ಲಂಚಕ್ಕೆ ಬೇಡಿಕೆ ಇಟ್ಟ ಅರಣ್ಯ ಇಲಾಖೆ ಅಧಿಕಾರಿಗಳು

ಲಂಚ
ಲಂಚ
Published on

ಪ್ರಮುಖ ಮುಖ್ಯಾಂಶಗಳು

  • ಪಂಚನಾಮೆ ಮಾಡಿ ಅನುಮತಿ ನೀಡಲು 10 ಸಾವಿರ ಬೇಡಿಕೆ
  • ಲೋಕಾಯುಕ್ತ ಪೊಲೀಸ್‌ಗೆ ದೂರು
ಮುಂಡಗೋಡ: ಹಳೆ ಮನೆಯ ಕಟ್ಟಿಗೆ ಪಂಚನಾಮೆ ಮಾಡಿ ಅನುಮತಿ ಕೊಡಲು ಹತ್ತುಸಾವಿರ ರೂ. ಲಂಚ ಕೇಳಿದ ಗುಂಜಾವತಿ ಉಪವಲಯ ಅರಣ್ಯಾಧಿಕಾರಿ ಹಾಗೂ ಅರಣ್ಯ ರಕ್ಷಕನ ವಿರುದ್ಧ ರೈತನೊಬ್ಬ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ ಘಟನೆ ಜರುಗಿದೆ.
ತಾಲೂಕಿನ ಉಗ್ಗಿನಕೇರಿ ಗ್ರಾಮದ ರಮೇಶ ವಾಲ್ಮೀಕಿ ತಮ್ಮ ಹಳೇ ಮನೆಯನ್ನು ತೆರವುಗೊಳಿಸಿ, ಹೊಸ ಮನೆ ನಿರ್ಮಿಸಿಕೊಳ್ಳಲು ಹಳೆ ಮನೆಯ ಕಟ್ಟಿಗೆಯನ್ನು ಅದೇ ಸ್ಥಳದಲ್ಲಿ ಕೆತ್ತನೆ ಮಾಡಿಕೊಂಡು ಪುನಃ ಮನೆಗೆ ಅಳವಡಿಸಿಕೊಳ್ಳಲು ಅನುಕೂಲ ಮಾಡಿ ಕೊಡುವಂತೆ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಗುಂಜಾವತಿ ಉಪ ವಲಯ ಅರಣ್ಯಾಧಿಕಾರಿ ಬಸವರಾಜ ಯಾದವಾಡ ಹಾಗೂ ಯರೇಬೈಲ್ ಅರಣ್ಯ ರಕ್ಷಕ ನಿಸಾರ್ ಪಾಶಾ ಎಂಬವರು ಮನೆಗೆ ಬಂದು ಹಳೆ ಕಟ್ಟಿಗೆ ಅಳತೆ ಮಾಡಿಕೊಂಡು, ಅನುಮತಿ ನೀಡಲು 10 ಸಾವಿರ ರೂ. ಲಂಚ ಕೇಳಿದ್ದರು. ರಮೇಶ ತಮ್ಮ ಬಳಿ ಹಣವಿಲ್ಲ ಎಂದು ಹೇಳಿದ್ದಕ್ಕೆ, ಮರು ದಿನ 8 ಸಾವಿರ ನೀಡು, ಇಲ್ಲದಿದ್ದರೆ ಅನುಮತಿ ನೀಡುವುದಿಲ್ಲ ಎಂದು ತಿಳಿಸಿದ್ದಾರೆ.
ನಿಸಾರ್ ಪಾಶಾ
ಬಸವರಾಜ ಯಾದವಾಡ
ಈ ಕುರಿತು ರಮೇಶ ವಾಲ್ಮೀಕಿ ಕಾರವಾರ ಲೋಕಾಯುಕ್ತ ಪೊಲೀಸ್‌ಗೆ ದೂರು ಸಲ್ಲಿಸಿದ್ದು, ಇಬ್ಬರು ಅಧಿಕಾರಿಗಳಿಗೂ ನೋಟಿಸ್ ನೀಡಿದ್ದಾರೆ. ಅಲ್ಲದೆ ಮೇ 13ರಂದು ಲೋಕಾಯುಕ್ತ ಕಚೇರಿಗೆ ತೆರಳಿ ಅರಣ್ಯ ಇಲಾಖೆಯ ಅಧಿಕಾರಿಗಳು ದೂರಿನ ಬಗ್ಗೆ ಮಾಹಿತಿ ನೀಡಲಿದ್ದಾರೆ ಎನ್ನಲಾಗಿದೆ.
ಜತೆಗೆ ಮುಂಡಗೋಡ ವಲಯ ಅರಣ್ಯಾಧಿಕಾರಿ ಅಪ್ಪಾರಾವ್ ಕಲಶೆಟ್ಟಿ ಅವರು ಗುಂಜಾವತಿ ಉಪ ಅರಣ್ಯಾಧಿಕಾರಿ ಬಸವರಾಜ ಹಾಗೂ ಅರಣ್ಯ ರಕ್ಷಕ ನಿಸಾರ್‌ಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ.

ನಮ್ಮ ಇಲಾಖೆಯ ಗುಂಜಾವತಿ ವ್ಯಾಪ್ತಿಯ ಇಬ್ಬರು ಸಿಬ್ಬಂದಿ ಮೇಲೆ ಲೋಕಾಯುಕ್ತ ದೂರು ದಾಖಲಾಗಿದೆ. ಈ ಬಗ್ಗೆ ತನಿಖೆ ನಡೆಸಿ ಲೋಕಾಯುಕ್ತರು ಯಾವ ರೀತಿ ವರದಿ ಸಲ್ಲಿಸುತ್ತಾರೋ ಅದರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುತ್ತೇವೆ.

— ಡಾ.ಹರ್ಷಬಾನು ಜಿ.ಪಿ. ಡಿಎಫ್‌ಒ, ಯಲ್ಲಾಪುರ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net