ಕುಮಟಾ ಎಪಿಎಂಸಿಗೆ ಮೂಲಸೌಕರ್ಯ ಬರ APMC

ಪಳೆಯುಳಿಕೆಯಾಗಿರುವ APMC ಇ-ಟೆಂಡರ್ ಕಟ್ಟಡ
ಪಳೆಯುಳಿಕೆಯಾಗಿರುವ APMC ಇ-ಟೆಂಡರ್ ಕಟ್ಟಡ
Published on

ಪ್ರಮುಖ ಮುಖ್ಯಾಂಶಗಳು

  • ದರ ನಿಗದಿಗಿಲ್ಲ ಇ-ಟೆಂಡರ್ ವ್ಯವಸ್ಥೆ
  • ಅಡಿಕೆಗೆ ಸೀಮಿತವಾದ ಕುಮಟಾ ಕೃಷಿ ಮಾರುಕಟ್ಟೆ
  • ಅಗತ್ಯ ಕಾಮಗಾರಿಗಳಿಗಿಲ್ಲ ಆದ್ಯತೆ
ಕುಮಟಾ: ಜಿಲ್ಲೆಯ ಕರಾವಳಿ ತಾಲೂಕುಗಳ ರೈತರ ಜೀವನಾಡಿಯಂತಿರುವ ಕುಮಟಾ ಎಪಿಎಂಸಿ (APMC) ರೈತರಿಂದ, ದಲಾಳಿಗಳಿಂದ ವ್ಯಾಪಾರಸ್ಥರಿಂದ ಅತಿಹೆಚ್ಚು ಆದಾಯ ಪಡೆಯುತ್ತಿದ್ದರೂ ಮೂಲಸೌಕರ್ಯಗಳನ್ನು ಒದಗಿಸುವಲ್ಲಿ ಈಗಷ್ಟೇ ಎಚ್ಚೆತ್ತುಕೊಂಡಿರುವ ಸ್ಥಿತಿಯಲ್ಲಿದೆ.
ಸುಮಾರು 10 ಎಕರೆ ವಿಶಾಲ ಪ್ರದೇಶವನ್ನು ಹೊಂದಿರುವ ಎಪಿಎಂಸಿ ಆವಾರದಲ್ಲಿ ಕಟ್ಟಡಗಳಿಗೆ ಬರವಿಲ್ಲ.
ಟಿಎಪಿಸಿಎಂಎಸ್, ಪಿಎಲ್‌ಡಿ ಬ್ಯಾಂಕ್, ಕ್ಯಾಂಪ್ರೋ, ಅಡಕೆ ಸೌಹಾರ್ದ ಸಹಿತ ಹಲವಾರು ಕೃಷಿಕ ಸಂಬಂಧಿ ಕಟ್ಟಡಗಳಿವೆ. ಪ್ರಸ್ತುತ ಎಪಿಎಂಸಿಯಲ್ಲಿ ಅಡಕೆ ವ್ಯಾಪಾರವೊಂದೇ ನಡೆಯುತ್ತಿದ್ದು ವಾರದ ವ್ಯಾಪಾರದ ದಿನಗಳಲ್ಲಿ ಇಲ್ಲಿನ ದಲಾಳಿ ಮತ್ತು ವ್ಯಾಪಾರಸ್ಥರ ಮಳಿಗೆಗಳು ಗಿಜಿಗುಡುತ್ತಿರುತ್ತದೆ.
ಸಂತೆಯ ದಿನವಂತೂ ವಾಹನ ನಿಲುಗಡೆಗೆ ಪರದಾಡುವಂತಾಗುತ್ತದೆ. ದಲ್ಲಾಳಿಗಳಿಗೆ ಅಡಕೆ ರಾಶಿ ಹಾಕಲು ಜಾಗ ಸಾಲದಷ್ಟು ರೈತರ ವಹಿವಾಟು ಇಲ್ಲಿದೆ.
ಆದರೆ ಇ-ಟೆಂಡರ್ ವ್ಯವಸ್ಥೆ ಅಳವಡಿಕೆಯಿಲ್ಲದೇ ಬೆಳಿಗ್ಗೆ ಅಡಕೆ ತಂದ ರೈತ ಸಂಜೆವರೆಗೂ ದರನಿಗದಿಯಾಗದೇ ಕಾಯಬೇಕಾಗುತ್ತದೆ.

ಅಗತ್ಯ ಕಾಮಗಾರಿಗಳಿಗಿಲ್ಲ ಆದ್ಯತೆ

ಸಮರ್ಪಕವಾಗಿ ನೀರು ಹಾಗೂ ಶೌಚಗೃಹ ವ್ಯವಸ್ಥೆ ಇಲ್ಲಿನ ದೊಡ್ಡ ಕೊರತೆ.
ಇದೇ ಕಾರಣಕ್ಕೆ ಮಹಿಳಾ ಸಿಬ್ಬಂದಿಗೆ ಕಡುಕಷ್ಟ ಎದುರಾಗುತ್ತಿದೆ. ದಲ್ಲಾಳಿಗಳಿಗೆ, ವ್ಯಾಪಾರಸ್ಥರಿಗೆ ತಮ್ಮ ಮಳಿಗೆಯಲ್ಲಿ ಕಟ್ಟುನಿಟ್ಟಾಗಿ ಸಿಸಿ ಕ್ಯಾಮರಾ ಅಳವಡಿಸಿಕೊಳ್ಳಲು ಆದೇಶಿಸುವ ಎಪಿಎಂಸಿ ಸಂತೆಕಟ್ಟೆ, ರಸ್ತೆ, ದ್ವಾರಗಳಲ್ಲಿ ಸ್ವತಃ ಸಿಸಿ ಕ್ಯಾಮರಾ ಹಾಕುತ್ತಿಲ್ಲ.
ಆವರಣಗೋಡೆ, ಗೇಟು ಇಲ್ಲ, ಎಪಿಎಂಸಿ ನಟ್ಟನಡುವೆ ಸಾರ್ವಜನಿಕ ರಸ್ತೆಯಿರುವ ಕಾರಣದಿಂದ ಗೋದಾಮುಗಳು ಅಷ್ಟೊಂದು ಸುರಕ್ಷಿತವಾಗಿಲ್ಲ. ಗೋಡಾನ್-ಮಳಿಗೆಗಳು, ರೈತಭವನದ ನಿರ್ವಹಣೆ ಬಗ್ಗೆ ಆಕ್ಷೇಪಗಳಿವೆ.
ಇಲ್ಲಿ ಮೂಲಸೌಕರ್ಯ ಒದಗಿಸುವ ಭರವಸೆಯ ಮೇರೆಗೆ ಗೋಡಾನ್-ಮಳಿಗೆಗಳ ಬಾಡಿಗೆ ಹೆಚ್ಚಿಸಿದ್ದನ್ನು ಸ್ವೀಕರಿಸಿದ್ದೆವು.
ನೀರು-ಶೌಚಗೃಹದಂತಹ ತುರ್ತು ಅಗತ್ಯವನ್ನು ಹಿಂದಿಟ್ಟು ಅನ್ಯ ಕಾಮಗಾರಿಗಳಿಗೆ ಆದ್ಯತೆ ನೀಡಲಾಗಿದೆ. ನಮಗೆ ಬಾಡಿಗೆಗೆ ಗೋದಾಮು, ಮಳಿಗೆ ನೀಡುವ ಬದಲು ಲೀಸ್ ಅಥವಾ ಖರೀದಿಗೆ ನೀಡಿದ್ದರೆ ನಾವೇ ಅಭಿವೃದ್ಧಿ ಪಡಿಸಿಕೊಳ್ಳುತ್ತಿದ್ದೆವು ಎಂಬ ಅಭಿಪ್ರಾಯವೂ ಇದೆ.
ದಶಕದ ಹಿಂದೆ ನಿರ್ಮಿಸಿದ ಇ-ಟೆಂಡರ್ ಸಂಬಂಧಿತ ಕಟ್ಟಡಗಳು ಪಾಳುಬಿದ್ದಿವೆ. ಅವುಗಳ ಸದ್ಬಳಕೆ ಯಾವಾಗ ಎಂಬ ಪ್ರಶ್ನೆ ರೈತರಲ್ಲೂ ಇದೆ.
ಮೂಲ ಸೌಕರ್ಯಗಳ ಅಭಿವೃದ್ಧಿಗೆ ಒತ್ತು: ಎಪಿಎಂಸಿ ಕಾರ್ಯದರ್ಶಿ ರಾಜೇಶ ಎಸ್.ಮೈದರಗಿ ಪ್ರತಿಕ್ರಿಯಿಸಿ, ಎಪಿಎಂಸಿ ಆವಾರದಲ್ಲಿ ಹೊಸದಾಗಿ 8 ಶೌಚಗ್ರಹ ಕಟ್ಟುವುದಕ್ಕೆ ಟೆಂಡರ್ ಕರೆಯಲಾಗುತ್ತಿದೆ. ನೀರಿನ ಬಾವಿ, ಬೋರ್ ವೆಲ್ ಇಲ್ಲವೂ ಇಲ್ಲಿದೆ. ಶುದ್ಧ ಕುಡಿಯುವ ನೀರಿನ ಘಟಕವನ್ನು ಪುನರ್ ಸ್ಥಾಪಿಸಲಾಗಿದೆ.
ಸಂತೆಕಟ್ಟೆಯಿಂದ ಹೆದ್ದಾರಿವರೆಗೆ ಹಾಗೂ ಇತರ ಕಡೆಗಳಲ್ಲಿ ವಿಶಾಲ ಕಾಂಕ್ರೀಟ್ ರಸ್ತೆ ಮಾಡಲಾಗಿದೆ. ಬೀದಿದೀಪ ಅಳವಡಿಸಲಾಗಿದೆ. ಆವರಣ ಗೋಡೆ, ಇನ್ನೊಂದಷ್ಟು ಕಾಂಕ್ರೀಟ್ ರಸ್ತೆಗೆ ಕ್ರಿಯಾಯೋಜನೆ ರೂಪಿಸಲಾಗಿದ್ದು ಸದ್ಯವೇ ಟೆಂಡರ್ ಕರೆಯುತ್ತಿದ್ದೇವೆ.
ಮುಖ್ಯವಾಗಿ ತೂಕ ಮತ್ತು ಖರೀದಿಯಲ್ಲಿ ಅಡಕೆ ಬೆಳೆಗಾರರಿಗೆ ಹಾನಿಯಾಗದಂತೆ ಕಟ್ಟುನಿಟ್ಟಾಗಿ ಕೆಲವೊಂದು ಕ್ರಮಗಳನ್ನು ಜಾರಿಗೆ ತಂದಿದ್ದೇನೆ. ಕಳೆದ ಒಂದೂವರೆ ವರ್ಷದಿಂದ ಹಂತಹಂತವಾಗಿ ಕುಂದುಕೊರತೆಗಳನ್ನು ನೀಗಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ ಎಂದಿದ್ದಾರೆ.
ಇದೆಲ್ಲದರ ನಡುವೆ ಕುಮಟಾ ಎಪಿಎಂಸಿಯ ವಿಶ್ವಾಸಾರ್ಹತೆ ಹಾಗೂ ಅನುಕೂಲದ ಕಾರಣಕ್ಕೆ ಕಾರವಾರದಿಂದ ಭಟ್ಕಳದವರೆಗಿನ ಕರಾವಳಿ ತಾಲೂಕುಗಳ ರೈತರು ಕುಮಟಾ ಎಪಿಎಂಸಿಯನ್ನೇ ತಮ್ಮ ಕೃಷಿ ಉತ್ಪನ್ನದ ವಹಿವಾಟಿಗೆ ಆದ್ಯತೆಯಾಗಿ ಗುರುತಿಸಿಕೊಂಡಿರುವುದಂತೂ ಸತ್ಯ.
ವ್ಯವಸ್ಥೆಗಳು ಇನ್ನೂ ಉತ್ತಮಗೊಂಡು, ಇ-ಟೆಂಡರ್‌ನಂತಹ ವ್ಯವಸ್ಥೆಯನ್ನು ಉತ್ತಮವಾಗಿ ಒದಗಿಸಿದರೆ ಅಡಕೆ ಬೆಳೆಗಾರರಿಗೆ ಹೆಚ್ಚಿನ ಅನುಕೂಲವಾಗುವುದರಲ್ಲಿ ಸಂಶಯವಿಲ್ಲ. ಈ ನಿಟ್ಟಿನಲ್ಲಿ ಎಪಿಎಂಸಿ ಆಡಳಿತದ ಮುತುವರ್ಜಿಯ ನಿರೀಕ್ಷೆ ವ್ಯಕ್ತವಾಗಿದೆ.

ನಮ್ಮ ಎಪಿಎಂಸಿಯಲ್ಲಿ ಅಡಕೆ ವ್ಯಾಪಾರ ಅತ್ಯುತ್ತಮವಾಗಿದ್ದು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಹಾಗೆಯೇ ಎಪಿಎಂಸಿಯೊಳಗಿನ ನಿರ್ವಹಣೆಯೂ ಸಮಗ್ರವಾಗಿ ನಡೆಯುತ್ತಿದೆ. ಆದರೆ ಎಪಿಎಂಸಿ ಕಾಯ್ದೆ ತಿದ್ದುಪಡಿಯನ್ವಯ ಎಪಿಎಂಸಿಯಲ್ಲಿ ಮಳಿಗೆ, ಗೋದಾಮುಗಳನ್ನು ಲೀಸ್ ಅಥವಾ ಖರೀದಿಗೆ ನೀಡುವುದಕ್ಕೆ ಅವಕಾಶ ಇರುವುದಿಲ್ಲ. ಮುಖ್ಯವಾಗಿ ರೈತರ ಅನುಕೂಲಕ್ಕಾಗಿ ತಿಂಗಳ ಹಿಂದೆ ಸನಿಹದ ಕತಗಾಲದಲ್ಲಿ ಇ-ಟೆಂಡರ್ ಆರಂಭಿಸಿದ್ದು ಯಶಸ್ವಿಯಾಗಿದೆ. ಕುಮಟಾದಲ್ಲೂ ಶೀಘ್ರ ಆರಂಭಿಸುವುದಕ್ಕೆ ಆಡಳಿತಾತ್ಮಕ ಹಾಗೂ ತಾಂತ್ರಿಕ ಪ್ರಕ್ರಿಯೆಗಳು ಜಾರಿಯಲ್ಲಿದೆ. ಉಳಿದಂತೆ ಯಾವುದೇ ರೀತಿಯ ಸಮಸ್ಯೆ, ಕುಂದುಕೊರತೆಯ ದೂರುಗಳು ಬಂದರೆ ಕೂಡಲೇ ಸ್ಪಂದಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net