ನಕಲಿ ದಾಖಲೆ ಸೃಷ್ಟಿಸಿದ ಐವರ ಬಂಧನ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಕಾರವಾರ: ನಕಲಿ ದಾಖಲೆ ಸೃಷ್ಟಿಸಿ ಜಮೀನು ಪರಬಾರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂಕೋಲಾ ಸಬ್ ರಿಜಿಸ್ಟ್ರರ್‌ ಕಚೇರಿಯ ಸಿಬ್ಬಂದಿ ಸೇರಿ ಒಟ್ಟು ಐವರನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.

ಸಬ್ ರಿಜಿಸ್ಟ್ರರ್‌ ಕಚೇರಿಯ ಡೇಟಾ ಎಂಟ್ರಿ ಆಪರೇಟರ್ ಹೊನ್ನೆಕೇರಿ ಕ್ರಾಸ್‌ನ ಶಂಕರ ರಾಮದಾಸ ಅಣ್ವೇಕರ್,ಬಾಳೆಗುಳಿಯ ಮಂಜುನಾಥ ಆನಂದು ಗೌಡ,ರವಿ ಜಟ್ಟಿ ನಾಯ್ಕ , ಬೆಳಸೆಯ ದರ್ಶನ ನಾರಾಯನ ಗೌಡ , ಯಂಕು ಹುಲಿಯಾ ಗೌಡ ಬಂಽತರು. ಕಾರವಾರ ಡಿವೈಎಸ್‌ಪಿ ಗಿರೀಶ ಎಸ್.ವಿ. ಅವರ ನೇತೃತ್ವದ ತಂಡ ತನಿಖೆ ನಡೆಸಿ, ಸಿಸಿ ಕ್ಯಾಮರಾದ ದೃಶ್ಯಾವಳಿಗಳನ್ನು ಗಮನಿಸಿ ಮೂರವನ್ನು ಬಂಽಸಿದ್ದು, ಅವರು ಕೃತ್ಯ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಎಸ್‌ಪಿ ಕಚೇರಿಯ ಪ್ರಕಟಣೆ ತಿಳಿಸಿದೆ.
ಕಾರ್ಯಾಚರಣೆಯಲ್ಲಿ ಇನ್ಸ್ಪೆಕ್ಟರ್ ಚಂದ್ರಶೇಖರ ಮಠಪತಿ, ಪಿಎಸ್‌ಐ ಗಳಾದ ಗುರುನಾಥ ಹಾದಿಮನಿ, ವಿಶ್ವನಾಥ ನಿಂಗೋಳ್ಳಿ, ಲಲಿತಾ ರಜಪೂತ, ಸಿಬ್ಬಂದಿ ಸಿಎಚ್‌ಸಿಗಳಾದ ಮೊಹಮ್ಮದ್‌ಶಫಿ ಶೇಖ್, ಮಹಾದೇವ ಸಿದ್ದಿ, ಸಿಬ್ಬಂದಿ ಗಿರೀಶ ಲಮಾಣಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಹಿನ್ನೆಲೆ:

ಅಂಕೋಲಾದ ಬೊಗ್ರಿಬೈಲ್ ಗ್ರಾಮದ ಫಕ್ರುದ್ದೀನ್ ಸಯ್ಯದ್ ಅವರ ಮಕ್ಕಳಾದ ಇಮ್ತಿಯಾಜ್ ಮತ್ತು ಯಾಕೂಬ್ ಸಯ್ಯದ್ ಅವರ ಹೆಸರಿನ ಸರ್ವೇ ನಂಬರ್ 79/A4 ನ 1.14 ಎಕರೆ ಆಸ್ತಿಯನ್ನು ಇದೇ ವರ್ಷ ಫೆಬ್ರವರಿಯಲ್ಲಿ ತೆಗೆಸಿ ನೋಡಿದಾಗ ದೇವಿದಾಸ ನಾಗೇಶ ಗುನಗಾ ಎಂಬುವವರ ಹೆಸರಿನಲ್ಲಿತ್ತು. ಈರಣ್ಣ ನೀಲಪ್ಪ ಶಿರಿಯಮ್ಮನವರ್ ಅವರ ಹೆಸರಿಗೆ ಮಾರಾಟ ಮಾಡಲಾಗಿತ್ತು. ನಕಲಿ ದಾಖಲೆ, ಸೃಷ್ಟಿಸಿ ನಕಲಿ ದಾಖಲೆಗೆ ಸಹಿ ಮಾಡಿ ಸುಳ್ಳು ವ್ಯಕ್ತಿಗಳನ್ನು ಹಾಜರುಪಡಿಸಿ, ಮಾರಾಟ ಕರಾರು ಪತ್ರ ತಯಾರಿಸಲಾಗಿತ್ತು. ಈ ಸಂಬಂಧ ಮೂಲ ಜಮೀನುದಾರರು ಪೊಲೀಸ್ ಠಾಣೆಯಲ್ಲಿ 11 ಜನರ ವಿರುದ್ಧ ದೂರು ದಾಖಲಿಸಿದ್ದರು. ಅವರಲ್ಲಿ ಐವರನ್ನು ಬಂಧಿಸಲಾಗಿದ್ದು, ಉಳಿದವರಿಗಾಗಿ ಹುಡುಕಾಟ ನಡೆಸಲಾಗಿದೆ.

ಐದು ಪ್ರಕರಣ ಬಯಲು

ಮೃತರ ಹೆಸರಿನಲ್ಲಿ, ಊರಿನಲ್ಲಿ ಇಲ್ಲದವರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಜಮೀನು ಪರಬಾರೆ ಮಾಡಿದ ೫ ಪ್ರಕರಣಗಳು ಇದೇ ವರ್ಷ ಅಂಕೊಲಾದಲ್ಲಿ ಬಯಲಾಗಿದೆ. ಒಂದು ಪ್ರಕರಣದಲ್ಲಿ ಎಫ್‌ಐಆರ್ ಆಗಿದೆ. ಇನ್ನೊಂದು ಪ್ರಕರಣ ಬಯಲಾದ ಕೆಲವೇ ದಿನದಲ್ಲಿ ತಹಸೀಲ್ದಾರ್ ಮ್ಯುಟೇಶನ್ ಎಂಟ್ರಿ ರದ್ದು ಮಾಡಿದ್ದಾರೆ. ಇತರ ಪ್ರಕರಣಗಳು ಹಾಗೆಯೇ ಉಳಿದಿವೆ. ಈ ಬಗ್ಗೆ ಕಂದಾಯ ಅಽಕಾರಿಗಳು ತನಿಖೆ ನಡೆಸಬೇಕು ಎಂಬುದು ಅಂಕೋಲಾ ಭಾಗದ ಜನರ ಆಗ್ರಹ

ವ್ಯವಸ್ಥೆ ಬದಲು

ಉಪ ನೋಂದಣಿ ಕಚೇರಿಯ ಕಾವೇರಿ ತಂತ್ರಾಂಶ ಹಾಗೂ ಕಂದಾಯ ಇಲಾಖೆ ಭೂಮಿ ತಂತ್ರಾಂಶವನ್ನು ಜೋಡಿಸಲಾಗಿತ್ತು. ಉಪ ನೋಂದಣಿ ಕಚೇರಿಯಲ್ಲಿ ಪರಬಾರೆಯ ಕರಾರು ನೋಂದಣಿಯಾಗಿ ನೋಟಿಸ್ ಅವಧಿ ಮುಗಿಯುತ್ತಿದ್ದಂತೆ ತಾನಾಗಿಯೇ ಮ್ಯುಟೇಶನ್ ಎಂಟ್ರಿಯಾಗುವ ವ್ಯವಸ್ಥೆಯನ್ನು ಕೆಲ ತಿಂಗಳ ಹಿಂದೆ ಜಾರಿಗೆ ತರಲಾಗಿತ್ತು. ಇದರಿಂದ ಹಲವು ಅಕ್ರಮಗಳು 2026 ರ ಜನವರಿಯಿಂದ ಏಪ್ರಿಲ್‌ನಡೆದಿವೆ. ಈ ಅಕ್ರಮಗಳು ಬಯಲಾಗುತ್ತಿದ್ದಂತೆ ವ್ಯವಸ್ಥೆ ಬದಲು ಮಾಡಲಾಗಿದೆ. ಕರಾರು ನೋಂದಣಿಯ ನಂತರ ಮ್ಯುಟೇಶನ್‌ಗೆ ಪ್ರತ್ಯೇಕ ಅರ್ಜಿ ಸಲ್ಲಿಸುವ ಹಳೆಯ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ತಿಳಿಸಿದ್ದಾರೆ. ಅಂಕೋಲಾ ಪ್ರಕರಣದ ಕುರಿತು ಇಲಾಖಾ ತನಿಖೆ ನಡೆಯುತ್ತಿದ್ದು, ನಂತರ ಕ್ರಮ ವಹಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
........
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net