ಕ್ಯಾನ್ಸರ್ ತಡೆಗೆ ಎಚ್‌ಪಿವಿ ಲಸಿಕೆ ಸಹಕಾರಿ

ಯಲ್ಲಾಪುರ ತಹಸೀಲ್ದಾರ್ ಕಚೇರಿಯಲ್ಲಿ ತಹಸೀಲ್ದಾರ್ ಚಂದ್ರಶೇಖರ ಹೊಸ್ಮನಿ ಅಧ್ಯಕ್ಷತೆಯಲ್ಲಿ ಶನಿವಾರ ಎಚ್‌ಪಿವಿ ಲಸಿಕೆ ನೀಡುವ ಅಭಿಯಾನದ ಕುರಿತಂತೆ ಅಧಿಕಾರಿಗಳು ಹಾಗೂ ವಿವಿಧ ಸಮಾಜದ ಮುಖಂಡರ ಸಭೆ ನಡೆಯಿತು. ಡಾ.ನರೇಂದ್ರ ಪವಾರ್, ಡಾ.ಗಿರೀಶ, ಕೇಶವ ಚೌಗಲೆ, ರೇಖಾ ನಾಯ್ಕ ಇತರರಿದ್ದರು.
ಯಲ್ಲಾಪುರ ತಹಸೀಲ್ದಾರ್ ಕಚೇರಿಯಲ್ಲಿ ತಹಸೀಲ್ದಾರ್ ಚಂದ್ರಶೇಖರ ಹೊಸ್ಮನಿ ಅಧ್ಯಕ್ಷತೆಯಲ್ಲಿ ಶನಿವಾರ ಎಚ್‌ಪಿವಿ ಲಸಿಕೆ ನೀಡುವ ಅಭಿಯಾನದ ಕುರಿತಂತೆ ಅಧಿಕಾರಿಗಳು ಹಾಗೂ ವಿವಿಧ ಸಮಾಜದ ಮುಖಂಡರ ಸಭೆ ನಡೆಯಿತು. ಡಾ.ನರೇಂದ್ರ ಪವಾರ್, ಡಾ.ಗಿರೀಶ, ಕೇಶವ ಚೌಗಲೆ, ರೇಖಾ ನಾಯ್ಕ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಯಲ್ಲಾಪುರ ತಾಲೂಕು ಆರೋಗ್ಯಾಧಿಕಾರಿ ಡಾ.ನರೇಂದ್ರ ಪವಾರ ಮಾಹಿತಿ
ಯಲ್ಲಾಪುರ: ತಾಲೂಕಿನಲ್ಲಿ 14 ವರ್ಷದ ಹೆಣ್ಣುಮಕ್ಕಳಿಗೆ ಕ್ಯಾನ್ಸರ್ ಬರದಂತೆ ತಡೆಗಟ್ಟುವ ಎಚ್‌ಪಿವಿ ಲಸಿಕೆ ನೀಡುವ ಅಭಿಯಾನದ ಕುರಿತಂತೆ ಅಧಿಕಾರಿಗಳು ಹಾಗೂ ವಿವಿಧ ಸಮಾಜದ ಮುಖಂಡರ ಸಭೆ ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ತಹಸೀಲ್ದಾರ್ ಚಂದ್ರಶೇಖರ ಹೊಸ್ಮನಿ ಅಧ್ಯಕ್ಷತೆಯಲ್ಲಿ ಶನಿವಾರ ನಡೆಯಿತು.
ತಾಲೂಕು ಆರೋಗ್ಯಾಧಿಕಾರಿ ಡಾ.ನರೇಂದ್ರ ಪವಾರ ಮಾತನಾಡಿ, ಲಸಿಕೆ ನೀಡುವ ಕಾರ್ಯ ತಾಲೂಕಿನಲ್ಲಿ ಪ್ರಗತಿಯಲ್ಲಿದ್ದು, ಮುಸ್ಲಿಂ ಸಮುದಾಯದವರು ತಮ್ಮ ಮಕ್ಕಳಿಗೆ ವ್ಯಾಕ್ಸಿನ್ ಕೊಡಿಸಲು ಹಿಂಜರಿಯುತ್ತಿದ್ದಾರೆ. ಲಸಿಕೆ ಪಡೆದರೆ ಮಕ್ಕಳಾಗುವುದಿಲ್ಲ ಎಂಬ ವದಂತಿ ಜಾಲತಾಣದ ಮೂಲಕ ಹರಡಿದೆ. ಅದನ್ನು ನಂಬಿ, ಮಕ್ಕಳಿಗೆ ಲಸಿಕೆ ನೀಡಲು ಮುಂದಾಗುತ್ತಿಲ್ಲ. ಕಿರವತ್ತಿ ಹಾಗೂ ಯಲ್ಲಾಪುರ ಪಟ್ಟಣ ವ್ಯಾಪ್ತಿಯಲ್ಲಿ ಲಸಿಕೆ ಪಡೆಯಲು ಹಿಂದೇಟು ಹಾಕಲಾಗುತ್ತಿದೆ ಎಂದು ವಿವರಿಸಿದರು.
ಎಚ್‌ಪಿವಿ ಲಸಿಕೆ ಸುರಕ್ಷಿತವಾದದ್ದು. ಇದನ್ನು ಪಡೆದರೆ ಹೆಣ್ಣುಮಕ್ಕಳಿಗೆ ಕ್ಯಾನ್ಸರ್ ಬಾರದಂತೆ ತಡೆಗಟ್ಟಬಹುದು. ಇದರಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲ ಎಂದು ಮಾಹಿತಿ ನೀಡಿದರು.
ಡಾ.ಗಿರೀಶ ಮಾತನಾಡಿ, ಲಸಿಕೆಯ ಕುರಿತು ಯಾವುದೇ ಭಯ ಬೇಡ, ಇದು ವೈರಾಣುಗಳ ವಿರುದ್ಧ ಹಾಕುವ ಲಸಿಕೆ. ಹೆಣ್ಣುಮಕ್ಕಳಲ್ಲಿ ಗರ್ಭಕಂಠ, ಸ್ತನ ಕ್ಯಾನ್ಸರ್ ತಡೆಯಲು ಈ ಲಸಿಕೆ ಸಹಕಾರಿಯಾಗಿದೆ. ಇದನ್ನು ಪಡೆದರೆ ಕ್ಯಾನ್ಸರ್ ಬರುವುದನ್ನು ಶೇ. 92ರಷ್ಟು ತಡೆಗಟ್ಟಲು ಸಾಧ್ಯ. ಈಗಾಗಲೇ ತಾಲೂಕಿನಲ್ಲಿ 375 ಮಕ್ಕಳಿಗೆ ಲಸಿಕೆ ಹಾಕಿದ್ದು, ಯಾರಿಗೂ ಅಡ್ಡ ಪರಿಣಾಮಗಳಾಗಿಲ್ಲ. ಅಡ್ಡ ಪರಿಣಾಮಗಳಾಗುವುದಾದಲ್ಲಿ ಸರ್ಕಾರ ಅಂತಹ ಲಸಿಕೆಗಳನ್ನು ನೀಡಲು ಮುಂದಾಗುವುದಿಲ್ಲ ಎಂದರು.
ತಹಸೀಲ್ದಾರ್ ಚಂದ್ರಶೇಖರ ಹೊಸ್ಮನಿ ಮಾತನಾಡಿ, ಮುಸ್ಲಿಂ ಸಮುದಾಯದವರಲ್ಲಿ ಲಸಿಕೆ ಕುರಿತು ಜಾಗೃತಿ ಮೂಡಿಸಿ, ಹೆಣ್ಣುಮಕ್ಕಳು ಲಸಿಕೆಯಿಂದ ವಂಚಿತರಾಗದಂತೆ ಮಾಡುವ ಅಗತ್ಯವಿದೆ ಎಂದರು.
ಇದಕ್ಕೆ ಮುಸ್ಲಿಂ ಸಮುದಾಯದ ಮುಖಂಡರು ಪ್ರತಿಕ್ರಿಯಿಸಿ, ಜಾಲತಾಣಗಳ ಮೂಲಕ ಹಬ್ಬಿದ ಸುಳ್ಳು ಸುದ್ದಿಯಿಂದ ಈ ಅವಾಂತರ ಆಗಿದೆ. ತಜ್ಞ ವೈದ್ಯರ ಮೂಲಕ ಸಮುದಾಯದವರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಜಮಾತ್‌ಗಳ ಮೂಲಕ ಮಾಡುತ್ತೇವೆ. ಅಗತ್ಯವಿದ್ದಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳ ಸಹಕಾರವನ್ನೂ ಪಡೆಯುತ್ತೇವೆ ಎಂದರು.
ಪಪಂ ಮುಖ್ಯಾಧಿಕಾರಿ ಕೇಶವ ಚೌಗಲೆ, ತಾಪಂ ಯೋಜನಾಧಿಕಾರಿ ರಾಘವ, ಬಿಇಒ ರೇಖಾ ನಾಯ್ಕ, ಪಿಎಸ್‌ಐ ಎಸ್.ವಿ. ಚೌಹಾಣ, ಸಮಾಜ ಕಲ್ಯಾಣ ಇಲಾಖೆಯ ನಾಗೇಶ ಮಲಮೇತ್ರಿ, ಸಿಡಿಪಿಒ ಶ್ರೀದೇವಿ ಪಾಟೀಲ, ಆರೋಗ್ಯ ಇಲಾಖೆಯ ಮಹೇಶ ತಾಳಿಕೋಟಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net