ಸದೃಢ ಇಂದ್ರಿಯಗಳ ಭಾರತೀಯರು ನಿಜವಾದ ಶ್ರೇಷ್ಠರು Chaturmasya

ಗೋಕರ್ಣದ ಅಶೋಕೆಯ ಶ್ರೀರಾಮಚಂದ್ರಾಪುರ ಮಠದ ಗುರುದೃಷ್ಟಿ ಭವನದಲ್ಲಿ 33ನೇ ಅನ್ನಬ್ರಹ್ಮ ಚಾತುರ್ಮಾಸ್ಯ (Chaturmasya)ನಿಮಿತ್ತ ಶುಕ್ರವಾರ ಆಯೋಜಿಸಿದ್ದ ಧರ್ಮಸಭೆಯಲ್ಲಿ ಚಾತುರ್ಮಾಸ್ಯ ವ್ರತನಿಷ್ಠ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಅವರಿಗೆ ರವೀಂದ್ರ ಕೊಡ್ಲೆಕೆರೆ ದಂಪತಿ ಪೂರ್ಣಫಲ ಸಮರ್ಪಿಸಿದರು.
ಗೋಕರ್ಣದ ಅಶೋಕೆಯ ಶ್ರೀರಾಮಚಂದ್ರಾಪುರ ಮಠದ ಗುರುದೃಷ್ಟಿ ಭವನದಲ್ಲಿ 33ನೇ ಅನ್ನಬ್ರಹ್ಮ ಚಾತುರ್ಮಾಸ್ಯ (Chaturmasya)ನಿಮಿತ್ತ ಶುಕ್ರವಾರ ಆಯೋಜಿಸಿದ್ದ ಧರ್ಮಸಭೆಯಲ್ಲಿ ಚಾತುರ್ಮಾಸ್ಯ ವ್ರತನಿಷ್ಠ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಅವರಿಗೆ ರವೀಂದ್ರ ಕೊಡ್ಲೆಕೆರೆ ದಂಪತಿ ಪೂರ್ಣಫಲ ಸಮರ್ಪಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಗುರುದೃಷ್ಟಿ ಭವನದಲ್ಲಿ 33ನೇ ಚಾತುರ್ಮಾಸ್ಯ
  • ರಾಘವೇಶ್ವರ ಶ್ರೀಗಳಿಂದ ಅನ್ನಂ-ಬ್ರಹ್ಮ ಪ್ರವಚನ ಮಾಲಿಕೆ
  • ಹಿತ-ಮಿತ-ಋತು ಸೂತ್ರ ಉಪದೇಶ
ಗೋಕರ್ಣ: ಧನ್ಯಾಃ ಖಲು ತೇ ಮನುಷ್ಯಾಃ ಎ ಭಾರತೇ ನೇಂದ್ರಿಯ ವಿಪ್ರಹೀಣಾಃ॥ ಭಾರತದಲ್ಲಿ ಹುಟ್ಟಿ ಇಂದ್ರಿಯಗಳನ್ನು ಸದೃಢವಾಗಿ ಸಂರಕ್ಷಿಸಿಕೊಂಡ ಮನುಷ್ಯರೇ ನಿಜಕ್ಕೂ ಧನ್ಯರು.
ಭಾರತದಲ್ಲಿನ ಸದೃಢ ಶರೀರಿಗಳನ್ನು ಸ್ವರ್ಗ ಲೋಕದಿಂದ ವೀಕ್ಷಿಸಿದ ದೇವತೆಗಳು ತಮ್ಮ ತಮ್ಮಲ್ಲೇ ಚರ್ಚಿಸಿ ಅಸೂಯೆಯಿಂದ ಈ ಮಾತನ್ನು ಆಡಿದರು ಎನ್ನುವುದನ್ನು ವಿಷ್ಣು ಪುರಾಣ ಉಲ್ಲೇಖಿಸಿದೆ ಎಂದು 33ನೇ ಅನ್ನಬ್ರಹ್ಮ (chaturmasya) ಚಾತುರ್ಮಾಸ್ಯ ವ್ರತನಿಷ್ಠರಾದ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ನುಡಿದರು.
ಶ್ರೀರಾಮಚಂದ್ರಪುರ ಮಠದ ಗುರುದೃಷ್ಟಿ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಅನ್ನಂ-ಬ್ರಹ್ಮ ಪ್ರವಚನ ಮಾಲಿಕೆಯಲ್ಲಿ ಶ್ರೀಗಳು ಆಶೀರ್ವಾದವನ್ನಿತ್ತರು.
ಮಾನವ ಶರೀರ ಎನ್ನುವುದು ಕೈ, ಕಾಲು, ಕಣ್ಣು, ಹೃದಯ, ಮೂತ್ರಪಿಂಡ ಇತ್ಯಾದಿ ಇಂದ್ರಿಯಗಳಿಂದ ಒಡಮೂಡಿದ ಮುತ್ತು, ರತ್ನ, ವಜ್ರ, ವೈಢೂರ್ಯ ಭರಿತ ಖಜಾನೆಯಂತೆ.
ಇವುಗಳಿಗೆ ಬೆಲೆ ಕಟ್ಟಲಾಗದು. ಮನುಷ್ಯರ ಇಂತಹ ಅಮೂಲ್ಯ ಸಂಗತಿಗಳಿಂದ ತುಂಬಿರುವ ಶರೀರ ಸಂಪತ್ತನ್ನು ನೋಡಿದ ದೇವತೆಗಳು ಕೂಡ ನತಮಸ್ತಕರಾದರು! ಎಂದು ವಿಷ್ಣು ಪುರಾಣದ ಮೂಲಕ ಶ್ರೀಗಳು ವರ್ಣಿಸಿದರು.

ಪುಣ್ಯದ ಧನವಿದು

ನಮ್ಮ ಶರೀರವನ್ನು ಶ್ರೀಆದಿಶಂಕರ ಭಗವತ್ಪಾದರು ‘ಮಹತಾ ಪುಣ್ಯ ಪಣ್ಯೇನ’ ಅಂದರೆ ಲೆಕ್ಕಿಸಲಾಗದ ಮಹತ್ತಾದ ಪುಣ್ಯ ಎಂಬ ಹಣದಿಂದ ಪಡೆಯಲಾದ ಅದ್ಭುತ ಯಂತ್ರ ಶರೀರ ಎಂದು ಶ್ರೀಶಂಕರರು ಸಾರಿದರು.
ಕಾರಣ ಮಾನವ ಶರೀರಕ್ಕಿಂತ ದೊಡ್ಡದಾದ ದೈವಿಕ ಕೊಡುಗೆ ಇನ್ನೊಂದಿಲ್ಲ. ಶರೀರ ಸದೃಢವಾಗಿದ್ದರೆ ಪ್ರತಿ ಸ್ವರ್ಗ, ಪ್ರತಿ ಸೃಷ್ಟಿಯನ್ನೇ ಮಾಡಬಹುದು ಎನ್ನುವುದಕ್ಕೆ ಬ್ರಹ್ಮರ್ಷಿ ವಿಶ್ವಾಮಿತ್ರ ಸಾಕ್ಷಿಯಾಗಿದ್ದಾರೆ.
ದೈವದತ್ತವಾದ ಈ ಶರೀರವನ್ನು ಸಂರಕ್ಷಿಕೊಳ್ಳದೆ ಹಾಳು ಗೆಡಹುವುದು ಅತ್ಯಂತ ದೊಡ್ಡ ಪಾಪಕಾರ್ಯ ಎನ್ನಲಾಗಿದೆ! ಎಂದು ಶ್ರೀಗಳು ವಿವರಿಸಿದರು.

ಹಿತ-ಮಿತ-ಋತು ಸೂತ್ರ

ಶರೀರ ಎಂಬ ಭವನವನ್ನು ಸದೃಢವಾಗಿ ನಿಲ್ಲಿಸುವ ಸ್ತಂಭ ಉಪ ಸ್ತಂಭಗಳಲ್ಲಿ ಆಹಾರವೂ ಒಂದು.
ಬೆಲೆ ಕಟ್ಟಲು ಬಾರದ ಇಂತಹ ಶರೀರವನ್ನು ಹಿತ, ಮಿತ ಮತ್ತು ಋತು ಮೀರಿದ ಹೊರಗಿನ ಆಹಾರವನ್ನು ಒಳಗೆ ಬಿಡುವ ಮೂಲಕ ಹಾಳು ಮಾಡಬಾರದು ಎನ್ನುವುದು ಆಯುರ್ವೇದ ಶಾಸ್ತ್ರಜ್ಞ ಮಹರ್ಷಿ ವಾಗ್ಭಟರ ದಿವ್ಯ ಸಂದೇಶವಾಗಿದೆ ಎಂದರು.
ಶ್ರೀಗಳ ಚಾತುರ್ಮಾಸ್ಯ ನಿಮಿತ್ತ ಕ್ಷೇತ್ರದ ಉಪಾಧಿವಂತ ಮಂಡಳದಿಂದ ಸಂಘಟಿತವಾದ ಗುರು ಭಿಕ್ಷಾಸೇವೆ ನಿಮಿತ್ತ ರವೀಂದ್ರ ಕೊಡ್ಲೆಕೆರೆ ದಂಪತಿ ಪೂರ್ಣಫಲವನ್ನು ಶ್ರೀಗಳಿಗೆ ಸಮರ್ಪಿಸಿದರು.
ಉಪಾಧಿವಂತ ಮಂಡಳ ಅಧ್ಯಕ್ಷ ರಮೇಶ ಪ್ರಸಾದ, ವೇ.ಪರಮೇಶ್ವರ ಮಾರ್ಕಾಂಡೆ, ವೇ.ಬಾಲಕೃಷ್ಣ ಜಂಭೆ, ವೇ.ನಾಗಾನಂದ ಪುರಾಣಿಕ ಮಾರಿಗೋಳಿ, ಹಿರಿಯ ಸದಸ್ಯ ವಸಂತರಾಜನ್ ಕೊಡ್ಲೆಕೆರೆ, ವೇ.ಪ್ರಶಾಂತ ಹಿರೇಗಂಗೆ ಮತ್ತಿತರ ಉಪಾಧಿವಂತರು ಪಾಲ್ಗೊಂಡಿದ್ದರು.
ಚಾತುರ್ಮಾಸ್ಯ ಸಂಯೋಜಕ ಅಜಿತ ಗುಡ್ಗೆ, ಶ್ರೀಕೃಷ್ಣ ಶಾಸ್ತ್ರಿ, ಸೌಮ್ಯಾ ಮಧ್ಯಸ್ಥ, ಶ್ರೀವತ್ಸ ಭೀಮನಕೋಣೆ, ದಿನ ಪ್ರಧಾನ ಈಶ್ವರ ಗಾಂವಕರ ದಂಪತಿ ನಿರ್ವಹಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net