Acacia ಸರ್ಕಾರ ‘ಅಕೇಶಿಯಾ, ನೀಲಗಿರಿ’ ನಿಷೇಧಿಸಿ 10 ವರ್ಷ

Casual picture of acacia trees
Casual picture of acacia trees
Published on

ಪ್ರಮುಖ ಮುಖ್ಯಾಂಶಗಳು

  • ಅರಣ್ಯ‘ಇಲಾಖೆ’ ಕಾರ್ಯಕ್ಕೆ ಆಕ್ರೋಶ
  • ಮಲೆನಾಡು, ಪಶ್ಚಿಮಘಟ್ಟಕ್ಕಿಲ್ಲ ಶಾಪವಿಮೋಚನೆ!
ಶಿರಸಿ: ಪರಿಸರ ಅಸಮತೋಲನಕ್ಕೆ ಕಾರಣವಾಗುವುದರಿಂದ ನೀಲಗಿರಿ ಮತ್ತು ಅಕೇಶಿಯಾ ಸಸಿಗಳನ್ನು ನೆಡುವುದನ್ನು ರಾಜ್ಯ ಸರ್ಕಾರ ನಿಷೇಧಿಸಿ 10 ವರ್ಷಗಳು ಕಳೆದಿವೆ. ಆದರೆ, ಅರಣ್ಯ ಇಲಾಖೆ ಇಂದಿಗೂ ಅಕೇಶಿಯಾ ನೆಡುತೋಪು ಮಾಡುತ್ತಿರುವುದು ಖಂಡನಾರ್ಹ ಹಾಗೂ ಸಂಪೂರ್ಣ ನಿಷೇಧಿಸಬೇಕು ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಅರಣ್ಯ ಇಲಾಖೆಗೆ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
ಈ ಕುರಿತಂತೆ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅರಣ್ಯ ಸಚಿವ ರಮಾನಾಥ ರೈ ಕಾನೂನು ಜಾರಿಗೆ ತರಲು ಮತ್ತು ನಿಷೇಧವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಶಾಸಕಾಂಗದಲ್ಲಿ ಮಸೂದೆ ಜಾರಿಗೊಳಿಸಿದ್ದರು. ಆದಾಗ್ಯೂ ಅರಣ್ಯ ಮತ್ತು ವಿವಿಧ ಅರಣ್ಯ ಪ್ರದೇಶ ಅಭಯಾರಣ್ಯ ಹಾಗೂ ಮೀಸಲು ಅರಣ್ಯದಲ್ಲೂ ಅರಣ್ಯ ಇಲಾಖೆ ಅಕೇಶಿಯಾ ನೆಡುತೋಪು ಮಾಡುತ್ತಿರುವುದು ವಿಷಾದಕರ. ನೈಸರ್ಗಿಕ ಅರಣ್ಯವಲ್ಲದ ಇಂತಹ ನಿಷೇಧಿತ ನೆಡುತೋಪುಗಳಿಂದಾಗಿಯೇ ಅರಣ್ಯ ಇಲಾಖೆಯು ಅರಣ್ಯ ಪ್ರಮಾಣ ಹೆಚ್ಚಾಗಿದೆ ಎಂದು ವ್ಯಾಖ್ಯಾನಿಸುತ್ತಿದೆ. ಇಂತಹ ಅವೈಜ್ಞಾನಿಕ ಗಿಡಗಳ ನೆಡುತೋಪುಗಳಿಂದ ಜಿಲ್ಲೆಯ ಅರಣ್ಯ ಭೂಮಿಯ ಪ್ರಮಾಣ 2 ವರ್ಷದಲ್ಲಿ 13 ಚ. ಕಿಮೀ ನಷ್ಟು ಹೆಚ್ಚಿದೆ ಎಂಬುದಾಗಿ ಭಾರತೀಯ ಅರಣ್ಯ ವರದಿಯಲ್ಲಿ ತಪ್ಪಾಗಿ ಉಲ್ಲೇಖಿಸಿದೆ. ಮಲೆನಾಡಿನಲ್ಲಿ ಕಾಡು ಜಾತಿಯ ಮರಗಳ ಬದಲಿಗೆ ಅಕೇಶಿಯಾ, ನೀಲಗಿರಿ ನೆಡುತೋಪಿನಿಂದ ಸದಾ ಹಸಿರು ಬಣ್ಣದ ಕಾಡಿನ ಪ್ರಮಾಣ ಕಡಿಮೆಯಾಗಿ, ಪಶ್ಚಿಮ ಘಟ್ಟದ ಸೂಕ್ಷ್ಮ ಪರಿಸರಕ್ಕೆ ಮಾರಕವಾಗಿ, ಮಲೆನಾಡಿಗೆ ಅಕೇಶಿಯಾ ಶಾಪವಾಗಿದೆ ಎಂದಿದ್ದಾರೆ.
ಅರಣ್ಯದಲ್ಲಿ ಅಕೇಶಿಯಾ ನೆಡುವ ಪ್ರದೇಶವು ಹೆಸರಿಗಷ್ಟೇ ಅರಣ್ಯ ಸಮೃದ್ಧಿ. ಅಕೇಶಿಯಾ ಕಾಡು ನಾಶ ಮಾಡುತ್ತದೆ, ಉದುರಿದ ಎಲೆಗಳು ಜಮೀನಿನ ಲವತ್ತತೆ ಕುಂಠಿತಗೊಳಿಸುತ್ತಿದೆ. ತೆರೆದ ಬಾವಿ ಮತ್ತು ಕೊಳವೆ ಬಾವಿಗಳಲ್ಲಿ ಅಂತರ್ಜಲ ಮಟ್ಟ ಕುಸಿತವಾಗಲು ಕಾರಣವಾಗುತ್ತಿದೆ. ಅಕೇಶಿಯಾ ಮರದಲ್ಲಿ ಪಕ್ಷಿಗೂಡು ಕಟ್ಟುವುದಿಲ್ಲ, ಪ್ರಾಣಿಗಳಿಗೆ ನೆಲೆ ಸಾಧ್ಯವಿಲ್ಲ, ಅಕೇಶಿಯಾ ಬುಡದಲ್ಲಿ ಬೇರೆ ಗಿಡವಾಗಲೀ ಹುಲ್ಲು ಕೂಡಾ ಹುಟ್ಟುವುದಿಲ್ಲ. ಅಲ್ಲದೇ, ವನ್ಯ ಪ್ರಾಣಿ ಪಕ್ಷಿಗಳಿಗೆ ಹಣ್ಣು ಹಂಪಲಿನ ಕೊರತೆ ಉಂಟಾಗುತ್ತಿದೆ ಎಂದು ವೈಜ್ಞಾನಿಕ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net