ಜಿಲ್ಲಾ ಆಸ್ಪತ್ರೆ ಶಿರಸಿಗೆ ಹೋಗಲು ಬಿಡುವುದಿಲ್ಲ

ಸಂಘಟನೆಗಳ ಪ್ರಮುಖರು ಕಾರವಾರದಲ್ಲಿ ಪ್ರತಿಭಟನೆ ನಡೆಸಿದರು.
ಸಂಘಟನೆಗಳ ಪ್ರಮುಖರು ಕಾರವಾರದಲ್ಲಿ ಪ್ರತಿಭಟನೆ ನಡೆಸಿದರು.
Published on
ಕಾರವಾರ: ಯಾವುದೇ ಕಾರಣಕ್ಕೂ ಕಾರವಾರದಿಂದ ಶಿರಸಿಗೆ ಜಿಲ್ಲಾ ಆಸ್ಪತ್ರೆಯನ್ನು ಕೊಂಡೊಯ್ಯಲು ಬಿಡುವುದಿಲ್ಲ ಎಂದು ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯ್ಕ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರವಾರದಲ್ಲಿ ತಾಲೂಕು ಆಸ್ಪತ್ರೆ ಇಲ್ಲ. ಮೆಡಿಕಲ್ ಕಾಲೇಜ್ ಮಾಡುವ ಸಲುವಾಗಿ 10 ವರ್ಷಗಳ ಹಿಂದೆ ಜಿಲ್ಲಾ ಆಸ್ಪತ್ರೆಯನ್ನು ಮೆಡಿಕಲ್ ಕಾಲೇಜ್ ಗೆ ಹಸ್ತಾಂತರಿಸಲಾಗಿದೆ. ಈಗ ಮೆಡಿಕಲ್‌ ಕಾಲೇಜ್‌ ಆಸ್ಪತ್ರೆ ಎಂಬುದು ಖಾಸಗಿ ಆಸ್ಪತ್ರೆಯಂತೆಯೇ ಆಗಿದೆ. ಅಲ್ಲಿಯೂ ಶುಲ್ಕ ತುಂಬಬೇಕಿದೆ.
ಜಿಲ್ಲಾ ಆಸ್ಪತ್ರೆಗಿರುವ ಸೌಲಭ್ಯಗಳ ಕ್ರಿಮ್ಸ್‌ ಆಸ್ಪತ್ರೆಯಲ್ಲಿ ತೆಗೆಯಲಾಗಿದೆ. ಹಾಗಾಗಿ ರೋಗಿಗಳಿಗೆ ವಂಚನೆಯಾಗುತ್ತಿದೆ. ಬಿಪಿಎಲ್ ಕಾರ್ಡ್ ಇದ್ದರೂ ಉಚಿತ ಚಿಕಿತ್ಸೆ ಸಿಗುತ್ತಿಲ್ಲ. ಪಿಪಿಪಿ ಮಾದರಿಯಲ್ಲಿ ಸಿಟಿ ಸ್ಕ್ಯಾನ್ ಇದ್ದು, ತುರ್ತು ಸಂದರ್ಭದಲ್ಲೂ ರೋಗಿಗಳಿಗೆ ತಕ್ಷಣ ತಪಾಸಣೆ ಸಿಗುವುದಿಲ್ಲ. ಅಗತ್ಯವಿದ್ದಷ್ಟು ಆಂಬುಲೆನ್ಸ್ಗಳು ಇಲ್ಲ. ಹಾಗಾಗಿ ಸರ್ಕಾರಿ ವೈದ್ಯಕೀಯ ವಿದ್ಯಾಲಯ ಆಗಿದ್ದರೂ ಖಾಸಗಿಯಂತೆಯೇ ಆಗಿದೆ ಎಂದರು.
ಜಿಲ್ಲಾ ಆಸ್ಪತ್ರೆಯನ್ನು ಶಿರಸಿಗೆ ಕೊಂಡೊಯ್ಯಬೇಕು ಎಂದು ಹಿಂದಿನ ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಅವರು ನಿರ್ದೇಶನ ನೀಡಿದರು. ಅದರಂತೆ ಸಭೆಯ ನಡಾವಳಿಯಾಗಿದೆ. ನಾವು ಆ ನಿರ್ಣಯವನ್ನು ಖಂಡಿಸುತ್ತೇವೆ. ಜಿಲ್ಲಾ ಆಸ್ಪತ್ರೆಯನ್ನು ಬೇಕಾದರೆ ಹಟ್ಟಿಕೇರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಾಡಲಿ ಎಂದರು. ಶಿರಸಿಗೆ ಬೇಕಾದರೆ ಪ್ರತ್ಯೇಕ ಆಸ್ಪತ್ರೆಯನ್ನು ತರಲಿ. ಆದರೆ, ಇಲ್ಲಿನ ಆಸ್ಪತ್ರೆ ಕೊಂಡೊಯ್ಯುವುದು ಸರಿಯಲ್ಲ. ಆ ಪ್ರಯತ್ನ ನಡೆದರೆ ತೀವ್ರ ಹೋರಾಟ ಮಾಡಲಿದ್ದೇವೆ ಎಂದರು.
ದೀಪಕ್ ಕುಡಾಳಕರ್ ಮಾತನಾಡಿ ಕ್ರಿಮ್ಸ್ ಆಸ್ಪತ್ರೆಯಲ್ಲಿ ಎಂಆರ್‌ಐ ಯಂತ್ರವಿಲ್ಲ. ಜನರಿಗೆ ಸರಿಯಾಗಿ ಚಿಕಿತ್ಸೆ ಕೊಡುತ್ತಿಲ್ಲ. ಉತ್ತಮ ಸಲಕರಣೆಗಳನ್ನು ಗುಜರಿ ಮಾಡಿ ಮಾರಾಟ ಮಾಡಲಾಗುತ್ತಿದೆ ಎಂದು ದೂರಿದರು.
ಕೆ.ಡಿ.ಪೆಡ್ನೇಕರ್, ಚಿದಾನಂದ ಬೋರ್ಕರ್, ಅಬ್ಬಾಸ್ ಮುಲ್ಲಾ, ಜೋನಿ ಲೋಪೀಸ್, ಸೂರಜ್ ಕೂರ್ಮಕರ್, ರಾಜೇಂದ್ರ ಅಂಚೆಕರ್, ರಾಘು ನಾಯ್ಕ, ರಾಮಾ ನಾಯ್ಕ, ಅಲ್ತಾಫ್ ಶೇಖ್, ಕೈರುನ್ನಿಸ್ಸಾ ಶೇಖ್ ಸುದ್ದಿಗೋಷ್ಠಿಯಲ್ಲಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net