ಬಾಲಕಿಯ ಮಾನಭಂಗಕ್ಕೆ ಯತ್ನಿಸಿದ ಆರೋಪಿ ಅಂದರ್ pocso

ಸಾಂದರ್ಭಿಕ ಚಿತ್ರ.
ಸಾಂದರ್ಭಿಕ ಚಿತ್ರ.
Published on
ಹೊನ್ನಾವರ: ತಾಲೂಕಿನ ಹೊಸಾಕುಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂತೆಗುಳಿಯಲ್ಲಿ ಬಾಲಕಿಯ ಮಾನಭಂಗಕ್ಕೆ ಯತ್ನಿಸಿದ ವ್ಯಕ್ತಿಯನ್ನು ಪೊಲೀಸರು ಇತ್ತೀಚೆಗೆ ಬಂಧಿಸಿದ್ದಾರೆ. ಸಂತೆಗುಳಿಯ ಸಂದೀಪ ಮೊಗೇರ (38) ಬಂಧಿತ ಆರೋಪಿ. ಈತ ವಿವಾಹಿತನಾಗಿದ್ದು, ಬಾಲಕಿಯು ಮನೆಯಲ್ಲಿ ಒಬ್ಬಳೇ ಇರುವುದನ್ನು ಗಮನಿಸಿ, ಮನೆಗೆ ನುಗ್ಗಿ ಬಾಲಕಿಯ ಬಾಯಿಗೆ ಬಟ್ಟೆ ಕಟ್ಟಿ ಬಲಾತ್ಕಾರ ನಡೆಸಲು ಯತ್ನಿಸಿದ್ದ. ಈ ವೇಳೆ ಸ್ಥಳಿಯರು ಗಮನಿಸಿ ಬರುತ್ತಿದ್ದಂತೆ ನಾಪತ್ತೆಯಾಗಿದ್ದ. ಘಟನೆಯ ಬಗ್ಗೆ ಕುಟುಂಬದವರು ಪೊಲೀಸ್ ದೂರು ನೀಡಿದ್ದರು. ಹೊನ್ನಾವರ ಪೊಲೀಸರು ಪೊಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಕಾರಿಗೆ ಹಿಂಬದಿಯಿಂದ ಟೆಂಪೋ ಡಿಕ್ಕಿ 
ಭಟ್ಕಳ: ಅತಿವೇಗ ಹಾಗೂ ಅಜಾಗರೂಕ ಚಾಲನೆಯಿಂದ ಟೆಂಪೋ ಚಾಲಕ ಕಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದು ಅಪಘಾತಪಡಿಸಿದ ಘಟನೆ ಭಟ್ಕಳದಲ್ಲಿ ನಡೆದಿದೆ. ಮ್ಯಾಂಗೋ ಫಾರಂ ಹೆಗ್ಗೆಲ್ ನಿವಾಸಿ ಮೊಹಮ್ಮದ್ ಸಲೀಂ ಕೆ. ಉಸ್ಮಾನ್ ಅವರು ಈ ಕುರಿತು ದೂರು ನೀಡಿದ್ದಾರೆ. ಚಿಕ್ಕಮಗಳೂರು ಮೂಲದ ಶಶಿಕಿರಣ್ ಮಹಾಂತೇಶ್ ಎಂಬಾತ ತನ್ನ ಟೆಂಪೋ ವಾಹನವನ್ನು ಹೊನ್ನಾವರ ಕಡೆಯಿಂದ ಭಟ್ಕಳದತ್ತ ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ಚಲಾಯಿಸಿಕೊಂಡು ಬರುತ್ತಿದ್ದ. ಈ ವೇಳೆ ಭಟ್ಕಳದ ಅನ್ಸಪಾಲ್ ಸೂಪರ್ ಮಾರ್ಕೆಟ್ ಎದುರಿನ ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಮುಂದೆ ನಿಧಾನವಾಗಿ ಸಾಗುತ್ತಿದ್ದ ಕಾರಿನ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದ್ದಾನೆ ಎನ್ನಲಾಗಿದೆ. ಅಪಘಾತದಲ್ಲಿ ಎರಡೂ ವಾಹನಗಳಿಗೆ ಹಾನಿಯಾಗಿದೆ. ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಕೂಟಿಯಿಂದ ಬಿದ್ದು ಸವಾರ ಗಂಭೀರ ಗಾಯ
ಭಟ್ಕಳ: ಅತಿವೇಗ ಹಾಗೂ ಅಜಾಗರೂಕತೆಯಿಂದ ಸ್ಕೂಟಿ ಚಲಾಯಿಸಿದ ಪರಿಣಾಮ ನಿಯಂತ್ರಣ ತಪ್ಪಿ ಬಿದ್ದು ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ತಾಲೂಕಿನ ರಂಗಿನಕಟ್ಟೆ ಸಮೀಪದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಶುಕ್ರವಾರ ನಡೆದಿದೆ.
ಮಣ್ಕುಳಿಯ ರಘುನಾಥ ರಸ್ತೆ ನಿವಾಸಿ ದೇವಿದಾಸ ದುರ್ಗಪ್ಪ ನಾಯ್ಕ ಗಾಯಗೊಂಡವರು. ಕಾರಗದ್ದೆಯಿಂದ ಮಣ್ಕುಳಿ ಕಡೆಗೆ ಸ್ಕೂಟಿಯಲ್ಲಿ ತೆರಳುತ್ತಿದ್ದ ವೇಳೆ ರಂಗಿನಕಟ್ಟೆ ಸಮೀಪದ ಎನ್‌ಎಚ್-66 ರಸ್ತೆಯಲ್ಲಿ ಬ್ರೇಕ್ ಹಾಕಿದ್ದಾರೆ. 
ನಿಯಂತ್ರಣ ತಪ್ಪಿ ರಸ್ತೆ ಮೇಲೆ ಬಿದ್ದಿದೆ ಎಂದು ತಿಳಿದುಬಂದಿದೆ. ದೇವಿದಾಸ ನಾಯ್ಕ ಅವರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಕಾರಗದ್ದೆಯ ರಾಮನಮನೆ ನಿವಾಸಿ ರಾಘವೇಂದ್ರ ರಾಮ ನಾಯ್ಕ ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net