10 ನೇಯ ಆರೋಗ್ಯ ಗ್ಯಾರಂಟಿ: ಡಿಸಿಎಂ ಶಿವಕುಮಾರ್‌

ಕಾರವಾರದ ಕ್ರಿಮ್ಸ್‌ ಆಸ್ಪತ್ರೆ ಕಟ್ಡಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್‌ ಪಾಲ್ಗೊಂಡರು.
ಕಾರವಾರದ ಕ್ರಿಮ್ಸ್‌ ಆಸ್ಪತ್ರೆ ಕಟ್ಡಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್‌ ಪಾಲ್ಗೊಂಡರು.
Published on

ಕಾರವಾರ: ನಾವು ಆರೋಗ್ಯ ಗ್ಯಾರಂಟಿಯನ್ನೂ ನೀಡುತ್ತೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

ಕಾರವಾರದ ಕ್ರಿಮ್ಸ್‌ ಆಸ್ಪತ್ರೆಯ 450 ಹಾಸಿಗೆಗಳ ಆಸ್ಪತ್ರೆ ಕಟ್ಡಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಐದು ಗ್ಯಾರಂಟಿಯನ್ನು ಈಗಾಗಲೇ ನೀಡಿದ್ದೇವೆ. ಆರನೇಯ ಭೂಮಿ ಗ್ಯಾರಂಟಿಯನ್ನು ಘೋಷಿಸಿದ್ದೇವೆ. ಏಳನೇಯದು ನೀರು, ಎಂಟನೇಯದು ವಸತಿ, ಒಂಭತ್ತನೇಯದು ಇ-ಖಾತಾ ಹಾಗೂ 10 ನೇಯ ಗ್ಯಾರಂಟಿಯಾಗಿ ಆರೋಗ್ಯ ಗ್ಯಾರಂಟಿಯನ್ನು ನೀಡಲಿದ್ದೇವೆ.

ರಾಜ್ಯದಲ್ಲಿ ವೈದ್ಯಕೀಯ ಕ್ರಾಂತಿ ನಡೆಯುತ್ತಿದೆ. ಎಲ್ಲೆಡೆ ಸರ್ಕಾರಿ ಮೆಡಿಕಲ್ ಕಾಲೇಜ್ ಸ್ಥಾಪನೆ ಮಾಡುತ್ತಿರುವ ನಮ್ಮ ಸರ್ಕಾರದ ಯೋಜನೆ ದೇಶಕ್ಕೇ ಮಾದರಿಯಾಗಿದೆ. ರಾಜ್ಯದಲ್ಲಿ ಒಟ್ಟು 70 ಮೆಡಿಕಲ್ ಕಾಲೇಜ್ ಇದೆ. 13,940 ಮೆಡಿಕಲ್ ಸೀಟ್‌ಗಳು ,1.70 ಲಕ್ಷ ಪ್ಯಾರಾ ಮೆಡಿಕಲ್ ಸೀಟುಗಳು ಪ್ರತಿ ವರ್ಷ ಲಭ್ಯವಾಗುತ್ತಿವೆ. ವಿದೇಶಗಳ ಎಷ್ಟೋ ವಿಶ್ವ ವಿದ್ಯಾಲಯಗಳಲ್ಲಿ ನಮ್ಮ ರಾಜ್ಯದ ವೈದ್ಯರು ಕೆಲಸ ಮಾಡುತ್ತಿದ್ದಾರೆ. ಹೊರ ದೇಶಗಳಿಂದ ಇಲ್ಲಿಗೆ ಬಂದು ವೈದ್ಯಕೀಯ ಔಲಭ್ಯ ಪಡೆಯುತ್ತಿದ್ದಾರೆ ಎಂದರು.

ಕೋಮು ಗಲಭೆ ಮುಕ್ತ:

ಧರ್ಮ ಕಾಪಾಡಬೇಕು. ಧರ್ಮದಿಂದ ರಾಜಕಾರಣ ಮಾಡಬಾರದು.ರಾಜಕಾರಣದಲ್ಲಿ ಧರ್ಮ ಇರಬೇಕು ಎಂಬುದು ನನ್ನ ನಿಲುವು. ಈ ಭಾಗದ ಅಭಿವೃದ್ಧಿಗೆ ನಮ್ಮ ಸರ್ಕಾರ ಬಂದ ಮೇಲೆ 2 ಸಾವಿರ ಕೋಟಿ ಹಣ ಕೊಟ್ಟಿದ್ದೇವೆ. ನಾವು ಪ್ರಾರಂಭ ಮಾಡಿದ ಕೆಲಸಗಳನ್ನು ನಾವೇ ಉದ್ಘಾಟನೆ ಮಾಡುವ ಭಾಗ್ಯ ಸಿಕ್ಕಿದೆ. ನಮ್ಮ ಸರ್ಕಾರ ಬಂದ ಮೇಲೆ ಕರಾವಳಿಯಲ್ಲಿ ಒಂದು ಕೋಮು ಗಲಭೆಯೂ ಆಗಿಲ್ಲ. ಹಿಂದೆ ಕೋಮು ಗಲಭೆಗಳ ಕಾರಣಕ್ಕೆ ಕರಾವಳಿಯಲ್ಲಿ ಹೂಡಿಕೆ ಮಾಡಲು ಉದ್ಯಮಿಗಳು ಬರುತ್ತಿರಲಿಲ್ಲ ಎಂದರು.
ಶಾಸಕರಾದ ಶಿವರಾಮ ಹೆಬ್ಬಾರ, ಭೀಮಣ್ಣ ನಾಯ್ಕ, ಎಂಎಲ್‌ಸಿ ಗಣಪತಿ ಉಳ್ವೇಕರ್, ಜಿಲ್ಲಾ ಗ್ಯಾರಂಟಿ ಪ್ರಾಽಕಾರದ ಅಧ್ಯಕ್ಷ ಸತೀಶ ನಾಯ್ಕ, ವೈದ್ಯಕೀಯ ಶಿಕ್ಷಣ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಮೊಹಮದ್ ಮೌಸಿನ್, ನಿರ್ದೇಶಕಿ ಡಾ.ಬಿ.ಎಲ್. ಸುಜಾತಾ ರಾಠೋಡ್ ವೇದಿಕೆಯಲ್ಲಿದ್ದರು. ಜಿಲ್ಲಾಕಾರಿ ಕೆ.ಲಕ್ಷ್ಮೀಪ್ರಿಯಾ ಸ್ವಾಗತಿಸಿದರು.
ಕಾರ್ಖಾನೆ ಸ್ಥಾಪಿಸಿ
ಕೆಎಸ್ ಎಂಸಿಎ ಅಧ್ಯಕ್ಷ ಸತೀಶ ಸೈಲ್ ಮಾತನಾಡಿ, ನಾನು ಶ್ರೀ ರಾಮನನ್ನೂ, ರಹೀಮನನ್ನೂ ಗೌರವಿಸುತ್ತೇನೆ. ದೇವಸ್ಥಾನಗಳ ಅಭಿವೃದ್ಧಿಗೆ ಇದುವರೆಗೆ ನನ್ನ ವಿವೇಚನಾ ಅನುದಾನದಲ್ಲಿ 35 ಕೋಟಿ ರೂ. ನೀಡಿದ್ದೇನೆ. ಪ್ರವಾಸೋದ್ಯಮ ಅಭಿವೃದ್ಧಿ ಮಾಡಿದರೆ ಕಾರವಾರ ನಿಜವಾಗಿಯೂ ಕರ್ನಾಟಕದ ಕಾಶ್ಮೀರವಾಗಲಿದೆ. ಗೋವಾದಲ್ಲಿರುವ ಶೇ.75 ಕೈಗಾರಿಕೆಗಳ ಮಾಲೀಕರು ಕಾರವಾರದವರಾಗಿದ್ದಾರೆ. ಆದರೆ, ನಮ್ಮ ರಾಜ್ಯದಲ್ಲಿ ಕಾರ್ಖಾನೆ ಸ್ಥಾಪಿಸಲು ಅವರಿಗೆ ಆಸಕ್ತಿ ಇದ್ದರೂ ಸೌಲಭ್ಯಗಳಿಲ್ಲ. 24 ಗಂಟೆ ವಿದ್ಯುತ್, ಶುಲ್ಕ ವಿನಾಯಿತಿ ಮುಂತಾದ ಸೌಲಭ್ಯ ಒದಗಿಸಬೇಕು. ಕಾರವಾರ ಬಂದರನ್ನು ಎಸ್‌ಇಜಡ್ ಆಗಿ ಘೋಷಿಸಬೇಕು. ಎಂದು ಮನವಿ ಮಾಡಿದರು.

ವಿವಾದಿತ ಯೋಜನೆಗಳ ಪ್ರಸ್ತಾಪವಿಲ್ಲ.

ಬೇಡ್ತಿ, ಅಘನಾಶೀನಿ ನದಿ ತಿರುವು, ಕೇಣಿ ಬಂದರು, ಶರಾವತಿ ಪಂಪ್ ಸ್ಟೊರೇಜ್ ಮುಂತಾದ ವಿವಾದಿತ ಯೋಜನೆಗಳ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರಾಗಲಿ, ಡಿಸಿಎಂ ಅವರಾಗಲಿ ಯಾವುದೇ ಧ್ವನಿ ಎತ್ತಿಲ್ಲ. ಜಿಲ್ಲೆಯ ಜನಪ್ರತಿನಿಽಗಳು ಈ ಬಗ್ಗೆ ಮಾತನಾಡಿಲ್ಲ.
"

ಹೊನ್ನಾವರ, ಶಿರಸಿಗೆ ಸೂಪರ್ ಸ್ಪೆಷಾಲಿಟಿ ಕೊಡಿಗೋವಾ ಸರ್ಕಾರ ಜಿಲ್ಲೆಯ ಉದ್ಯೋಗಿಗಳಿಗೆ ಚಿಕಿತ್ಸೆ ನೀಡುತ್ತಿಲ್ಲ. ಮಂಗಳೂರು, ಉಡುಪಿಗೆ ಹೋಗುವವರೆ ರೋಗಿಗಳು ಜೀವಂತ ಇರುತ್ತಾರೆ ಎಂಬ ಖಾತ್ರಿ ಇಲ್ಲ. ಇದರಿಂದ ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿಯ ಅತಿ ಅವಶ್ಯಕತೆ ಇದೆ. ಮೊದಲು ಕಾರವಾರದಲ್ಲಿ ನಂತರ ಹೊನ್ನಾವರ ಹಾಗೂ ಶಿರಸಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಾಡಿಕೊಡಿ ಎಂದು ಸಿಎಂ ಅವರಲ್ಲಿ ಮನವಿ ಮಾಡುತ್ತೇನೆ.

ಮಂಕಾಳ ವೈದ್ಯಜಿಲ್ಲಾ ಉಸ್ತುವಾರಿ ಸಚಿವ

"

ನಾನು ಕೈಗಾರಿಕೆ ಸಚಿವನಾಗಿದ್ದಾಗ ಕೈಗಾರಿಕೆ ತರಲು ಸಾಕಷ್ಟು ಪ್ರಯತ್ನ ಮಾಡಿದ್ದೆ. ಆದರೆ, ಪರಿಸರದ ಕಾರಣ ಅದು ಸಾಧ್ಯವಾಗಿಲ್ಲ. ಸಿಮೆಂಟ್, ಕಬ್ಬಿಣದ ಕೈಗಾರಿಕೆಗಳಿಂದ ಪರಿಸರ ನಾಶವಾಗುತ್ತದೆ. ಹಾಗಾಗಿ ನಾನು ಪ್ರವಾಸೋದ್ಯಮ ಸಚಿವ ಇದ್ದಾಗ ಪ್ರವಾಸೋದ್ಯಮ ಅಭಿವೃದ್ಧಿಗೆ ಸಾಕಷ್ಟು ಕೆಲಸ ಮಾಡಿದೆ. ಪರಿಣಾಮ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಬೆಳೆದಿದೆ.

ಆರ್.ವಿ.ದೇಶಪಾಂಡೆಶಾಸಕ

"

ಬಡವರ, ರೈತರ ಮಕ್ಕಳು ವೈದ್ಯರಾಗಬೇಕು. ಆಗ ಮಾತ್ರ ವ್ಯವಸ್ಥೆ ಸುಧಾರಿಸುತ್ತದೆ.ಅದಕ್ಕೆ ಎಲ್ಲ ಜಿಲ್ಲೆಯಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜ್ ಮಾಡುತ್ತಿದ್ದೇವೆ. ಸರ್ಕಾರಿ ಮೆಡಿಕಲ್ ಕಾಲೇಜ್ ಆದರೆ ಸಂಪೂರ್ಣ 150 ಸೀಟುಗಳು ಡೊನೇಶನ್ ಇಲ್ಲದೇ ಸಿಗುತ್ತವೆ. ಕಾರವಾರದಲ್ಲಿ ಕ್ಯಾನ್ಸರ್ ಘಟಕ 2 ತಿಂಗಳಲ್ಲಿ ನಿರ್ಮಾಣವಾಗಲಿದೆ. ವೈದ್ಯಕೀಯ ಉಪಕರಣ ಖರೀದಿ ಪ್ರಕ್ರಿಯೆ 20 ಕೋಟಿಯಲ್ಲಿ ನಡೆದಿದೆ.

ಶರಣ ಪ್ರಕಾಶ ಪಾಟೀಲ ವೈದ್ಯಕೀಯ ಶಿಕ್ಷಣ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net