ಯಲ್ಲಾಪುರ-ಅಂಕೋಲಾ ಹೆದ್ದಾರಿಯಲ್ಲಿ ಮುಂದುವರಿದ ಅಪಘಾತಗಳ ಸರಣಿ
ಆರತಿ ಬೈಲ್ ಘಟ್ಟದಲ್ಲಿ ಎರಡು ದಿನದಲ್ಲಿ ಎರಡನೇ ಅಪಘಾತ
ಯಲ್ಲಾಪುರ: ತಾಲೂಕಿನ ಆರತಿಬೈಲ್ ಘಟ್ಟದಲ್ಲಿ ಶುಕ್ರವಾರ ಬೆಳಗ್ಗೆ ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿದೆ.
ಬುಧವಾರ ರಾತ್ರಿ ಕ್ರೂಸರ್ ಹಾಗೂ ಲಾರಿ ನಡುವೆ ಅಪಘಾತವಾದ ಸ್ಥಳದಲ್ಲೇ ಟ್ಯಾಂಕರ್ ಪಲ್ಟಿಯಾಗಿದೆ.
ಮಂಗಳೂರಿನಿಂದ ಧಾರವಾಡ ಕಡೆಗೆ ಗ್ಯಾಸ್ ತುಂಬಿಕೊಂಡು ಬರುತ್ತಿದ್ದ ಟ್ಯಾಂಕರ್, ಆರತಿಬೈಲ್ ಘಟ್ಟದಲ್ಲಿ ರಸ್ತೆ ಪಕ್ಕ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.
ಗ್ಯಾಸ್ ಸೋರಿಕೆಯಾಗುತ್ತಿಲ್ಲ. ಆದರೂ ಮುಂಜಾಗ್ರತಾ ಕ್ರಮವಾಗಿ ಪೊಲೀಸರು, ಅಗ್ನಿಶಾಮಕ ದಳದವರು ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ. ಗ್ಯಾಸ್ ತುಂಬಿದ ಟ್ಯಾಂಕರ್ ಆಗಿರುವುದರಿಂದ ಮಂಗಳೂರಿನಿಂದ ಕಂಪನಿಯ ತಂತ್ರಜ್ಞರು ಬಂದ ನಂತರ ಮೇಲಕ್ಕೆತ್ತಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ.
ರಸ್ತೆ ಪಕ್ಕ ಟ್ಯಾಂಕರ್ ಪಲ್ಟಿಯಾಗಿರುವುದರಿಂದ ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಗಿಲ್ಲ.