ಅಪಘಾತಕ್ಕೊಳಗಾದವರಿಗೆ ಉಚಿತ ಚಿಕಿತ್ಸೆ Free Treatment

ಕುಮಟಾ ತಾಲೂಕಾಸ್ಪತ್ರೆ ಆವಾರದಲ್ಲಿ (Free Treatment)ನೂತನ ನಿರ್ಮಿತ ಟ್ರಾಮಾ ಸೆಂಟರ್ ಅನ್ನು ಆರೋಗ್ಯ ಸಚಿವ ಯು.ಟಿ. ಖಾದರ್ ಉದ್ಘಾಟಿಸಿದರು. ಶಾಸಕ ದಿನಕರ ಶೆಟ್ಟಿ, ಬಿಇಎಲ್ ನಿರ್ದೇಶಕ ರಜನೀಶ ಶರ್ಮಾ, ಸತೀಶ ನಾಯ್ಕ, ಸಂಜಯ ಅಗರ್ವಾಲ, ಶಾರದಾ ಶೆಟ್ಟಿ, ಡಾ. ಸಂಜಯ ದೊಡ್ಮನಿ, ಡಾ. ಗಣೇಶ ನಾಯ್ಕ ಇತರರಿದ್ದರು.
ಕುಮಟಾ ತಾಲೂಕಾಸ್ಪತ್ರೆ ಆವಾರದಲ್ಲಿ (Free Treatment)ನೂತನ ನಿರ್ಮಿತ ಟ್ರಾಮಾ ಸೆಂಟರ್ ಅನ್ನು ಆರೋಗ್ಯ ಸಚಿವ ಯು.ಟಿ. ಖಾದರ್ ಉದ್ಘಾಟಿಸಿದರು. ಶಾಸಕ ದಿನಕರ ಶೆಟ್ಟಿ, ಬಿಇಎಲ್ ನಿರ್ದೇಶಕ ರಜನೀಶ ಶರ್ಮಾ, ಸತೀಶ ನಾಯ್ಕ, ಸಂಜಯ ಅಗರ್ವಾಲ, ಶಾರದಾ ಶೆಟ್ಟಿ, ಡಾ. ಸಂಜಯ ದೊಡ್ಮನಿ, ಡಾ. ಗಣೇಶ ನಾಯ್ಕ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • 15 ನಿಮಿಷದಲ್ಲಿ ಆಂಬುಲೆನ್ಸ್ ಬಾರದಿದ್ದರೆ ದಂಡ
  • ಆರೋಗ್ಯ ಸಚಿವ ಯು.ಟಿ. ಖಾದರ್ ಭರವಸೆ
  • ಕುಮಟಾದಲ್ಲಿ ಟ್ರಾಮಾ ಸೆಂಟರ್ ಉದ್ಘಾಟನೆ
ಕುಮಟಾ: ಅಪಘಾತಕ್ಕೆ ಒಳಗಾದವರಿಗೆ 7 ದಿನಗಳವರೆಗೆ 2.5 ಲಕ್ಷ ರೂ.ಗಳವರೆಗೆ ಉಚಿತ ಚಿಕಿತ್ಸೆ (Free Treatment) ನೀಡುವ ಯೋಜನೆ ಜಾರಿಗೆ ತರಲಿದ್ದೇವೆ.
ಸರ್ಕಾರಿ ಟ್ರಾಮಾ ಸೆಂಟರ್‌ಗೂ ಈ ಹಣ ನೀಡಲಿದ್ದು, ಅದರಲ್ಲಿ ಶೇ. 70 ಆಸ್ಪತ್ರೆಗೆ, ಶೇ. 30 ವೈದ್ಯರು ಮತ್ತು ಸಿಬ್ಬಂದಿಗೆ ಇನ್ಸೆಂಟಿವ್ ನೀಡಲು ಬಳಸಲಾಗುತ್ತದೆ ಎಂದು ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಹೇಳಿದರು.
ತಾಲೂಕಾಸ್ಪತ್ರೆ ಆವಾರದಲ್ಲಿ ಭಾರತ ಇಲೆಕ್ಟ್ರಾನಿಕ್ಸ್ ಲಿಮಿಟೆಡ್ ಸಿಎಸ್‌ಆರ್ ನಿಧಿಯಿಂದ 2.74 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ಟ್ರಾಮಾ ಸೆಂಟರ್ ಅನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.
ಆರೋಗ್ಯ ಸಚಿವನಾಗಿ ರಾಜ್ಯದಲ್ಲಿ ಹೆಚ್ಚು ಆಸ್ಪತ್ರೆ ಕಟ್ಟುವುದು ನನ್ನ ಉದ್ದೇಶವಲ್ಲ, ಆಸ್ಪತ್ರೆಗಳು ಕಡಿಮೆಯಾಗುವುದಕ್ಕೆ ಬೇಕಾದ ಆರೋಗ್ಯಕರ ಸಮಾಜ ನಿರ್ಮಾಣ ನಮ್ಮ ಉದ್ದೇಶವಾಗಿದೆ.
ಆರೋಗ್ಯ ಕವಚ ಯೋಜನೆಯಂತೆ ಕರೆ ಮಾಡಿದ 15 ನಿಮಿಷದಲ್ಲಿ ಆಂಬುಲೆನ್ಸ್ ಬರುವ ವ್ಯವಸ್ಥೆ ಮಾಡುತ್ತೇವೆ. ತಪ್ಪಿದರೆ ಆಂಬುಲೆನ್ಸ್‌ನವರಿಗೆ 5 ಸಾವಿರ ರೂ.ಗಳವರೆಗೆ ದಂಡ ವಿಧಿಸುವ ಯೋಜನೆ ಸಿದ್ಧಗೊಳ್ಳುತ್ತಿದೆ.
ಹೆಚ್ಚಿನ ಅನಾರೋಗ್ಯಕ್ಕೆ ನಮ್ಮ ಆಹಾರ ಕ್ರಮವೇ ಕಾರಣ. ಆದ್ದರಿಂದ ಆಹಾರ ಸುರಕ್ಷತೆ ಕಾನೂನನ್ನು ಇನ್ನಷ್ಟು ಬಿಗಿಗೊಳಿಸಲಾಗುವುದು.
ಜಂಕ್‌ುಡ್‌ಗಳು ಮತ್ತು ಸಿದ್ಧ ಆಹಾರಗಳ ಗುಣಮಟ್ಟ ತಪಾಸಣೆಗೆ ಈಗಿರುವ ಲ್ಯಾಬ್‌ಗಳನ್ನು ಉನ್ನತೀಕರಿಸುವ ಜತೆಗೆ ರಾಷ್ಟ್ರೀಯ ಮಟ್ಟದ ಲ್ಯಾಬ್‌ಗಳನ್ನು ಸ್ಥಾಪಿಸಲಾಗುವುದು.
ಬಾಣಂತಿಗೆ ಸೂಕ್ತ ಮಾರ್ಗದರ್ಶನ, ಕೈಪಿಡಿ ಮೂಲಕ ಮಗುವಿನ ಸಮರ್ಪಕ ಆಹಾರ ದಿಕ್ಸೂಚಿ ನೀಡಲಾಗುವುದು.
ಈ ಮೂಲಕ ಮುಂದಿನ 15 ವರ್ಷಗಳಲ್ಲಿ ಆರೋಗ್ಯವಂತ ಸಮಾಜ ನಿರ್ಮಿಸುವ ಚಿಂತನೆ ಇದೆ ಎಂದರು.
ಕುಮಟಾದಲ್ಲಿ ಉದ್ಘಾಟಿಸಿದ ಟ್ರಾಮಾ ಸೆಂಟರ್ ಅನ್ನು ರಾಜ್ಯದಲ್ಲೇ ಮಾದರಿ ಟ್ರಾಮಾ ಸೆಂಟರ್ ಆಗಿ ಇನ್ನಷ್ಟು ಸುವ್ಯವಸ್ಥಿತಗೊಳಿಸಿ ಮುಂದುವರಿಸಿಕೊಂಡು ಹೋಗಲು ಸರ್ಕಾರದಿಂದ ಎಲ್ಲ ಸಹಕಾರ ಮತ್ತು ಅನುದಾನಕ್ಕೆ ಮಂಜೂರಿ ನೀಡುತ್ತೇವೆ
ತಾಲೂಕಾಸ್ಪತ್ರೆಗೂ ನಿಗದಿತ ವೈದ್ಯರು, ಶುಶ್ರೂಷಕಿಯರು, ಎಲ್ಲ ಬಗೆಯ ಸಿಬ್ಬಂದಿ ನೇಮಕಗೊಳಿಸಲಾಗುವುದು. ಹೆಸರಾಂತ ಆಸ್ಪತ್ರೆಯವರಿಂದ ಈ ಟ್ರಾಮಾ ಸೆಂಟರ್ ದತ್ತು ಪಡೆದು, ಉತ್ತಮ ರೀತಿಯಲ್ಲಿ ನಿರ್ವಹಿಸುವ ಬಗೆಗೂ ವಿಚಾರಿಸಲಾಗುವುದು.
ಕರಾವಳಿ ಕರ್ನಾಟಕದ ಜನತೆ ಬುದ್ಧಿವಂತರು ಮಾತ್ರವಲ್ಲ, ಪ್ರಜ್ಞಾವಂತರು ಹಾಗೂ ಹೃದಯವಂತರು. ಉಡುಪಿ ದಕ್ಷಿಣ ಕನ್ನಡ ಜಿಲ್ಲೆಗಳಂತೆ ಉತ್ತರ ಕನ್ನಡ ಜಿಲ್ಲೆಯಲ್ಲೂ ಚುನಾವಣೆ ಸಂದರ್ಭದಲ್ಲಿ ಮಾತ್ರ ಪಕ್ಷ ರಾಜಕೀಯ ಮಾಡಿ, ಅಭಿವೃದ್ಧಿಯ ವಿಚಾರದಲ್ಲಿ ಎಲ್ಲರೂ ಒಗ್ಗಟ್ಟು ತೋರಬೇಕು.
ಪ್ರೀತಿ-ವಿಶ್ವಾಸ ಗಳಿಸುವ ರಾಜಕಾರಣ ಮಾಡಬೇಕೇ ಹೊರತು ಇತರರಿಗೆ ನೋವುಂಟು ಮಾಡುವ ರಾಜಕಾರಣ ಬೇಡ. ದುಶ್ಚಟ ಮತ್ತು ದ್ವೇಷ ಮುಕ್ತ ಸಮಾಜ ನಿರ್ಮಿಸಬೇಕು ಎಂದರು. ಶಾಸಕ ದಿನಕರ ಶೆಟ್ಟಿ ಅವರಿಗೆ ಗೌರವಿಸಿ ಜನ್ಮದಿನ ಪ್ರಯುಕ್ತ ಶುಭ ಹಾರೈಸಿದರು.
ಶಾಸಕ ದಿನಕರ ಶೆಟ್ಟಿ ಮಾತನಾಡಿ, ಕುಮಟಾದಲ್ಲಿ ಟ್ರಾಮಾ ಸೆಂಟರ್ ಮಾಡಲು ಅಗತ್ಯವಿರುವ 2.73 ಕೋಟಿ ರೂ. ನೀಡಿ ಜಿಲ್ಲೆಯ ಬಹುಕಾಲದ ಬೇಡಿಕೆ ಈಡೇರಲು ಕಾರಣರಾದ ಭಾರತ ಇಲೆಕ್ಟ್ರಾನಿಕ್ಸ್ ಲಿಮಿಟೆಡ್‌ಗೆ ಜಿಲ್ಲೆಯ ಜನರ ಕೃತಜ್ಞತೆ ಸಲ್ಲುತ್ತದೆ.
ಇದಲ್ಲದೆ, ತಾಲೂಕಾಸ್ಪತ್ರೆಗೆ ಪೋಸ್ಟ್‌ಮಾರ್ಟಂ ರೂಮ್, ಫ್ರೀಜರ್ ಮತ್ತಿತರ ಉದ್ದೇಶಕ್ಕೆ 50 ಲಕ್ಷ ರೂ. ನೀಡಲು ಈಗಾಗಲೇ ಭಾರತ್ ಇಲೆಕ್ಟ್ರಾನಿಕ್ಸ್ ಲಿ. ನವರು ಒಪ್ಪಿದ್ದಾರೆ ಎಂದರು.
ಟ್ರಾಮಾ ಸೆಂಟರ್‌ನ ವೈದ್ಯಕೀಯ ಸಿಬ್ಬಂದಿ ಸಹಿತ ಇತರ ಅಗತ್ಯಗಳನ್ನು ಆರೋಗ್ಯ ಸಚಿವ ಯು.ಟಿ. ಖಾದರ್ ಶೀಘ್ರ ಪೂರೈಸುವ ವಿಶ್ವಾಸದಿಂದ ಮುನ್ನಡೆಯೋಣ.
ಕ್ಷೇತ್ರದಲ್ಲಿ ಉತ್ತಮ ಆರೋಗ್ಯ ಸೇವೆ ಜನಸಾಮಾನ್ಯರಿಗೆ ಸಿಗಬೇಕೆಂಬ ಉದ್ದೇಶಕ್ಕೆ ರೋಟರಿಯಂತಹ ಸಂಸ್ಥೆಗಳು, ದಾನಿಗಳು ಸದಾ ಸಹಯೋಗ ನೀಡಿದ್ದಾರೆ ಎಂದು ಸ್ಮರಿಸಿದರು.
ಬಿಇಎಲ್ ನಿರ್ದೇಶಕ ರಜನೀಶ ಶರ್ಮಾ ಮಾತನಾಡಿ, ಬಿಇಎಲ್ ಯಾವತ್ತೂ ಸಮಾಜದೆಡೆಗೆ ತನ್ನ ಕಾಳಜಿಯನ್ನು ಪ್ರತಿಪಾದಿಸುತ್ತಾ ಬಂದಿದ್ದು ಕುಮಟಾದ ಟ್ರಾಮಾ ಸೆಂಟರ್ ನಮ್ಮ ಸಾಮಾಜಿಕ ಬದ್ಧತೆಯ ಸಂಕೇತವಾಗಿದೆ.
ಇಲ್ಲಿ ಕೋಲ್ಡ್ ಸ್ಟೋರೇಜ್ ಪ್ರಸ್ತಾವನೆ ಸಲ್ಲಿಸಿದ್ದು ಈ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ರೋಟರಿ ಕ್ಲಬ್ ಅಧ್ಯಕ್ಷ ಸಿಎ ವಿನಾಯಕ ಹೆಗಡೆ, ರೋಟರಿಯಿಂದ ಈಗಾಗಲೇ ತಾಲೂಕಾಸ್ಪತ್ರೆಗೆ 1.5 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಉಪಕರಣಗಳನ್ನು ಕೊಟ್ಟಿದ್ದೇವೆ. ಸುಮಾರು 30 ಲಕ್ಷ ರೂ. ವೆಚ್ಚದಲ್ಲಿ ಎಸ್‌ಟಿಪಿ ಘಟಕ ನಿರ್ಮಾಣ ಪ್ರಗತಿಯಲ್ಲಿದೆ.
ಸಂತೆಗುಳಿ ಪಿಎಚ್‌ಸಿಗೆ ಆಂಬುಲೆನ್ಸ್ ನೀಡುತ್ತಿದ್ದು, ತಾಲೂಕಿನ ಒಟ್ಟು 7 ಪಿಎಚ್‌ಸಿಗಳಿಗೆ ಅಗತ್ಯ ಪರಿಕರ ನೀಡಲಾಗುವುದು ಎಂದರು.
ಮಾಜಿ ಶಾಸಕಿ ಶಾರದಾ ಶೆಟ್ಟಿ ಮಾತನಾಡಿ, ಟ್ರಾಮಾ ಸೆಂಟರ್ ನಿರ್ಮಾಣ ಮರೆಯಲಾಗದ ಕ್ಷಣ. ಇದೇರೀತಿ ತಾಲೂಕಿನ ಪಿಎಚ್‌ಸಿ ಗಳಲ್ಲಿ ವೈದ್ಯರು ಮತ್ತು ಅಗತ್ಯ ಸಿಬ್ಬಂದಿ ಕೊರತೆಯನ್ನು ಸಚಿವರು ನೀಗಿಸಬೇಕು ಎಂದು ವಿನಂತಿಸಿದರು.
ತಾಲೂಕಾಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಗಣೇಶ ಟಿ.ಎಚ್. ಪ್ರಾಸ್ತಾವಿಕವಾಗಿ ಮಾತನಾಡಿ, ಕರೊನಾ ಕಾಲದ ನಂತರ ಶಾಸಕ ದಿನಕರ ಶೆಟ್ಟಿ ಪ್ರಯತ್ನ ಹಾಗೂ ರೋಟರಿ ಸಹಯೋಗದಿಂದ ಆಸ್ಪತ್ರೆಯು ಸಾಕಷ್ಟು ಉನ್ನತಿ ಕಂಡಿದೆ.
ಪ್ರಸ್ತುತ ಟ್ರಾಮಾಸೆಂಟರ್‌ನಲ್ಲಿ ಶಸಚಿಕಿತ್ಸೆ ಉಪಕ್ರಮಗಳನ್ನು ಆರಂಭಿಸಲು ತುರ್ತಾಗಿ ಸುಮಾರು 6 ಲಕ್ಷ ರೂ.ಗಳ ಉಪಕರಣಗಳ ಅವಶ್ಯಕತೆ ಇದ್ದು, ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ.
ಫಿಸಿಯೋಥೆರಪಿ, ರಿಹೆಬಿಲಿಟೇಷನ್ ಹಾಗೂ ಮೇಜರ್ ಆರ್ಥೋಪಿಡಿಕ್ ಉಪಕರಣಗಳಿಗೆ, ಕನಿಷ್ಟ 6 ಮಂದಿಯಾದರೂ ಸ್ಟ್ಾ ಬೇಕು. ಇದಕ್ಕೆಲ್ಲ ಹೆಚ್ಚಿನ ಅನುದಾನದ ಅಗತ್ಯವಿದೆ ಎಂದು ಆರೋಗ್ಯ ಸಚಿವರಲ್ಲಿ ಮನವಿ ಮಾಡಿದರು.

ಪರಿಸ್ಥಿತಿ ಗಮನಿಸಿ ವರ್ಗಾವಣೆ ನಿರ್ಧಾರ

ಕುಮಟಾ ಟ್ರಾಮಾ ಸೆಂಟರ್ ಉದ್ಘಾಟನೆಗೆ ಆಗಮಿಸಿದ್ದ ಸಚಿವ ಯು.ಟಿ. ಖಾದರ್ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರತಿ ಜಿಲ್ಲೆಯಲ್ಲಿ ಒಂದೊಂದು ಸರ್ಕಾರಿ ಟ್ರಾಮಾ ಸೆಂಟರ್ ಮತ್ತು ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ ಸ್ಥಾಪಿಸಲು ಯೋಜಿಸಲಾಗುತ್ತಿದೆ.
ಅಪಘಾತದ ವೇಳೆ ಆಂಬುಲೆನ್ಸ್ ಬರುವುದು ತಡವಾಗದಂತೆ ಕ್ರಮ ವಹಿಸಲಾಗುವುದು. ಕಾರವಾರದಲ್ಲಿಯ ಉತ್ತರ ಕನ್ನಡ ಜಿಲ್ಲಾ ಆಸ್ಪತ್ರೆ ಸ್ಥಳಾಂತರವನ್ನು ಶಿರಸಿ ಅಥವಾ ಕುಮಟಾಕ್ಕೆ ಮಾಡಬೇಕೆಂಬ ಬೇಡಿಕೆ ಕುರಿತು ಪ್ರತಿಕ್ರಿಯಿಸಿ, ಬೇಡಿಕೆ ಎಲ್ಲರೂ ಇಟ್ಟಿದ್ದಾರೆ, ಆದರೆ, ಯಾರದೇ ವಿರೋಧವಿಲ್ಲ.
ಪರಿಸ್ಥಿತಿ ಗಮನಿಸಿ ವರ್ಗಾವಣೆ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದರು. ಸಚಿವ ಸಂಪುಟ ವಿಸ್ತರಣೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿ, ನಮ್ಮಲ್ಲಿ ಯಾವುದೇ ಗೊಂದಲವಿಲ್ಲ. ಎಲ್ಲರೂ ಒಗ್ಗಟ್ಟಾಗಿದ್ದೇವೆ.
ಹೈಕಮಾಂಡ್ ಆದೇಶದಂತೆ ಸಂಪುಟ ವಿಸ್ತರಣೆ ನಡೆಯಲಿದೆ ಎಂದರು. ನೀಟ್ ಪರೀಕ್ಷೆಯ ಬಗ್ಗೆ ನೈತಿಕ ಹೊಣೆಗಾರಿಕೆ ಹೊತ್ತು ವಿದ್ಯಾರ್ಥಿಗಳ ಭವಿಷ್ಯದ ವಿಷಯದಲ್ಲಿ ತೊಂದರೆಯಾಗದಂತೆ ನೋಡಿಕೊಳ್ಳುವುದು ಪ್ರಧಾನಮಂತ್ರಿ ಮತ್ತು ಕೇಂದ್ರ ಸರ್ಕಾರದ ಹೊಣೆಗಾರಿಕೆಯಾಗಿದೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net