ಆದರೆ, ಕಾಲಾನುಕ್ರಮದಲ್ಲಿ ಅನೇಕ ತೀರ್ಥಗಳ ಭೌತಿಕ ಅಸ್ತಿತ್ವ ಕಥಾವಶೇಷವಾಗಿ ನಾಮಮಾತ್ರ ಉಳಿಯಿತು. ಪ್ರಸಿದ್ಧ ಆತ್ಮಲಿಂಗ ಸನ್ನಿಧಾನದಲ್ಲಿ ಪುಷ್ಕರಣಿಯಾಗಿದ್ದ ಗೋಕರ್ಣ ತೀರ್ಥ ಇಂದು ಬಾವಿಯಾಗಿ ಉಳಿದಿದೆ. ಗೋಶೃಂಗ ಪರ್ವತದಲ್ಲಿ ನದಿಯಾಗಿ ಹುಟ್ಟಿ ಪಾರ್ವತಿ ಮಂದಿರದ ಸಮ್ಮುಖದಲ್ಲಿ ಉತ್ತರಾಭಿಮುಖವಾಗಿ ಹರಿದು ಪಶ್ಚಿಮ ಸಮುದ್ರ ಪ್ರವೇಶಿಸುತ್ತಿದ್ದ ತಾಮ್ರಪರ್ಣಿ ತೀರ್ಥರೂಪ ಹೇಳಹೆಸರಿಲ್ಲದಂತಾಗಿದೆ. ಇನ್ನು ಕಪಿಲತೀರ್ಥದ ಸನಿಹದಲ್ಲಿದ್ದ ಅರಣ್ಯಾತೀರ್ಥ, ಆದಿಗೋಕರ್ಣ ತೀರ್ಥ ಸನಿಹದ ಅಗ್ನಿತೀರ್ಥ, ನದಿರೂಪದಿಂದ ಮಾರ್ಪಾಟಾದ ಮಾಲಿನೀತೀರ್ಥ, ತಾಮ್ರಪರ್ಣಿಗೆ ಹೊಂದಿದ್ದ ಉನ್ಮಜ್ಜನ ತೀರ್ಥ ಇತ್ಯಾದಿ ಹತ್ತು ಹಲವು ತೀರ್ಥಗಳ ಸ್ಫುಟವಾದ ಸ್ಥಳ ಮಾಹಿತಿ ಲಭ್ಯವಿದ್ದರೂ ಇಂದು ಅವುಗಳೆಲ್ಲ ಅದೃಶ್ಯವಾಗಿ ಪುರಾಣಗಳಲ್ಲಿ ಮಾತ್ರ ಉಳಿದಿವೆ!