ಶಿಲಾಮಯ ಶೆಜ್ಜೇಶ್ವರ ದೇವಸ್ಥಾನ ನಿರ್ಮಾಣಕ್ಕೆ ಶೃಂಗೇರಿ ಶ್ರೀಗಳಿಂದ ಶಂಕುಸ್ಥಾಪನೆ

ಶೇಜ್ಜೇಶ್ವರ ದೇವಸ್ಥಾನಕ್ಕೆ ಶೃಂಗೇರಿ ಶ್ರೀಗಳು ಶಂಕುಸ್ಥಾಪನೆ ನೆರವೇರಿಸಿದರು.
ಶೇಜ್ಜೇಶ್ವರ ದೇವಸ್ಥಾನಕ್ಕೆ ಶೃಂಗೇರಿ ಶ್ರೀಗಳು ಶಂಕುಸ್ಥಾಪನೆ ನೆರವೇರಿಸಿದರು.
Published on
ಕಾರವಾರ: ಪುರಾತನ ದೇವಸ್ಥಾನಗಳ ಜೀರ್ಣೋದ್ಧಾರ ಮಾಡಿ, ಅಲ್ಲಿ ಸಂಪ್ರದಾಯ ಬದ್ಧವಾಗಿ ಹಾಗೂ ಶಾಸ್ತ್ರಬದ್ಧವಾಗಿ ಪೂಜೆ, ಪುನಸ್ಕಾರಗಳು ನಡೆಯುವಂತೆ ನೋಡಿಕೊಳ್ಳುವುದು ಅತ್ಯಂತ ಪುಣ್ಯದ ಕೆಲಸ ಎಂದು ಶೃಂಗೇರಿ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳು ನುಡಿದರು.
ತಾಲೂಕಿನ ಶೇಜವಾಡದ ಪುರಾಣ ಪ್ರಸಿದ್ಧ ಶೆಜ್ಜೇಶ್ವರ ದೇವಸ್ಥಾನದ ಪುನರ್ನಿಮಾಣ ಕಾರ್ಯಕ್ಕೆ ಭೂಮಿ ಪೂಜೆ, ಶಂಕುಸ್ಥಾಪನೆ ನೆರವೇರಿಸಿ, ಅವರು ಆಶೀರ್ವಚನ ನೀಡಿದರು. ಇಂದು ಅನೇಕರು ಹೊಸ, ಹೊಸ ದೇವಸ್ಥಾನಗಳನ್ನು ಕಟ್ಟುತ್ತಿರುತ್ತಾರೆ. ಆದರೆ, ಅದಕ್ಕಿಂತ ಪುರಾತನ ದೇವಸ್ಥಾನಗಳ ಜೀರ್ಣೋದ್ಧಾರ ಅತ್ಯಂತ ಪುಣ್ಯತಮವಾದದ್ದು. ನಮ್ಮ ಕ್ಷೇತ್ರಗಳು, ಸ್ಥಾನಗಳನ್ನು ಕಾಪಾಡಿಕೊಂಡು, ಅಭಿವೃದ್ಧಿ ಮಾಡಲು ಎಲ್ಲರೂ ಕೈ ಜೋಡಿಸಬೇಕು ಎಂದರು.
ಮನುಷ್ಯ ತನ್ನ ಶ್ರೇಯಸ್ಸಿಗಾಗಿ ಮಾಡಬೇಕಾದ ಅವಶ್ಯಕ ಕಾರ್ಯ ಎಂದರೆ, ಭಗವಂತನ ಆರಾಧನೆ. ಅದರಲ್ಲೂ ಅನಾದಿಕಾಲದಿಂದ ಅದೆಷ್ಟೋ ಪುಣ್ಯ ಕ್ಷೇತ್ರದಗಳಿವೆ. ಅಲ್ಲಿ ಭಗವಂತ ತನ್ನ ಸಾನ್ನಿಧ್ಯದಿಂದ ವಿರಾಜಮಾನನಾಗಿದ್ದಾನೆ. ಅಂಥಹ ಕ್ಷೇತ್ರಗಳ ಮಹತ್ವವನ್ನು, ಮಹಿಮೆಯನ್ನು ತಿಳಿದು, ಶ್ರದ್ಧೆಯನ್ನು ಬೆಳೆಸಿಕೊಂಡು ಅಭಿವೃದ್ಧಿ ಮಾಡಿ, ನಿತ್ಯ, ಪೂಜೆ ಉತ್ಸವಗಳನ್ನು ಮಾಡುತ್ತ, ಕ್ಷೇತ್ರದ ಪಾವಿತ್ರ್ಯವನ್ನು ಕಾಪಾಡುವುದು, ಭಗವದಾರಾಧನೆ ಮಾಡುವುದು ಅವಶ್ಯಕವಾದ ಕಾರ್ಯವಾಗಿದೆ. ಒಂದು ಕ್ಷೇತ್ರದಲ್ಲಿ ಭಗವಂತ ಒಂದೇ ರೀತಿ ವಿರಾಜಮಾನನಾಗಿರುತ್ತಾನೆ. ಆದರೆ, ಭಕ್ತರ ಭಕ್ತಿ ಎಷ್ಟಿದೆ ಎಂಬುದರ ಮೇಲೆ ಆ ಕ್ಷೇತ್ರದ ಅಭಿವೃದ್ಧಿ ನಿರ್ಧಾರವಾಗುತ್ತದೆ ಎಂದರು.
ವಿಶ್ವದ ಸಂಪೂರ್ಣ ವಿವರವನ್ನು ಯಾರಿಗೂ ತಿಳಿದುಕೊಳ್ಳಲು ಸಾಧ್ಯವಾಗಿಲ್ಲ. ಆದರೆ, ನಮ್ಮ ವೇದಗಳು, ಉಪನಿಷತ್ತು ಮುಂತಾದ ಗ್ರಂಥಗಳಲ್ಲಿ ಮನುಷ್ಯನ ಸಾಮಾನ್ಯ ಬುದ್ಧಿಯಿಂದ ಊಹಿಸಲು ಸಾಧ್ಯವಾಗದ ಅಸಾಧಾರಣ ತತ್ವವನ್ನು ತಿಳಿಸಲಾಗಿದೆ. ಪರಮಾತ್ಮನ ಸ್ವರೂಪ ಎಂಬುದು ಅನಂತ. ಈ ಪ್ರಪಂಚ ಪರಮಾತ್ಮನ ಕಾಲುಭಾಗ ಮಾತ್ರ ನಾವು ಕಾಣುತ್ತೇವೆ ಎಂದು ಹೇಳಲಾಗಿದೆ.
ಭಗವಂತನ ಹೆಸರು, ಆರಾಧನಾ ಕ್ರಮ ಒಂದೊAದು ಕಡೆ ಒಂದೊAದು ರೀತಿ ಇದೆ. ಅಲ್ಲಲ್ಲಿ ಬೇರೆ ಮಥ ಪಂತಗಳು ಇದ್ದರೂ ಅದಕ್ಕೆ ಕಾಲ ಪರಿಮಿತಿ ಇದೆ. ಆದರೆ, ಅನಾದಿ ಕಾಲದಿಂದ ಇರುವುದು ಭಾರತೀಯ ಪರಂಪರೆ ಹಾಗೂ ಸನಾತನ ಆಚರಣಾ ಪದ್ಧತಿಯಾಗಿದೆ. ಆದರೆ, ನಮ್ಮ ಸನಾತನ ಆರಾಧನಾ ಪದ್ಧತಿ ಅನಾದಿಕಾಲದಿಂದ ಬಂದಿದೆ. ಪ್ರಪಂಚಕ್ಕೆ ಭಗವಂತನ ಶಕ್ತಿ ತಿಳಿಸಿರುವುದೇ ಹಿಂದು ಧರ್ಮ ಎಂದರು.
ದೇವಸ್ಥಾನ ಪುನರ್ ನಿರ್ಮಾಣ ಸಮಿತಿಯ ಗೌರವ ಅಧ್ಯಕ್ಷ, ಶಾಸಕ ಸತೀಶ ಸೈಲ್ ಮಾತನಾಡಿ, ಗೋಕರ್ಣದ ಆತ್ಮಲಿಂಗವಿರುವ ಪುರಾಣ ಪ್ರಸಿದ್ಧ ಕ್ಷೇತ್ರ ಶೆಜ್ಜೇಶ್ವರ. 22 ಕೋಟಿ ರೂ. ಶಿಲಾಮಯ ದೇವಾಲಯ ನಿರ್ಮಾಣಕ್ಕೆ ಸಂಕಲ್ಪಿಸಲಾಗಿದ್ದು, ಸರ್ಕಾರದಿಂದ 17 ಕೋಟಿ ರೂ. ಬಿಡುಗಡೆ ಮಾಡಿದ್ದೇನೆ ಎಂದರು.
ಮಾಜಿ ಶಾಸಕಿ ರೂಪಾಲಿ ನಾಯ್ಕ, ದೇವಸ್ಥಾನ ಪುನರ್ ನಿರ್ಮಾಣ ಸಮಿತಿಯ ಅಧ್ಯಕ್ಷ ಸಮೀರ ನಾಯ್ಕ, ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಜಯಪ್ರಕಾಶ ಜಿ.ಕೆ.ರಾಮ್ ಹಾಗೂ ಸಮಿತಿಯ ಸದಸ್ಯರು, ಭಕ್ತರು ಇದ್ದರು. ಭೂಮಿ ಪೂಜೆಗೂ ಪೂರ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net