ಯಾಣ ಪ್ರವೇಶಕ್ಕೆ ಅರಣ್ಯ ಇಲಾಖೆ ನಿರ್ಬಂಧ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಕಾರವಾರ/ಶಿರಸಿ:
ಪ್ರವಾಸಿಗರ ಸುರಕ್ಷತೆಯ ನೆಪದಲ್ಲಿ ಎಲ್ಲ ಸ್ಥಳಗಳಿಗೆ ಪ್ರವೇಶವನ್ನೇ ನಿರ್ಬಂಧಿಸುವ ಬಗ್ಗೆ ಜಿಲ್ಲೆಯ ಪ್ರವಾಸೋದ್ಯಮಗಳಿಂದ ಆಕ್ಷೇಪ ವ್ಯಕ್ತವಾಗಿದೆ. ಕನ್ಸರ್ವೇಟರ್ ಅವರ ಸೂಚನೆಯಂತೆ ಜಿಲ್ಲೆಯ ಅರಣ್ಯ ಇಲಾಖೆಯ ವ್ಯಾಪ್ತಿಯೊಳಗಿನ ಜಲಪಾತ ಹಾಗೂ ಎಲ್ಲ ಸ್ಥಳಗಳಿಗೂ ಪ್ರವೇಶ ನಿರ್ಬಂಧ ವಿಧಿಸಿ ಡಿಎಫ್‌ಒಗಳು ಆದೇಶ ಮಾಡಿದ್ದಾರೆ. ಉತ್ತರ ಕನ್ನಡದ ಮಾಬಗಿ, ಸಾತೊಡ್ಡಿ ಮುಂತಾದ ಪ್ರಸಿದ್ಧ ಜಲಪಾತಗಳಿಗೆ, ಯಾಣ ಕ್ಷೇತ್ರಕ್ಕೂ ಪ್ರವೇಶ ನಿರ್ಬಂಧಿಸಲಾಗಿದೆ.
ಉತ್ತರ ಕನ್ನಡ ಎಂದರೆ ಮಳೆ, ಕಾಡು, ಜಲಪಾತಗಳು. ಮಳೆಗಾಲ ಬಂದಾಗ ಜಲಪಾತಗಳು ಉಕ್ಕಿ ಹರಿಯುತ್ತವೆ. ಮಳೆಗಾಲದಲ್ಲಿ ಜಲಪಾತ ನೋಡುವುದೇ ಸೊಬಗು. ಅದಕ್ಕಾಗಿಯೇ ಹಲವು ಪ್ರವಾಸಿಗರು ಬರುತ್ತಾರೆ. ಆದರೆ, ಮಳೆಗಾಲ ಬಂದಾಕ್ಷಣ ಎಲ್ಲ ಜಲಪಾತಗಳಿಗೆ ನಿರ್ಬಂಧ ವಿಧಿಸುವುದರಿಂದ ಪ್ರವಾಸೋದ್ಯಮಕ್ಕೆ ಅರ್ಥವೇ ಉಳಿಯುವುದಿಲ್ಲ ಎಂಬುದು ಪ್ರವಾಸೋದ್ಯಮಗಳ ಅಭಿಪ್ರಾಯ.
ಪ್ರವಾಸಿಗರು ನೀರಿಗಿಳಿದು ಹುಚ್ಚಾಟ ಮಾಡುವುದಕ್ಕೆ ನಿರ್ಬಂಧ ಹೇರಲಿ. ಅವುಗಳನ್ನು ತಡೆಯಲು ಪೊಲೀಸ್, ಅರಣ್ಯ, ಪ್ರವಾಸೋದ್ಯಮ ಇಲಾಖೆಯಿಂದ ಸಿಬ್ಬಂದಿ ನಿಯೋಜಿಸಲಿ. ಅಥವಾ ಗ್ರಾಮ ಅರಣ್ಯ ಸಮಿತಿಯಂಥ ಸ್ಥಳೀಯ ಸಮಿತಿಗಳಿಗೆ ಆ ಜವಾಬ್ದಾರಿ ವಹಿಸಿ, ಅವರಿಗೂ ಆದಾಯವಾಗುವಂತೆ ಮಾಡಲಿ. ಪ್ರವಾಸಿ ಸ್ಥಳಗಳಲ್ಲಿ ಬ್ಯಾರಿಗೇಡ್, ಬೇಲಿ ಮುಂತಾದ ಸುರಕ್ಷತೆಯ ಕ್ರಮಗಳನ್ನು ಕೈಗೊಳ್ಳಲಿ. ಆದರೆ, ದೂರಿನಿಂದ ನೋಡಿ ಬರಬಹುದಾದ ಸ್ಥಳಗಳಿಗೂ ನಿರ್ಬಂಧ ವಿಧಿಸುವುದರಿಂದ ಜಿಲ್ಲೆಯ ಪ್ರವಾಸೋದ್ಯಮದ ಮೇಲೆ ಭಾರಿ ಹೊಡೆತ ಬೀಳಲಿದೆ ಎಂಬ ಆರೋಪ ಕೇಳಿ ಬಂದಿದೆ.
ಯಾಣ ಪ್ರವೇಶ ನಿರ್ಬಂಧ
ಯಾಣದ ಭೈರವೇಶ್ವರ ದೇವಸ್ಥಾನಕ್ಕೆ ಬರುವ ಭಕ್ತರಿಗೆ ತಡೆ ಉಂಟುಮಾಡುತ್ತಿರುವ ಬಗ್ಗೆ ಸ್ಥಳೀಯರು ಮತ್ತು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನದಿ ರಾಫ್ಟಿಂಗ್ ಚಟುವಟಿಕೆಗಳು, ನದಿಗಳು, ಜಲಾಶಯಗಳು, ಹಿನ್ನೀರು, ಅಳಿವೆಗಳು ಮತ್ತು ಇತರ ಒಳನಾಡು ಜಲಮೂಲಗಳಲ್ಲಿ ಬೋಟಿಂಗ್ (ದೋಣಿ ವಿಹಾರ) ಚಟುವಟಿಕೆಗಳು, ಎಲ್ಲ ಜಲಕ್ರೀಡೆಗಳು ಮತ್ತು ಸಾಹಸ ಚಟುವಟಿಕೆಗಳು, ಸ್ಕೂಬಾ ಡೈವಿಂಗ್ ಮತ್ತು ಎಲ್ಲ ರೀತಿಯ ನೀರೊಳಗಿನ ಮನರಂಜನಾ ಚಟುವಟಿಕೆಗಳನ್ನು ಜಿಲ್ಲಾಧಿಕಾರಿ ಅವರು ನಿಷೇಽಸಿ ಆದೇಶ ಹೊರಡಿಸಿದ್ದಾರೆ. ಪ್ರವಾಸಿ ಸ್ಥಳಗಳಿಗೆ ನಿರ್ಬಂಧ ಹೇರಿಲ್ಲ. ಅರಣ್ಯ ಇಲಾಖೆಯ ಸಿಸಿಎಫ್ ಅವರ ಆದೇಶದಂತೆ ಡಿಎಫ್‌ಒಗಳು ಎಲ್ಲ ಪ್ರವಾಸಿ ಸ್ಥಳಗಳ ಪ್ರವೇಶಕ್ಕೆ ನಿರ್ಬಂಧ ಹೇರಿ ಆದೇಶ ಹೊರಡಿಸಿದ್ದಾರೆ.
ಮಳೆಗಾಲದಲ್ಲಿ ಭೂಕುಸಿತ, ರಸ್ತೆ ಹಾನಿ, ಕಾಲು ಜಾರಿ ಅಪಘಾತ ಸಂಭವಿಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಈ ಆದೇಶ ಮಾಡಿದೆ. ಆದರೆ, ಈ ನಿರ್ಬಂಧದ ಹೆಸರಿನಲ್ಲಿ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡುವುದನ್ನೂ ತಡೆಯುವುದು ಸರಿಯಲ್ಲ. ಮಳೆಗಾಲದ ಅವಧಿಯಲ್ಲಿ ಯಾಣಕ್ಕೆ ಆಗಮಿಸುವ ಭಕ್ತರು ಹಾಗೂ ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ನಿಯಮಗಳನ್ನು ಜಾರಿಗೊಳಿಸುವುದು ಅಗತ್ಯವಾದರೂ, ಧಾರ್ಮಿಕ ಕ್ಷೇತ್ರಕ್ಕೆ ಭೇಟಿ ನೀಡುವ ಭಕ್ತರಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಬೇಕು. ಅರಣ್ಯ ಇಲಾಖೆ ಹಾಗೂ ಸಂಬಂಧಿತ ಅಧಿಕಾರಿಗಳು ದೇವಸ್ಥಾನ ಆಡಳಿತದೊಂದಿಗೆ ಚರ್ಚಿಸಿ, ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗದಂತೆ ಹಾಗೂ ಸುರಕ್ಷತೆಯನ್ನೂ ಖಾತ್ರಿಪಡಿಸುವ ರೀತಿಯಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಕುಮಟಾ ಕಡೆಯಿಂದಲೂ ನಿರ್ಬಂಧ

ಕುಮಟಾ:ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯ ಹಿನ್ನೆಲೆಯಲ್ಲಿ, ಸಾರ್ವಜನಿಕರ ಸುರಕ್ಷತೆಯ ಹಿತದೃಷ್ಟಿಯಿಂದ ಪ್ರಸಿದ್ಧ ಪ್ರವಾಸೀ ತಾಣವಾದ ಯಾಣದ ಭೈರವೇಶ್ವರ ಶಿಲಾಶಿಖರದ ಗುಹೆಗಳ ಪ್ರದೇಶಕ್ಕೆ ಪ್ರವಾಸಿಗರ ಪ್ರವೇಶವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಪರಿಸ್ಥಿತಿ ಸುರಕ್ಷಿತವಾಗುವವರೆಗೆ ಪ್ರವಾಸಿಗರು ಯಾಣಕ್ಕೆ ಭೇಟಿ ನೀಡುವುದನ್ನು ತಪ್ಪಿಸಿ, ಅರಣ್ಯ ಇಲಾಖೆಯ ನಿರ್ದೇಶನಗಳಿಗೆ ಸಹಕರಿಸುವಂತೆ ಅರಣ್ಯ ಇಲಾಖೆಯು ಪ್ರಕಟಣೆಯಲ್ಲಿ ವಿನಂತಿಸಿದೆ.
ಯಾಣದ ಚಂಡಿಕಾ ಹೊಳೆಯು ತುಂಬಿ ಹರಿಯುತ್ತಿದ್ದು, ಮಳೆಯಿಂದಾಗಿ ಜಾರುವ ದಾರಿಗಳು, ಮರಗಳು ಬೀಳುವ ಸಾಧ್ಯತೆ ಹಾಗೂ ಭೂಕುಸಿತದ ಅಪಾಯ ಇರುವುದರಿಂದ ಸಾರ್ವಜನಿಕರ ಜೀವ ಮತ್ತು ಸುರಕ್ಷತೆಯೇ ಮೊದಲ ಆದ್ಯತೆಯಾಗಿದೆ. ಹವಾಮಾನ ಪರಿಸ್ಥಿತಿ ಸುಧಾರಿಸಿದ ನಂತರ ಪ್ರವೇಶ ಪುನರಾರಂಭದ ಕುರಿತು ಪ್ರತ್ಯೇಕವಾಗಿ ಮಾಹಿತಿ ನೀಡಲಾಗುವುದು. ಸಾರ್ವಜನಿಕರು ಅನಗತ್ಯ ಪ್ರಯಾಣವನ್ನು ತಪ್ಪಿಸಬೇಕು ಎಂದು ಕತಗಾಲ ವಲಯ ಅರಣ್ಯಾಕಾರಿ ಪ್ರೀತಿನಂದನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
"

ಅಪಾಯಕಾರಿ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರಿಗೆ ನಿರ್ಬಂಧ ವಿಧಿಸಿರುವುದಕ್ಕೆ ನಮ್ಮ ಅಭ್ಯಂತರವಿಲ್ಲ. ಯಾಣದ ದೇವಸ್ಥಾನಕ್ಕೆ ತೆರಳುವ ರಸ್ತೆಯಲ್ಲಿ ಯಾವುದೇ ಅಪಾಯಕಾರಿ ಸ್ಥಳಗಳಿಲ್ಲ. ಮಳೆಗಾಲದಲ್ಲಿ ಆಗಮಿಸುವ ಭಕ್ತರು ಯಾಣದ ಗುಹೆಯೊಳಗೆ ಹೋಗದಂತೆ ನಾವೇ ತಡೆಯಲು ಮುಂದಾಗಿದ್ದೇವೆ. ಆದರೆ ದೇವರ ದರ್ಶನಕ್ಕಾಗಿ ಬರುವ ಭಕ್ತರಿಗೆ ದೇವಸ್ಥಾನ ಪ್ರವೇಶವನ್ನೇ ನಿರಾಕರಿಸುವುದು ಸಮಂಜಸವಲ್ಲ. ಈ ಕುರಿತು ಹಿರಿಯ ಅಧಿಕಾರಿಗಳು ಸೂಕ್ತ ಕ್ರಮ ವಹಿಸಬೇಕಿದೆ.

ರಾಮಚಂದ್ರ ಭಟ್ಟ, ಯಾಣ ದೇವಸ್ಥಾನದ ಅಧ್ಯಕ್ಷ

"

ಪ್ರವಾಸೋದ್ಯಮ ಇಲಾಖೆಯ ಯಾವುದೇ ಸ್ಥಳಗಳಿಗೆ ನಿರ್ಬಂಧ ಹೇರಿಲ್ಲ. ಜಿಲ್ಲೆಯ 8 ಜಲಪಾತಗಳಿಗೆ ಸುರಕ್ಷತೆಯ ಫಲಕಗಳನ್ನು ಹಾಕಲಾಗಿದೆ. 13 ಜಲಪಾತಗಳ ಬಳಿ ಸುರಕ್ಷತೆಗೆ ಹೋಂ ಗಾರ್ಡ್ಗಳನ್ನು ನೇಮಿಸಲು ಸಿಬ್ಬಂದಿಯನ್ನು ಒದಗಿಸುವಂತೆ ಹೋಂ ಗಾರ್ಡ್ಗೆ ಪತ್ರ ಬರೆಯಲಾಗಿದೆ.ಮಂಗಳಗೌರಿ ಭಟ್ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net