ಷಟ್ ಗುಣ ಭರಿತ ಐಂದ್ರಜಲ: ಆಯುರ್ವೇದ ಶಾಸ್ತ್ರಜ್ಞರಾದ ಚಕ್ರಪಾಣಿದತ್ತರು ‘ದಿವ್ಯ ಜಲಸ್ಯ ಪ್ರಾಕೃತ ಗುಣಮಹಾ’ ಎಂದಿದ್ದಾರೆ.ಪ್ರಕೃತಿಗೆ ಗೊತ್ತಾಗುವಂತಹ ಆರು ಗುಣಗಳು ಐಂದ್ರಜಲ ಅಥವಾ ಆಂತರಿಕ್ಷ ಜಲದಲ್ಲಿದೆ. ಇದಕ್ಕೆ ಸಮವಾದ ಶುಚಿಯಾದ ನೀರು ಸೃಷ್ಟಿಯಲ್ಲಿಲ್ಲ. ಭೂಮಿಯ ಮೇಲಿನ ಇನ್ನಾವುದೇ ನೀರನ್ನು ಸರ್ವಥಾ ಸೇವಿಸಿದ, ಕವಿ ಸಮಯಕ್ಕೆ ಉಲ್ಲೇಖಿತವಾಗುವ ಚಾತಕ ಪಕ್ಷಿ ಈ ನೀರನ್ನು ಕುಡಿಯುವುದಕ್ಕಾಗಿ ಕಾಯುತ್ತಿರುತ್ತದೆ. ಶೀತ ಅಂದರೆ ತಂಪು, ಶುಚಿ-ಶುದ್ಧ, ಶಿವಂ ಅಂದರೆ ಶುಭಕಾರಕ, ಮೃಷ್ಟಂ ಅರ್ಥಾತ್ ವದನಪ್ರಿಯವಾದ ಅತಿ ರುಚಿಕರ, ವಿಮಲಂ ಅಂದರೆ ದೋಷ ರಹಿತ ಮತ್ತು ಜೀರ್ಣಸಲು ಯೋಗ್ಯವಾದ ಲಘು ಇವುಗಳು ಆಂತರಿಕ್ಷ ಜಲದ ಷಟ್ ಗುಣಗಳಾಗಿವೆ. ಆಂತರಿಕ್ಷ ಜಲ ಸುರಿದು ಭೂಮಿಯನ್ನು ಸೇರಿದ ಮೇಲೆ ಶ್ವೇತ, ಪಾಂಡರ, ಕಪಿಲ, ಉಷಿರೆ ಇತ್ಯಾದಿ ಆ ಆ ಭೂಮಿಗೆ ಅನುಗುಣವಾಗಿ ಕಷಾಯ, ಕಹಿ, ಕ್ಷಾರ, ಖಾರ, ಲವಣ ಮುಂತಾದ ಗುಣಗಳನ್ನು ಹೊಂದುತ್ತದೆ.