ಫುಟ್‌ಪಾತ್ ಅಂಗಡಿ ತೆರವು ಜಾತ್ರೆ! Footpath

ಯಲ್ಲಾಪುರದ ಚರ್ಚ್ ಕಾಂಪ್ಲೆಕ್ಸ್ ಎದುರಿನ ರಸ್ತೆ ಪಕ್ಕ ಹಾಗೂ ಫುಟ್‌ಪಾತ್ (Footpath) ಮೇಲೆ ಇರುವ ಅಂಗಡಿಗಳು.
ಯಲ್ಲಾಪುರದ ಚರ್ಚ್ ಕಾಂಪ್ಲೆಕ್ಸ್ ಎದುರಿನ ರಸ್ತೆ ಪಕ್ಕ ಹಾಗೂ ಫುಟ್‌ಪಾತ್ (Footpath) ಮೇಲೆ ಇರುವ ಅಂಗಡಿಗಳು.
Published on

ಪ್ರಮುಖ ಮುಖ್ಯಾಂಶಗಳು

  • ಫೆಬ್ರವರಿಯಲ್ಲಿ ಗ್ರಾಮದೇವಿ ಉತ್ಸವ ಹಿನ್ನೆಲೆ
  • ಖುಲ್ಲಾ ಮಾಡಲು ಯಲ್ಲಾಪುರ ಪಪಂ ನೋಟಿಸ್
  • ಕಳೆದ ವರ್ಷವೂ ನಡೆದಿತ್ತು ಪ್ರಹಸನ
ಯಲ್ಲಾಪುರ: ಪಟ್ಟಣದಲ್ಲಿ ವಿವಿಧೆಡೆ ರಸ್ತೆಯ ಪಕ್ಕ, ಫುಟ್‌ಪಾತ್‌ಗಳನ್ನು (Footpath) ಅತಿಕ್ರಮಿಸಿ, ವ್ಯಾಪಾರ ನಡೆಸುತ್ತಿರುವವರಿಗೆ ಅಂಗಡಿ ತೆರವು ಮಾಡಬೇಕು ಎಂದು ಪಟ್ಟಣ ಪಂಚಾಯಿತಿ ಎಚ್ಚರಿಕೆ ನೀಡಿದೆ.
ಫೆಬ್ರವರಿಯಲ್ಲಿ ಗ್ರಾಮದೇವಿ ಜಾತ್ರೆ ನಡೆಯುವ ಹಿನ್ನೆಲೆಯಲ್ಲಿ ವಾಹನಗಳು, ಜನರ ಸಂಚಾರಕ್ಕೆ ತೊಂದರೆಯಾಗಬಾರದು ಎಂಬ ನೆಲೆಯಲ್ಲಿ ಅಂಗಡಿಗಳನ್ನು ಒಂದು ವಾರದಲ್ಲಿ ತೆರವು ಮಾಡಬೇಕು.
ಇಲ್ಲವಾದರೆ ಪಟ್ಟಣ ಪಂಚಾಯಿತಿಯಿಂದಲೇ ಕಾರ್ಯಾಚರಣೆ ನಡೆಸಲಾಗುವುದು ಎಂದು ಪ್ರಕಟಣೆ ಹೊರಡಿಸಲಾಗಿದೆ.
ಹಲವು ವರ್ಷಗಳಿಂದ ಸಾರ್ವಜನಿಕರು ಈ ಸಮಸ್ಯೆ ಬಗ್ಗೆ ಸ್ಥಳೀಯ ಆಡಳಿತದ ಗಮನ ಸೆಳೆಯುತ್ತಲೇ ಬಂದಿದ್ದಾರೆ. ಆದರೂ ಕಣ್ಣು ಮುಚ್ಚಿ ಕುಳಿತಿದ್ದ ಪಟ್ಟಣ ಪಂಚಾಯಿತಿ ಇದೀಗ ಜಾತ್ರೆ ಹೆಸರಲ್ಲಿ ಫುಟ್‌ಪಾತ್ ತೆರವಿಗೆ ಮುಂದಾಗಿರುವುದು ಅಲ್ಪ ಮಟ್ಟಿನ ನೆಮ್ಮದಿಗೆ ಕಾರಣವಾಗಿದೆ.
ಜಾತ್ರೆಗೆ ಮಾತ್ರ ಸೀಮಿತವಾಗದಿರಲಿ ತೆರವು: ಈ ಅಂಗಡಿಗಳಿದ್ದರೆ ಜಾತ್ರೆಯ ಸಂದರ್ಭದಲ್ಲಿ ಅಡಚಣೆ ಉಂಟಾಗುತ್ತದೆ ಎನ್ನುವ ಉದ್ದೇಶ ಸರಿಯಾದದ್ದೇ. ಆದರೆ, ಜಾತ್ರೆ ಹೊರತುಪಡಿಸಿ ಉಳಿದ ದಿನಗಳಲ್ಲೂ ವಾಹನಗಳ ಸಂಚಾರ, ಜನರ ಓಡಾಟ ಇದ್ದೇ ಇರುತ್ತದೆ.
ಆಗಲೂ ಈ ಅಂಗಡಿಗಳಿಂದ ತೊಂದರೆಯಾಗುತ್ತದೆ ಈ ಹಿನ್ನೆಲೆಯಲ್ಲಿ ಈ ತೆರವು ಕಾರ್ಯ ಜಾತ್ರೆ ನಂತರವೂ ಜಾರಿಯಲ್ಲಿರಲಿ ಎಮಬುದು ಸಾರ್ವಜನಿಕರ ಆಶಯವಾಗಿದೆ.

ಸಾರ್ವಜನಿಕರ ಮನವಿಗಿಲ್ಲವೇ ಬೆಲೆ?

ರಸ್ತೆ ಪಕ್ಕದಲ್ಲಿ ಫುಟ್‌ಪಾತ್ ಆಕ್ರಮಿಸಿಕೊಂಡು ಬೀದಿ ವ್ಯಾಪಾರ ಮಾಡುತ್ತಿರುವ ಅಂಗಡಿಗಳಿಂದಾಗಿ ಸಾರ್ವಜನಿಕರು, ಪಾದಚಾರಿಗಳು, ಶಾಲಾ ಮಕ್ಕಳು ಓಡಾಡಲು ಸ್ಥಳಾವಕಾಶ ಇರುವುದಿಲ್ಲ. ಎಷ್ಟೋ ಜನ ರಸ್ತೆಯ ಮೇಲೆ ಅಪಾಯ ಎಂದು ಅರಿತೂ, ವಾಹನಗಳ ನಡುವೆ ತೂರಿಕೊಂಡು ಓಡಾಡುತ್ತಿದ್ದಾರೆ.
ಈ ಬಗ್ಗೆ ಎಷ್ಟೋ ಬಾರಿ ಸಾರ್ವಜನಿಕರು, ಸಂಘ- ಸಂಸ್ಥೆಗಳ ಪ್ರಮುಖರು ಪಟ್ಟಣ ಪಂಚಾಯಿತಿ ಗಮನಕ್ಕೆ ತಂದಿದ್ದಾರೆ. ಆಗೆಲ್ಲ ಆಡಳಿತ ಯಾವುದೇ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರಲ್ಲಿ ಬೇಸರ ತರಿಸಿತ್ತು.
ಇದೀಗ ಜಾತ್ರೆ ಹೆಸರಿನಲ್ಲಿ ತೆರವುಮಾಡಲು ಮುಂದಾಗಿರುವುದು ಎಷ್ಟರ ಮಟ್ಟಿಗೆ ಯಶ ಕಾಣಲಿದೆ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿರುವುದಂತು ಸತ್ಯ.

ಕಳೆದ ವರ್ಷವೂ ನಡೆದಿತ್ತು ಪ್ರಹಸನ!

ಕಳೆದ ವರ್ಷ ಸಾಮಾನ್ಯ ಸಭೆಯಲ್ಲಿ ಈ ವಿಷಯ ಪ್ರಸ್ತಾಪವಾದಾಗ ತಕ್ಷಣ ತೆರವುಗೊಳಿಸುವ ನಿರ್ಣಯ ಕೈಗೊಳ್ಳಲಾಯಿತು. ಅಂಗಡಿಕಾರರಿಗೆ ಒಂದು ವಾರದ ಅವಧಿ ನೀಡಿ, ಸ್ವತಃ ಖುಲ್ಲಾಪಡಿಸದ ಅಂಗಡಿಗಳನ್ನು ಪಟ್ಟಣ ಪಂಚಾಯಿತಿಯವರೇ ಹೋಗಿ ಖುಲ್ಲಾಪಡಿಸಲು ಕ್ರಮ ಕೈಗೊಂಡದ್ದೂ ಆಗಿತ್ತು.
ಆದರೆ, ಕೆಲವೇ ದಿನಗಳಲ್ಲಿ ಮತ್ತೆ ಅಂಗಡಿಗಳು ಫುಟ್‌ಪಾತ್‌ಗಳಲ್ಲಿ ಪ್ರತ್ಯಕ್ಷವಾಗಿದ್ದವು. ಈಗ ಜಾತ್ರೆಯ ನೆಪ ಹೇಳಿ ಮತ್ತೆ ಖುಲ್ಲಾಪಡಿಸಲು ಪಟ್ಟಣ ಪಂಚಾಯಿತಿ ಮುಂದಾಗಿದೆ.
‘ಜಾತ್ರೆಯ ಸಲುವಾಗಿ’ ಎಂದು ಪಟ್ಟಣ ಪಂಚಾಯಿತಿಯೇ ಹೇಳಿರುವ ಕಾರಣ, ಜಾತ್ರೆ ಮುಗಿದ ನಂತರ ಮತ್ತೆ ಎಲ್ಲ ಅಂಗಡಿಗಳೂ ಅದೇ ಸ್ಥಾನದಲ್ಲಿ ಸ್ಥಾಪಿತವಾಗುವುದು ಖಚಿತ ಎಂಬ ಮಾತು ಸ್ಥಳೀಯರಿಂದ ಕೇಳಿಬರುತ್ತಿದೆ.
ಆದರೆ ಸ್ಥಳೀಯ ಆಡಳಿತಕ್ಕೆ ನಿಜವಾಗಿಯೂ ವಾಹನ ಸವಾರರು, ಪಾದಚಾರಿಗಳು, ವಿದ್ಯಾರ್ಥಿಗಳ ಮೇಲೆ ಕಳಕಳಿ ಇರುವುದೇ ಸತ್ಯವಾದಲ್ಲಿ, ಜಾತ್ರೆಯ ನಂತರವೂ ರಸ್ತೆಯ ಪಕ್ಕ, ಫುಪ್‌ಪಾತ್‌ಗಳಲ್ಲಿ ಅತಿಕ್ರಮಣವಾಗದಂತೆ ನೋಡಿಕೊಳ್ಳುವ ಬದ್ಧತೆಯನ್ನು ತೋರಿಸಬೇಕು ಎಂಬುದು ಸ್ಥಳೀಯರ ಆಗ್ರಹ.

ಯಲ್ಲಾಪುರದಲ್ಲಿ ಬೆಲ್ ರಸ್ತೆ ಹಾಗೂ ಬಸ್ ನಿಲ್ದಾಣದಿಂದ ಪೊಲೀಸ್ ಠಾಣೆವರೆಗಿನ ರಸ್ತೆಯ ಪಕ್ಕ, ಫುಟ್‌ಪಾತ್ ಮೇಲೆ ಅಂಗಡಿಗಳೇ ತುಂಬಿರುತ್ತವೆ. ಕಾಟಾಚಾರಕ್ಕೆ ತೆರವು ಕಾರ್ಯಾಚರಣೆ ನಡೆಸುವುದು, ಮತ್ತೆ ಅದೇ ಸ್ಥಳದಲ್ಲಿ ಅವಕಾಶ ಮಾಡಿಕೊಡುವ ಚಾಳಿ ಮೊದಲು ಬಿಡಬೇಕು. ಸಮರ್ಪಕವಾಗಿ ಕ್ರಮ ಕೈಗೊಳ್ಳುವ ಇಚ್ಛಾಶಕ್ತಿ ಆಡಳಿತ ವರ್ಗದವರಲ್ಲಿ ಇಲ್ಲದೇ ಇರುವುದು ಈ ಅವ್ಯವಸ್ಥೆಗೆ ಮುಖ್ಯ ಕಾರಣ.

ಗ್ರಾಮದೇವಿ ಜಾತ್ರೆ ಸಮೀಪಿಸುತ್ತಿರುವುದರಿಂದ ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕಾದ ಹೊಣೆ ನಮ್ಮದು. ಇದು ಕೇವಲ ಜಾತ್ರೆಗೆ ಸೀಮಿತವಾಗುವುದಿಲ್ಲ. ಜಾತ್ರೆಯ ನಂತರವೂ ಅಂಗಡಿಕಾರರು ಮತ್ತೆ ಅತಿಕ್ರಮಿಸದಂತೆ ಕ್ರಮ ಕೈಗೊಳ್ಳುತ್ತೇವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net