ಅಸ್ಪತ್ರೆ ಸೇವೆಯೂ ಮೇಲ್ದರ್ಜೆಗೇರಲಿ Hospital

ಆಸ್ಪತ್ರೆ (Hospital) ಕುರಿತ ದಾಖಲೆಗಳನ್ನು ಅನಂತಮೂರ್ತಿ ಹೆಗಡೆ ಪ್ರದರ್ಶಿಸಿದರು. ಉಷಾ ಹೆಗಡೆ, ಆನಂದ ಸಾಲೇರ, ರಮೇಶ ನಾಯ್ಕ ಇತರರಿದ್ದರು.
ಆಸ್ಪತ್ರೆ (Hospital) ಕುರಿತ ದಾಖಲೆಗಳನ್ನು ಅನಂತಮೂರ್ತಿ ಹೆಗಡೆ ಪ್ರದರ್ಶಿಸಿದರು. ಉಷಾ ಹೆಗಡೆ, ಆನಂದ ಸಾಲೇರ, ರಮೇಶ ನಾಯ್ಕ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅನಂತಮೂರ್ತಿ ಹೆಗಡೆ ಆಗ್ರಹ
  • ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ
  • ಆಸ್ಪತ್ರೆಯು ಮೂಲ ಸ್ವರೂಪದಲ್ಲಿಯೇ ಕಾರ್ಯ ನಿರ್ವಹಿಸುವಂತಾಗಬೇಕು
ಶಿರಸಿ: ನಗರದಲ್ಲಿ ಜಿಲ್ಲಾ ಆಸ್ಪತ್ರೆ (Hospital) ಮಾಡುವ ಸಲುವಾಗಿ ವಿಶ್ವೇಶ್ವರ ಹೆಗಡೆ ಕಾಗೇರಿ ಶಾಸಕರಾಗಿದ್ದ ಅವಧಿಯಲ್ಲಿ 112 ಕೋಟಿ ರೂ. ಮಂಜೂರು ಮಾಡಿಸಿ ಕಟ್ಟಡ ನಿರ್ಮಾಣ ಆರಂಭಿಸಲಾಗಿತ್ತು. ಅದು ಈಗ ಪೂರ್ಣಗೊಂಡಿದೆ.
ಆದರೆ, ಈಗ 30 ಕೋಟಿ ರೂ. ಯಂತ್ರೋಪಕರಣಗಳಿಗೆ ಹಣ ಬಿಡುಗಡೆ ಆಗಬೇಕಿತ್ತಾದರೂ ಶಾಸಕ ಭೀಮಣ್ಣ ನಾಯ್ಕ ಅವರ ನಿರ್ಲಕ್ಷ್ಯದಿಂದಾಗಿ ತಾಲೂಕು ಆಸ್ಪತ್ರೆ ಎಂದು ಪರಿಗಣಿತವಾಗಿ 5.20 ಕೋಟಿ ರೂ. ಮಾತ್ರ ಬಿಡುಗಡೆ ಆಗಿದೆ.
ಆಸ್ಪತ್ರೆಯು ಮೂಲ ಸ್ವರೂಪದಲ್ಲಿಯೇ ಕಾರ್ಯ ನಿರ್ವಹಿಸುವಂತಾಗಬೇಕು ಎಂಬ ಬಗ್ಗೆ ಈಗಾಗಲೇ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಿದ್ದೇನೆ ಎಂದು ಹೋರಾಟಗಾರ, ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅನಂತಮೂರ್ತಿ ಹೆಗಡೆ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ಅಸ್ಪತ್ರೆ ಉದ್ದೇಶಿತ ರೂಪದಲ್ಲೇ ಆರಂಭಿಸಿದರೆ ಅದರ ಗೌರವ ಕಾಗೇರಿಯವರಿಗೆ ಸಲ್ಲುತ್ತದೆ ಎಂದು ಹಾಲಿ ಶಾಸಕರು ಭಾವಿಸಿದಂತಿರಬೇಕು.
ಸರ್ಕಾರಿ ಆಸ್ಪತ್ರೆಗೆ ಬರುವವರು ಬಡವರೇ ಆಗಿದ್ದು, ಅವರಿಗೆ ಸಿಗಬೇಕಾದ ಸೌಲಭ್ಯಗಳನ್ನು ವಂಚಿಸುವ ಕಾರ್ಯ ಮಾಡಬಾರದು.
ಈ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಉದ್ದೇಶಿತ ಅನುದಾನ ಬಿಡುಗಡೆಗೊಳಿಸಿ ಎಂದು ನಾನು ಉಪವಾಸ ಸತ್ಯಾಗ್ರಹವನ್ನೂ ಸಹ ನಡೆಸಿದ್ದೇನೆ. ಆದರೆ, ಬಡ ರೋಗಿಗಳಿಗೆ ಅನ್ಯಾಯವಾಗುತ್ತಿದೆ.
ಕಾರ್ಡಿಯಾಲೋಜಿ, ನ್ಯೂರೊಲೋಜಿ, ನ್ರೆೋಲೋಜಿ ಸೇರಿದಂತೆ ವಿವಿಧ ಸೌಲಭ್ಯಗಳು 2020ರಲ್ಲಿ ಅನುಮೋದನೆಗೊಂಡಿವೆ.
ಆಸ್ಪತ್ರೆ ಆದೇಶ ಪ್ರತಿಯಲ್ಲಿಯೇ ಕಟ್ಟಡ ಕೆಲಸ ಶೇ. 80ರಷ್ಟು ಪೂರ್ಣಗೊಂಡ ಬಳಿಕ ವೈದ್ಯರ, ಸಿಬ್ಬಂದಿ ನೇಮಕಾತಿ ಮಾಡಿಕೊಳ್ಳಬೇಕಲ್ಲದೇ, ಯಂತ್ರೋಪಕರಣಗಳಿಗೆ ಟೆಂಡರ್ ಕರೆಯಬೇಕು ಎಂದಿದೆ.
ಆಸ್ಪತ್ರೆಗೆ 107 ಹೊಸ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಬೇಕಾಗಿತ್ತಾದರೂ, ಈಗ 37 ಸಿಬ್ಬಂದಿ ನೇಮಕ ಮಾಡಿಕೊಳ್ಳಲು ಆದೇಶ ಬಂದಿದೆ.
ಅಲ್ಲದೇ ಸಾಮಾನ್ಯ ಆಸ್ಪತ್ರೆಗೆ ಅಗತ್ಯವಿರುವ ಸಿಬ್ಬಂದಿ ಮಾತ್ರ ಮಂಜೂರಾಗಿದ್ದಾರೆ ಹೊರತೂ 15 ಕೋಟಿ ರೂ. ಎಂಆರ್‌ಐ ಸಲಕರಣೆ ಹಾಗೂ ಎರಡು ಕೋಟಿ ರೂ. ಮೌಲ್ಯದ ಸಿಟಿ ಸ್ಕಾೃನ್ ಯಂತ್ರೋಪಕರಣ ಸೇರಿದಂತೆ ಯಾವುದೂ ಮಂಜೂರಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಆರೋಗ್ಯ ಸಚಿವರಾಗಿದ್ದ ದಿನೇಶ ಗುಂಡುರಾವ್ ಎರಡು ಬಾರಿ ಶಿರಸಿಗೆ ಆಗಮಿಸಿ, ಪಂಡಿತ ಸಾರ್ವಜನಿಕ ಆಸ್ಪತ್ರೆಯನ್ನು ಜಿಲ್ಲಾ ಆಸ್ಪತ್ರೆಯನ್ನಾಗಿ ಮಾಡುತ್ತೇವೆ ಎಂದಿದ್ದರು.
ಆದರೆ, ಜಿಲ್ಲಾ ಆಸ್ಪತ್ರೆಯಾಗಿಸುವ ಯಾವ ಪ್ರಯತ್ನಗಳೂ ಆಗಿಲ್ಲ. ಜಿಲ್ಲೆಗೆ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ ಆಗಬೇಕು ಎಂಬ ಹೋರಾಟ ಬಹು ದಿನಗಳದ್ದಾಗಿದೆ.
ತುರ್ತು ಸಂದರ್ಭದಲ್ಲಿ ಹುಬ್ಬಳ್ಳಿ ಹಾಗೂ ಮಂಗಳೂರಿಗೆ ಹೋಗುವುದು ತಪ್ಪಬೇಕು ಎಂಬ ಉದ್ದೇಶದಿಂದ ಆಸ್ಪತ್ರೆ ಮಂಜೂರು ಮಾಡಿದ್ದರೂ ಜನತೆ ಹೊರ ಜಿಲ್ಲೆಗೆ ಹೋಗುವುದು ತಪ್ಪಿಲ್ಲ.
ಮಾರ್ಗ ಮಧ್ಯೆ ಸಾವಿಗೀಡಾಗುವುದು ನಡೆದೇ ಇದೆ. ಆಸ್ಪತ್ರೆ ಕಟ್ಟಡ ಮಾತ್ರ ಮೇಲ್ದರ್ಜೆಗೆ ಏರಿದರೆ ಸಾಲುವುದಿಲ್ಲ. ಸೇವೆಯೂ ಸಹ ಮೇಲ್ದರ್ಜೆಗೆ ಏರಬೇಕು. ಜನರ ನಿರೀಕ್ಷೆಗಳು ನಿರಾಸೆಯಾಗಿ ಪರಿವರ್ತನೆ ಆಗುವ ಅಪಾಯ ಈಗ ಉಂಟಾಗಿದೆ ಎಂದರು.
ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷೆ ಉಷಾ ಹೆಗಡೆ, ಬನವಾಸಿ ಘಟಕದ ಅಧ್ಯಕ್ಷ ರಮೇಶ ನಾಯ್ಕ ಕುಪ್ಪಳ್ಳಿ, ರಾಘವೇಂದ್ರ ನಾಯ್ಕ, ಆನಂದ ಸಾಲೇರ, ನಾಗರಾಜ ನಾಯ್ಕ, ರವಿ ಗಾಂವಕರ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net