ಆಗಸ್ಟ್‌ 2 ರಂದು ಸಮುದ್ರಕ್ಕಿಳಿಯಲಿವೆ ಬೋಟ್‌ಗಳು

ನೀರಿಗಿಳಿಯಲು ಸಜ್ಜಾದ ದೋಣಿ
ನೀರಿಗಿಳಿಯಲು ಸಜ್ಜಾದ ದೋಣಿ
Published on
ಕಾರವಾರ: ಕಳೆದ 60 ದಿನಗಳಿಂದ ಸ್ಥಗಿತವಾಗಿದ್ದ ಆಳ ಸಮುದ್ರ ಮೀನುಗಾರಿಕೆಯನ್ನು ಮರು ಪ್ರಾರಂಭಿಸಲು ಬಂದರುಗಳಲ್ಲಿ ಸಿದ್ಧತೆ ನಡೆದಿದೆ. ಆಗಸ್ಟ್ 1 ರಿಂದ ಆಳ ಸಮುದ್ರ ಯಾಂತ್ರೀಕೃತ ಮೀನುಗಾರಿಕೆಗೆ ಅವಕಾಶವಿದೆ. ಈಗಾಗಲೇ ಟ್ರಾಲರ್ ಬೋಟ್‌ಗಳ ಮೀನುಗಾರರು ಬೋಟ್‌ಗಳ ದುರಸ್ತಿ ಮಾಡಿಕೊಂಡು ಅವುಗಳಿಗೆ ಬಲೆ, ಬುಟ್ಟಿ, ಹಾಗೂ ಇತರ ಅಗತ್ಯ ಸಾಮಗ್ರಿಗಳನ್ನು ತುಂಬಿಕೊAಡು ಮೀನುಗಾರಿಕೆ ನಡೆಸಲು ಸಜ್ಜಾಗಿದ್ದಾರೆ. ದೋಣಿಗಳಲ್ಲಿ ಕಾರ್ಯ ನಿರ್ವಹಿಸುವ ಕಾರ್ಮಿಕರು ಸಹ ಬಂದಿದ್ದಾರೆ. ಜು.31 ರಂದು ಬೋಟ್‌ಗಳಲ್ಲಿ ಪೂಜೆ ನಡೆಯಲಿದೆ.
ಜಿಲ್ಲೆಯಲ್ಲಿ 1,100 ರಷ್ಟು ನೋಂದಾಯಿತ ಆಳ ಸಮುದ್ರ ಮೀನುಗಾರಿಕೆ ದೋಣಿಗಳಿವೆ. ಅದರಲ್ಲಿ ಟ್ರಾಲರ್, ಪರ್ಸೀನ್ ಹೀಗೆ ವಿವಿಧ ವಿಭಾಗಗಳಿವೆ. ಸದ್ಯ ಇದುವರೆಗೆ 75 ಬೋಟ್‌ಗಳು ಮಾತ್ರ ಡೀಸೆಲ್ ಸಬ್ಸಿಡಿಗಾಗಿ ಮೀನುಗಾರಿಕೆ ಇಲಾಖೆಯಲ್ಲಿ ನೋಂದಣಿ ಮಾಡಿಕೊಂಡು ಮೀನುಗಾರಿಕೆಗೆ ತೆರಳಲು ಸಜ್ಜಾಗಿವೆ. ಹಂತ, ಹಂತವಾಗಿ ಇನ್ನಷ್ಟು ಬೋಟ್‌ಗಳು ಸಮುದ್ರಕ್ಕೆ ಇಳಿಯಲಿವೆ. ಕಾರವಾರದ ಬೈತಖೋಲ್ ಬಂದರಿನ ಟ್ರಾಲರ್ ಬೋಟ್ ಯೂನಿಯನ್ ಸದಸ್ಯರು ಸಭೆ ನಡೆಸಿದ್ದು, ಆಗಸ್ಟ್ 1 ಶನಿವಾರದ ಬದಲು ಆಗಸ್ಟ್ 2 ರಿಂದ ಮೀನುಗಾರಿಕೆಗೆ ಇಳಿಯಲು ನಿರ್ಧರಿಸಿದ್ದೇವೆ ಎಂದು ಕಾರವಾರ ಟ್ರಾಲರ್ ಬೋಟ್ ಮಾಲೀಕ ವೆಂಕಟೇಶ ತಾಂಡೇಲ ತಿಳಿಸಿದರು.
ಆದರೆ, ಆಳ ಸಮುದ್ರಕ್ಕೆ ಇಳಿದು ವಾರಕ್ಕೂ ಹೆಚ್ಚು ಕಾಲ ಮೀನುಗಾರಿಕೆ ನಡೆಸುವ ಪರ್ಸೀನ್ ಬೋಟ್‌ಗಳು ಸಮುದ್ರಕ್ಕೆ ಇಳಿಯಲು ಇನ್ನಷ್ಟು ವಿಳಂಬವಾಗಬಹುದು ಎಂದು ಪರ್ಸೀನ್ ಬೋಟ್ ಮಾಲೀಕರು ತಿಳಿಸಿದ್ದಾರೆ. ಪರ್ಸೀನ್ ಬೋಟ್‌ಗಳಲ್ಲಿ ಹೊರ ರಾಜ್ಯದ ಕಾರ್ಮಿಕರು ಕಾರ್ಯ ನಿರ್ವಹಿಸಿದ್ದಾರೆ. ಅವರು ಇನ್ನೂ ಆಗಮಿಸಿಲ್ಲ. ಕಾರವಾರ ತಾಲೂಕಿಗೇ ಸುಮಾರು 1200 ಕ್ಕೂ ಅಽಕ ಕಾರ್ಮಿಕರು ಆಗಮಿಸಬೇಕಿದ್ದು, ಆಗಸ್ಟ್ 5 ಅಥವಾ 10 ರ ನಂತರ ಪರ್ಸೀನ್ ಬೋಟ್‌ಗಳು ಮೀನುಗಾರಿಕೆಗೆ ಇಳಿಯುವ ಸಾಧ್ಯತೆ ಹೆಚ್ಚಿದೆ ಎನ್ನುತ್ತಾರೆ ಅಽಕಾರಿಗಳು.

ಮೀನುಗಾರರಲ್ಲಿ ಆತಂಕ

ಸಮುದ್ರದಲ್ಲಿ ಉಷ್ಣಾಂಶ ಹೆಚ್ಚಳ, ಮಳೆಯ ಕೊರತೆ ಮೀನುಗಾರಿಕೆಯ ಮೇಲೂ ದುಷ್ಪರಿಣಾಮ ಬೀರುವ ಆತಂಕ ಎದುರಾಗಿದೆ. ನೀರಿನ ಮೇಲ್ಮೈ ಉಷ್ಣಾಂಶ ಹೆಚ್ಚಿದಂತೆ ಮೀನುಗಳು ಹೆಚ್ಚು ಆಳಕ್ಕೆ ತೆರಳುತ್ತವೆ. ಹಾಗೂ ದಡದಿಂದ ದೂರ ಸರಿಯುತ್ತವೆ. ಇದರಿಂದ ದೋಣಿಗಳಿಗೆ ನಿರೀಕ್ಷೆಯಷ್ಟು ಮೀನು ಬೇಟೆ ಆಗುವುದಿಲ್ಲ. ಅಲ್ಲದೇ, ನದಿಗಳ ಕೆಂಪು ನೀರಿನ ಜೊತೆ ಬರುವ ಆಹಾರವನ್ನು ಸೇವಿಸಲು ದೊಡ್ಡ ಪ್ರಮಾಣದಲ್ಲಿ ಮೀನುಗಳು ದಡದತ್ತ ಬರುತ್ತವೆ. ಆದರೆ, ಈ ಬಾರಿ ಮಳೆಯೇ ಇಲ್ಲದ ಕಾರಣ ನದಿಗಳ ನೀರೂ ಹೆಚ್ಚಾಗಿ ಸಮುದ್ರಕ್ಕೆ ಸೇರಿಲ್ಲ ಇದರಿಂದ ಮೀನುಗಾರಿಕೆಯ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನುತ್ತಾರೆ ಹಿರಿಯ ಮೀನುಗಾರ ಸದಾನಂದ ಹರಿಕಂತ್ರ.
ನಾಡದೋಣಿ ಹಾಗೂ ದಡದ ಮೇಲಿನಿಂದಲೇ ಬಲೆ ಹಾಕುವ ಏಂಡಿ ಬಲೆಯ ಮೀನುಗಾರಿಕೆಯಲ್ಲಿ ಮೀನುಗಳ ಕೊರತೆ ಅನುಭವಕ್ಕೆ ಬಂದಿದೆ. ಈಗ ಯಾಂತ್ರೀಕೃತ ಮೀನುಗಾರಿಕೆಗೂ ಮೀನು ಬೀಳುತ್ತದೆಯೋ ಎಂಬ ಆತಂಕ ಇದ್ದೇ ಇದೆ ಎನ್ನುತ್ತಾರೆ ಮೀನುಗಾರರ ಮುಖಂಡ ವೆಂಕಟೇಶ ತಾಂಡೇಲ. ಸಾಮಾನ್ಯವಾಗಿ ಮೀನುಗಾರಿಕೆ ಪ್ರಾರಂಭವಾದ ಮೊದಲ ಒಂದು ವಾರ ಕಾರವಾರದಲ್ಲಿ ಶಿಗಡಿ ಅಥವಾ ಶೆಟ್ಲಿ (ಫ್ರೌನ್ಸ್)ಮೀನುಗಳನ್ನು ಹಿಡಿಯುವ ವಾಡಿಕೆ ಇದೆ. ಕೆಲವು ವರ್ಷ ಒಂದೊAದು ದೋಣಿಗಳಿಗೆ ಟನ್‌ಗಟ್ಟಲೇ ಶಿಗಡಿ ಬಿದ್ದ ಉದಾಹರಣೆಯೂ ಇದೆ. ಆದರೆ, ಈ ಬಾರಿ ಶಿಗಡಿ ಬೀಳುವುದು ಅನುಮಾನವಿದೆ ಎನ್ನುತ್ತಾರೆ ಮೀನುಗಾರರು.
"

ಆಳ ಸಮುದ್ರ ಮೀನುಗಾರಿಕೆಗೆ ಸಿದ್ಧತೆ ನಡೆದಿದೆ. ಅರ್ಜಿ ಸಲ್ಲಿಸಿದ ಎಲ್ಲರ ಡೀಸೆಲ್ ಪಾಸ್‌ಬುಕ್, ನೋಂದಣಿ ಮುಂತಾದ ದಾಖಲೆಗಳನ್ನು ನವೀಕರಣ ಮಾಡುವ ಕಾರ್ಯ ಮಾಡಿದ್ದೇವೆ.

ಪ್ರತೀಕ ಶೆಟ್ಟಿ ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕ



ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net