಿರ್ಧರಿಸಲಾಯಿತು.