ಭಟ್ಕಳದಲ್ಲಿ ವಿರೋಧ ಪಕ್ಷದ ನಾಯಕ (R Ashok) ಆರ್ ಅಶೋಕ ಮುರಿನಕಟ್ಟೆ ಮರುನಿರ್ಮಾಣಕ್ಕೆ ಆಗ್ರಹಿಸಿದರು. ಮಾಜಿ ಶಾಸಕಿ ರೂಪಾಲಿ ನಾಯ್ಕ, ಸುನೀಲ ಹೆಗಡೆ, ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ ಇತರರಿದ್ದರು.
ಭಟ್ಕಳ: ಮುರಿನಕಟ್ಟೆ ವಿವಾದಕ್ಕೆ ಸಂಬಂಧಿಸಿ ರಾಜ್ಯ ಸರ್ಕಾರದ ನಡೆ ಖಂಡನೀಯವಾಗಿದ್ದು, ಹಿಂದೂಗಳ ಭಾವನೆಗಳಿಗೆ ಧಕ್ಕೆ ಉಂಟುಮಾಡುವ ಕೆಲಸ ನಡೆಯುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ R Ashok ಆರೋಪಿಸಿದರು.
ಮುರಿನಕಟ್ಟೆ ಮರು ನಿರ್ಮಾಣಕ್ಕೆ ಆಗ್ರಹಿಸಿ ಶುಕ್ರವಾರ ಆಯೋಜಿಸಿದ್ದ ಬೃಹತ್ ಪ್ರತಿಭಟನೆಯಲ್ಲಿ ಬಾಗವಹಿಸಿ ಅವರು ಮಾತನಾಡಿದರು.
ಅಯೋಧ್ಯೆ ಬಾಬರಿ ಮಸೀದಿಯನ್ನು ಒಡೆದು ರಾಮ ಮಂದಿರ ನಿರ್ಮಾಣ ವೇಳೆ 21 ದಿನ ನಾನು ಅಲ್ಲಿ ಕರಸೇವೆ ಮಾಡಿದ್ದೇನೆ. ನನಗೆ ಒಡೆಯುವುದೂ ಗೊತ್ತು, ಕಟ್ಟುವುದೂ ಗೊತ್ತು ಎಂದು ಎಚ್ಚರಿಸಿದರು.
ಭಟ್ಕಳದಲ್ಲಿ ಅನಾದಿಕಾಲದಿಂದಲೂ ಆರಾಧನೆ ನಡೆಯುತ್ತಿದ್ದ ಮುರಿನಕಟ್ಟೆ ಧ್ವಂಸಗೊಳಿಸಿರುವ ಘಟನೆ ನೋವುಂಟುಮಾಡಿದೆ.
ಈ ವಿಚಾರ ತಿಳಿದ ತಕ್ಷಣ ಪೊಲೀಸ್ ವರಿಷ್ಠಾಧಿಕಾರಿಗೆ ಕರೆ ಮಾಡಿ ಶೀಘ್ರ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದೇನೆ. ಅವರನ್ನು ಬರೀ ಬಂಧಿಸುವದು ಮಾತ್ರವಲ್ಲ ಗಡಿಪಾರು ಮಾಡುವಂತೆ ಸೂಚಿಸಿದ್ದೇನೆ.
ಹಿಂದೂ ಸಮಾಜದ ಭಾವನೆಗಳಿಗೆ ಗೌರವ ನೀಡುವ ಬದಲು ಸರ್ಕಾರ ಮತ್ತು ಆಡಳಿತ ನಿರ್ಲಕ್ಷ್ಯ ವಹಿಸಿರುವುದು ಸರಿಯಲ್ಲ.
ಘಟನೆಯ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.
ಶಾಂತಿಯುತವಾಗಿದ್ದ ಪ್ರದೇಶದಲ್ಲಿ ಕೆಲವರು ದ್ವೇಷದ ವಾತಾವರಣ ಸೃಷ್ಟಿಸಲು ಯತ್ನಿಸುತ್ತಿದ್ದು, ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಲವಾಗಿದೆ ಎಂದು ಟೀಕಿಸಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಧರ್ಮದ ವಿಚಾರದಲ್ಲಿ ಸಮತೋಲನ ಕಾಯ್ದುಕೊಳ್ಳಲು ಸಾಧ್ಯವಾಗಿಲ್ಲ.
ಒಂದು ಸಮುದಾಯದ ತುಷ್ಟೀಕರಣ ನಡೆಯುತ್ತಿದೆ ಎಂಬ ಭಾವನೆ ಜನರಲ್ಲಿ ಮೂಡಿದೆ. ಇದರಿಂದ ಸಮಾಜದಲ್ಲಿ ಅಸಮಾಧಾನ ಹೆಚ್ಚಾಗುತ್ತಿದೆ ಎಂದು ಆರ್. ಅಶೋಕ ಅಭಿಪ್ರಾಯಪಟ್ಟರು.
ದೇಶದ ಏಕತೆ ಮತ್ತು ಸಂಸ್ಕೃತಿಗೆ ಧಕ್ಕೆ ಉಂಟುಮಾಡುವ ಯಾವುದೇ ಪ್ರಯತ್ನವನ್ನು ಜನರು ಒಪ್ಪುವುದಿಲ್ಲ. ನಾವು ಕಾನೂನನ್ನು ಕೈಗೆತ್ತಿಕೊಳ್ಳುವುದಿಲ್ಲ.
ಆದರೆ ಸಮಾಜದ ನಂಬಿಕೆ, ದೇವರು, ಧರ್ಮ ಹಾಗೂ ರಾಷ್ಟ್ರದ ಗೌರವಕ್ಕೆ ಅವಮಾನವಾದರೆ ಅದರ ವಿರುದ್ಧ ಪ್ರಜಾಪ್ರಭುತ್ವದ ಹಾದಿಯಲ್ಲಿ ಹೋರಾಟ ಮುಂದುವರಿಯುತ್ತದೆ ಎಂದು ಅವರು ಎಚ್ಚರಿಸಿದರು.
ಮುರಿನಕಟ್ಟೆ ನಿರ್ಮಾಣಕ್ಕೆ ಒಂದು ತಿಂಗಳು ಸಮಯ ನೀಡುತ್ತೇನೆ. ಅಷ್ಟರಲ್ಲಿ ಆಡಳಿತ ಅದನ್ನು ಕಟ್ಟಿ ಮುಗಿಸಬೇಕು ಇಲ್ಲವಾದರೆ ತಾನೇ ನಿಂತು ಕಟ್ಟಿಸುತ್ತೇನೆ ಎಂದು ಆರ್ ಅಶೋಕ ಗುಡುಗಿದರು.
ಕರ್ನಾಟಕದಲ್ಲೂ 10ಲಕ್ಷ ಬಾಂಗ್ಲಾದೇಶಿಗರು
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರ ಬಂದ ಬಳಿಕ ಬಾಂಗ್ಲಾದೇಶಿಗರನ್ನು ಗಡಿಪಾರು ಮಾಡಲಾಗುತ್ತಿದೆ.
ಕರ್ನಾಟಕದಲ್ಲೂ 10 ಲಕ್ಷ ಬಾಂಗ್ಲಾ ದೇಶಿಯರು ಇದ್ದಾರೆ. ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಬಂದರೆ ಇವರನ್ನೆಲ್ಲ ಗಡಿಪಾರು ಮಾಡಬಹದು.
ಪಶ್ವಿಮ ಬಂಗಾಳ ಮತ್ತು ಬಿಹಾರದಿಂದ ಬಾಂಗ್ಲಾ ವಲಸಿಗರಿಗೆ ಮಮತಾ ಬ್ಯಾನರ್ಜಿ ರೇಶನ್ ಕಾರ್ಡ್, ಪಾಸಪೋರ್ಟ್ ನೀಡುತ್ತಿದ್ದರು.
ಬಿಜೆಪಿ ಸರ್ಕಾರ ಬಂದ ಮೇಲೆ ಅವರನ್ನು ಪುನಃ ಬಾಂಗ್ಲಾ ದೇಶಕ್ಕೆ ಗಡಿಪಾರು ಮಾಡಲಾಗುತ್ತಿದೆ ಎಂದರು.
ಮೆರವಣಿಗೆ
ಆರಂಭದಲ್ಲಿ ಭಟ್ಕಳ ರಿಕ್ಷಾ ನಿಲ್ದಾಣ ಸಮಿತಿಯ ಗಣೇಶೋತ್ಸವ ನಡೆಯುವ ಸ್ಥಳದಿಂದ ಬೃಹತ್ ಪ್ರತಿಭಟನೆ ಆರಂಭವಾಗಿ ಪ್ರವಾಸಿ ಮಂದಿರದ ಮೂಲಕ ತಾಲೂಕು ಆಡಳಿತ ಸೌಧದ ವರೆಗೆ ಸಾಗಿತು.
ನಂತರ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಕಾರ್ಯಕರ್ತರು ಮುರಿನಕಟ್ಟೆ ಮರುನಿರ್ಮಾಣದ ಕುರಿತು ಘೋಷಣೆ ಕೂಗಿದರು.
ಮಾಜಿ ಶಾಸಕ ಸುನೀಲ ನಾಯ್ಕ, ಮಾಜಿ ಸಚಿವ ಶಿವಾನಂದ ನಾಯ್ಕ, ನಿಗಮ ಮಂಡಳಿ ಮಾಜಿ ಅಧ್ಯಕ್ಷ ಗೋವಿಂದ ನಾಯ್ಕ, ಸಂಸದ ಕಾಗೇರಿ ಮುರಿಯನಕಟ್ಟೆ ಮರುನಿರ್ಮಾಣಕ್ಕಾಗಿ ಆಗ್ರಹಿಸಿ ಮಾತನಾಡಿದರು. ಮಾಜಿ ಶಾಸಕಿ ರೂಪಾಲಿ ನಾಯ್ಕ, ಸುನೀಲ ಹೆಗಡೆ, ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ ಇತರರಿದ್ದರು.