ಸಿದ್ದಾಪುರದ ತಾಪಂ ಸಭಾಂಗಣದಲ್ಲಿ ಆಯೋಜಿಸಿದ್ದ ತಾಲೂಕು ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಶಾಸಕ ಭೀಮಣ್ಣ ನಾಯ್ಕ ಮಾತನಾಡಿದರು. ಕೆ.ಜಿ. ನಾಗರಾಜ, ಎಂ.ಆರ್. ಕುಲಕರ್ಣಿ, ಡಿ.ಆರ್. ನಾಯ್ಕ , ದೇವರಾಜ ಹಿತ್ತಲಕೊಪ್ಪ ಇದ್ದರು.
ಸಿದ್ದಾಪುರ: ಮೂಲ ಸೌಕರ್ಯಗಳು ಕೇವಲ ನಗರ ಭಾಗಕ್ಕೆ ಸೀಮಿತವಾಗಬಾರದು. ಪ್ರತಿ ಗ್ರಾಪಂ ಮಟ್ಟದಲ್ಲಿ ಅಭಿವೃದ್ಧಿ ಆಗಬೇಕು. ಭವಿಷ್ಯದ ಬೇಕು ಬೇಡಗಳನ್ನು ಎಲ್ಲ ಇಲಾಖೆಯ ಅಧಿಕಾರಿಗಳು ಸರಿಯಾಗಿ ವಿವೇಚಿಸಿ, ಸ್ಥಳೀಯರೊಂದಿಗೆ ಚರ್ಚೆ ನಡೆಸಿ ಯೋಜನೆಗಳ ಅನುಷ್ಠಾನಕ್ಕೆ ಮುಂದಾಗಬೇಕು ಎಂದು ಶಾಸಕ ಭೀಮಣ್ಣ ನಾಯ್ಕ ಅಧಿಕಾರಿಗಳಿಗೆ ಸೂಚಿಸಿದರು.
ಸ್ಥಳೀಯ ತಾಪಂ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ತಾಲೂಕು ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಸರ್ಕಾರಕ್ಕೆ ಸರಿಯಾದ ಅಂಕಿ-ಸಂಖ್ಯೆ ನೀಡಿದಾಗ ಮಾತ್ರ ಅಭಿವೃದ್ಧಿ ಸಾಧ್ಯ. ಯಾವುದೇ ಸಮುದಾಯದ ತಾರತಮ್ಯ ಇಲ್ಲದೇ ಎಲ್ಲರಿಗೂ ಸಮಾನ ಸೌಲಭ್ಯ ಸಿಗುವಂತೆ ಮಾಡುವುದು ರಾಜ್ಯ ಸರ್ಕಾರದ ಗುರಿಯಾಗಿದೆ. ಮೂಲ ಸೌಕರ್ಯ ಅಭಿವೃದ್ಧಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ. ಪ್ರತಿಯೊಬ್ಬ ನಾಗರಿಕರಿಗೂ ಸರ್ಕಾರದ ಯೋಜನೆ ಸಿಗಬೇಕು ಎನ್ನುವ ದೃಷ್ಠಿಯಿಂದ ಸರ್ಕಾರ ತಾಲೂಕು ಯೋಜನೆ ಮತ್ತು ಅಭಿವೃದ್ಧಿ ಯೋಜನೆ ರೂಪಿಸಿ ಅನುದಾನ ನೀಡಲು ಮುಂದಾಗಿದೆ. ಸಿದ್ದಾಪುರದಂತಹ ಹಳ್ಳಿಗಾಡಿನ ಅಭಿವೃದ್ಧಿಗೆ ಕೇವಲ 460 ಕೋಟಿಗಳ ಕ್ರಿಯಾ ಯೋಜನೆ ಮಾಡಿರುವುದು ಸಾಕೆ? ಅಧಿಕಾರಿಗಳು ತರಾತುರಿಯಲ್ಲಿ ಏನೋ ಯೋಜನೆ ರೂಪಿಸಿ ತಮ್ಮ ಕೆಲಸದಿಂದ ನುಣುಚಿಕೊಳ್ಳುವ ಪ್ರಯತ್ನ ಮಾಡದೇ ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಬೇಕು ಎಂದರು.
ನನ್ನ ಶಾಸಕತ್ವದಲ್ಲಿ ಈಗಾಗಲೇ ಸಾಕಷ್ಟು ಅನುದಾನ ಮಂಜೂರು ಮಾಡಿಸಿದ್ದು ಸಾಕಷ್ಟು ಅಭಿವೃದ್ಧಿ ಕೆಲಸವಾಗುತ್ತಿದೆ. ಈಗಾಗಲೇ ಸಿದ್ಧಪಡಿಸಿದ ಕರಡು ಯೋಜನೆಗಳನ್ನು ಮತ್ತೋಮ್ಮೆ ಪರಿಶೀಲಿಸಿ ಹೊಸದಾಗಿ ಸಿದ್ಧಪಡಿಸುವಂತೆ ತಿಳಿಸಿದರು.
ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ಜಿ.ನಾಗರಾಜ, ತಹಸೀಲ್ದಾರ್ ಎಂ.ಆರ್.ಕುಲಕರ್ಣಿ, ಶಿರಸಿ ಶೈಕ್ಷಣಿಕ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ (ಆಡಳಿತ) ಡಿ.ಆರ್. ನಾಯ್ಕ ಉಪಸ್ಥಿತರಿದ್ದರು. ತಾಪಂ ಇಒ ದೇವರಾಜ್ ಹಿತ್ತಲಕೊಪ್ಪ ಪ್ರಾಸ್ತಾವಿಕ ಮಾತನಾಡಿದರು. ಸುಬ್ರಹ್ಮಣ್ಯ ಹೆಗಡೆ ನಿರ್ವಹಿಸಿದರು.