ಜು.2 ರಂದು ಸದಾಶಿವಗಡ ಬಂದ್‌ ಕರೆ

ಅಕ್ಷಯ ಎಸ್‌ಬಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಅಕ್ಷಯ ಎಸ್‌ಬಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
Published on

ಪ್ರಮುಖ ಮುಖ್ಯಾಂಶಗಳು

  • 1 ವರ್ಷದಿಂದ ಕಾರ್ಯ ನಿರ್ವಹಿಸದ ಕಸದ ವಾಹನ
  • ಸದಾಶಿವಗಡದಲ್ಲಿ ಕಸದ ಸಮಸ್ಯೆ ತೀವ್ರ
ಕಾರವಾರ:ಸಮರ್ಪಕ ಕಸ ವಿಲೇವಾರಿಗೆ ಆಗ್ರಹಿಸಿ ಜು.2 ರಂದು ಸದಾಶಿವಗಡ ಬಂದ್ ಕರೆ ನೀಡಲಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ ಶೆಟ್ಟಿ ಬಣದ ಜಿಲ್ಲಾಧ್ಯಕ್ಷ ಅಕ್ಷಯ ಎಸ್.ಬಿ.ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿತ್ತಾಕುಲಾ ಗ್ರಾಮ ಪಂಚಾಯಿತಿಯಲ್ಲಿ ಅತಿ ಹೆಚ್ಚು ಫ್ಲಾಟ್(ಬಹು ಮಹಡಿ ಕಟ್ಟಡ) ಗಳಿವೆ. ಸದಾಶಿವಗಡ ಮಾರುಕಟ್ಟೆಯೂ ದೊಡ್ಡದಾಗಿದೆ. ಆದರೆ, ಮನೆ, ಮನೆ ಕಸ ಸಂಗ್ರಹ ಬಂದ್ ಮಾಡಿ 1 ವರ್ಷವಾಗಿದೆ. ಜನ ಕಸ ಎಲ್ಲಿ ಎಸೆಯುವುದು ಎಂಬುದು ತಿಳಿಯದೇ ಸಮಸ್ಯೆ ಅನುಭವಿಸುತ್ತಿದ್ದಾರೆ.
ರಾತ್ರಿ ತಂದು ಎಲ್ಲೆಂದರಲ್ಲಿ ಎಸೆಯುತ್ತಿದ್ದಾರೆ. ಅಪಾಯಕಾರಿ ಸಿರಿಂಜ್‌ಗಳು, ಡೈಪರ್‌ಗಳು ಹೀಗೆ ಎಲ್ಲ ವಸ್ತುಗಳು ರಸ್ತೆಯ ಪಕ್ಕವೇ ಬಿದ್ದಿರುತ್ತದೆ. ಕಸ ವಿಲೇವಾರಿ ವ್ಯವಸ್ಥೆ ಮಾಡುವಂತೆ ಪ್ರತಿಭಟನೆ ಮಾಡಿ, ಗ್ರಾಪಂಗೆ ಮುತ್ತಿಗೆ ಹಾಕಲಾಯಿತು. ಶೀಘ್ರದಲ್ಲಿ ಕ್ರಮ ವಹಿಸುವ ಭರವಸೆಯನ್ನು ಗ್ರಾಪಂ ಪಿಡಿಒ ನೀಡಿ ಹಲವು ವಾರಗಳು ಕಳೆದರೂ ಇನ್ನೂ ಕ್ರಮವಾಗಿಲ್ಲ.
ಈ ಹಿನ್ನೆಲೆಯಲ್ಲಿ ಜು.2 ರಂದು ಬಂದ್ ಕರೆ ನೀಡಲಾಗಿದೆ. ಎಲ್ಲರ ಸಮಸ್ಯೆಯಾಗಿರುವುದರಿಂದ ಅಂದು ಬೆಳಗ್ಗೆ 6 ಗಂಟೆಯಿಂದ ಸಾಯಂಕಾಲ 6 ಗಂಟೆಯವರೆಗೆ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡುವಂತೆ ಅಂಗಡಿಕಾರದಲ್ಲಿ ವಿನಂತಿಸುತ್ತೇನೆ ಎಂದರು.
ಕರವೇ ಪದಾಧಿಕಾರಿಗಳಾದ ಮಹೇಶ ಬಾಂದೇಕರ್, ಸಂದೀಪ ಕಲ್ಗುಟಕರ್, ಅರುಣ ನಾಯಕ, ಹಸನ್ ಶೇಖ್, ಅಶೋಕ ರಾಣೆ, ರೂಪೇಶ ಕದಂ, ಅಮಿನ್ ನದಾಫ್, ಕೃಷ್ಣ ಭಟ್, ಮಾರುತಿ ರಾಯ್ಕರ್ ಸುದ್ದಿಗೋಷ್ಠಿಯಲ್ಲಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net