ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಮಾಡಿದರಿಗಿಲ್ಲ ಗೌರವಧನ

ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಯ ಸ್ಟಿಕ್ಕರ್‌
ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಯ ಸ್ಟಿಕ್ಕರ್‌
Published on
ಸುಭಾಸ ಧೂಪದೊಂಡ ಕಾರವಾರ: ಏಪ್ರಿಲ್ 1 ರಿಂದ ಜನಗಣತಿ ನಡೆಸಲು ಸಿದ್ಧತೆ ನಡೆದಿದೆ. ಆದರೆ, ಹಿಂದೆ ನಡೆಸಿದ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ಗೌರವಧನವೇ ಇದುವರೆಗೂ ಸಮರ್ಪಕವಾಗಿ ಪಾವತಿಯಾಗಿಲ್ಲ ಇದರಿಂದ ಗಣತಿ ನಡೆಸಿದ ಶಿಕ್ಷಕರು ಅಸಮಾಧಾನಗೊಂಡಿದ್ದಾರೆ.
ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಅಕ್ಟೋಬರ್ 22 ರಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆದಿತ್ತು. ಜಿಲ್ಲೆಯ 4.31 ಲಕ್ಷ ಮನೆಗಳಿಗೆ ಗಣತಿದಾರರಾಗಿ ನಿಯೋಜನೆಗೊಂಡಿದ್ದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಶಿಕ್ಷಕರು ತೆರಳಿ ಸಮೀಕ್ಷೆ ಕೈಗೊಂಡಿದ್ದರು.
ಜಿಲ್ಲೆಯಲ್ಲಿ ಒಟ್ಟು 3,923 ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರು ಹಾಗೂ 236 ಇತರ ಇಲಾಖೆಗಳ ನೌಕರರು ಮನೆಗಳಿಗೆ ತೆರಳಿ ಮೊಬೈಲ್ ಆ್ಯಪ್‌ನಲ್ಲಿ ಮಾಹಿತಿ ಕಲೆ ಹಾಕಿದ್ದರು. ಅವರಿಗೆ ಒಟ್ಟಾರೆ 5 ಸಾವಿರ ರೂ. ಗೌರವ ಧನ ಹಾಗೂ ಮನೆಗಳಿಗೆ ಇಂತಿಷ್ಟು ಎಂದು ಗಣತಿ ವೆಚ್ಚ ನೀಡಲಾಗುವುದು ಎಂದು ಆಯೋಗ ಘೋಷಣೆ ಮಾಡಿತ್ತು. ಪ್ರತಿ ಗಣತಿದಾರರಿಗೆ 80 ರಿಂದ 150 ಮನೆಗಳನ್ನು ಹಂಚಿಕೆ ಮಾಡಲಾಗಿತ್ತು. ಅಕ್ಟೋಬರ್ ರಜೆ, ದೀಪಾವಳಿ ರಜೆಗಳನ್ನು ಬಿಟ್ಟು ಸಮೀಕ್ಷೆಯಲ್ಲಿ ತೊಡಗಿದ್ದ ಶಿಕ್ಷಕರಿಗೆ ಸುಮಾರು 20 ಸಾವಿರ ರೂ. ಗೌರವ ಧನ ಸಿಗಲಿದೆ ಎಂದು ಹೇಳಲಾಗಿತ್ತು.

ಎಷ್ಟು ಹಣ..?

ಫೆಬ್ರವರಿ ತಿಂಗಳಲ್ಲಿ ಜಿಲ್ಲೆಯಲ್ಲಿ ಹಲವು ಗಣತಿದಾರ ಬ್ಯಾಂಕ್ ಖಾತೆಗಳಿಗೆ ಹಣ ಜಮಾ ಆಗಿದೆ. ಗಣತಿ ಕಾರ್ಯ ಮಾಡಿದ್ದಕ್ಕೆ 2 ಸದಸ್ಯರಿರುವ ಮನೆಗೆ ತಲಾ 50 ರೂ. ಹಾಗೂ 3 ಹಾಗೂ ಅದಕ್ಕಿಂತ ಹೆಚ್ಚು ಸದಸ್ಯರಿರುವ ಮನೆಗಳಿಗೆ ತಲಾ 100 ರೂ. ಲೆಕ್ಕ ಹಾಕಿ ಗೌರವಧನ ನೀಡಲಾಗಿದೆ ಎಂಬ ಮಾಹಿತಿ ಇದೆ. ಆದರೆ, 10 ರಿಂದ 15 ಸದಸ್ಯರಿದ್ದ ಮನೆಗಳಿಗೂ 100 ರೂ. ಮಾತ್ರ ಪಾವತಿಸಿರುವುದಕ್ಕೆ ಗಣತಿದಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ತಾವು ಮಾಡಿದ ಮನೆಗಳ ಸಮೀಕ್ಷೆಗೂ ಜಮಾ ಆದ ಹಣಕ್ಕೂ ತಾಳೆಯಾಗುತ್ತಿಲ್ಲ ಎಂದು ಕೆಲವು ಶಿಕ್ಷಕರು ಅಸಮಾಧಾನ ಹೊರ ಹಾಕಿದ್ದಾರೆ.

ಹಲವರಿಗೆ ಜಮಾ ಆಗಿಲ್ಲ:

ಹಲವು ಗಣತಿದಾರರಿಗೆ ಮಾ.3 ರವರೆಗೂ ತಲಾ 5 ಸಾವಿರ ರೂ. ಗೌರವಧನ ಜಮಾ ಆಗಿಲ್ಲ ಎಂಬ ಮಾಹಿತಿಯನ್ನು ಹಂಚಿಕೊAಡಿದ್ದಾರೆ. ಇನ್ನೂ ಕೆಲವರಿಗೆ ಮನೆಗಳ ಸಮೀಕ್ಷೆ ಮಾಡಿದ ಹಣವೂ ಜಮಾ ಆಗಿಲ್ಲ ಎಂಬ ದೂರಿದೆ. ಇದನ್ನು ಕೇಳಲು ಹೋದರೆ ಸುಪ್ರವೈಸರ್‌ಗಳು ಸ್ಪಂದಿಸುತ್ತಿಲ್ಲ. ನಾವು ನೇರವಾಗಿ ಹಿರಿಯ ಅಽಕಾರಿಗಳನ್ನು ಹೇಗೆ ಸಂಪರ್ಕಿಸಲು ಸಾಧ್ಯ ಎಂಬುದು ಗಣತಿದಾರರ ಅಭಿಪ್ರಾಯ.

ಹಲವು ಗೊಂದಲ

ಗಣತಿಯ ಸಂದರ್ಭದಲ್ಲಿ ಮನೆಗಳ ಹಂಚಿಕೆಯಲ್ಲಿಯೂ ಹಲವು ಗೊಂದಲ ಉಂಟಾಗಿತ್ತು. ಪಟ್ಟಿಯಲ್ಲಿರುವ ಮನೆಗಳೇ ಸಿಗದೇ ಗಣತಿದಾರರು ಗೊಂದಲಕ್ಕೀಡಾಗಿದ್ದರು. ಮನೆಗಳಿಗೆ ಹತ್ತಾರು ಬಾರಿ ತೆರಳಿ ಗಣತಿದಾರರು ಜನರಿಂದ ಬೈಸಿಕೊಂಡ ಬಂದ ಉದಾಹರಣೆಯೂ ಸಾಕಷ್ಟಿತ್ತು. ಇಷ್ಟೆಲ್ಲ ಸಮಸ್ಯೆಗಳನ್ನು ಸಹಿಸಿಕೊಂಡ ನಂತರವೂ ಗೌರವಧನ ಪಾವತಿಯಲ್ಲಿ ನಿರ್ಲಕ್ಷ÷್ಯ ತೋರಿರುವ ಬಗ್ಗೆ ಶಿಕ್ಷಕರು ಬೇಸರ ವ್ಯಕ್ತಪಡಿಸಿದ್ದಾರೆ.
"

ತಹಸೀಲ್ದಾರರು ಹಾಗೂ ಬಿಇಒಗಳಿಂದ ಪಟ್ಟಿ ತರಿಸಿಕೊಂಡು ಎಲ್ಲ ಗಣತಿದಾರರಿಗೆ ಹಣ ಪಾವತಿ ಮಾಡಿ, ಯುಸಿಯನ್ನೂ ಕಳಿಸಿದ್ದೇವೆ. ಯಾರೂ ಕೈ ಬಿಟ್ಟ ಬಗ್ಗೆ ನನಗೆ ಒಂದೂ ದೂರು ಬಂದಿಲ್ಲ. ಎಷ್ಟು ಜನರಿಗೆ ಪಾವತಿ ಮಾಡಿದ್ದೇವೆ. ಎಷ್ಟು ಗಣತಿದಾರರಿದ್ದರು ಎಂಬ ಮಾಹಿತಿ ನನ್ನ ಬಳಿ ಇಲ್ಲ ಡಿಸಿ ಅವರನ್ನು ಕೇಳಬೇಕು. ಶಿವಕ್ಕ ಮಾದರ್ ಹಿಂದುಳಿದ ವರ್ಗಗಳ ಇಲಾಖೆ ಉಪ ನಿರ್ದೇಶಕಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net