ಆಂತರಿಕ ಕಚ್ಚಾಟದಲ್ಲಿ ರೈತರ ನಿರ್ಲಕ್ಷ್ಯ

ಶಿರಸಿಯಲ್ಲಿ ಸಂಸದ ವಿಶ್ವೇಶ್ವರ ಹೆಗಗಡೆ ಕಾಗೇರಿ ಮಾತನಾಡಿದರು. ರೂಪಾಲಿ ನಾಯ್ಕ, ಹರಿಪ್ರಕಾಶ ಕೋಣೆಮನೆ, ಸುನೀಲ ಹೆಗಡೆ ಇತರರಿದ್ದರು.
ಶಿರಸಿಯಲ್ಲಿ ಸಂಸದ ವಿಶ್ವೇಶ್ವರ ಹೆಗಗಡೆ ಕಾಗೇರಿ ಮಾತನಾಡಿದರು. ರೂಪಾಲಿ ನಾಯ್ಕ, ಹರಿಪ್ರಕಾಶ ಕೋಣೆಮನೆ, ಸುನೀಲ ಹೆಗಡೆ ಇತರರಿದ್ದರು.
Published on
ಶಿರಸಿ: ರಾಜ್ಯ ಕಾಂಗ್ರೆಸ್ ಸರ್ಕಾರ ಕಳೆದ ಎರಡುವರೆ ವರ್ಷಗಳಿಂದ ವೈಫಲ್ಯದ ಉತ್ತುಂಗದಲ್ಲಿದೆ. ಈಗ ಅಧಿಕಾರದ ದಾಹದಿಂದಾಗಿ ಆಂತರಿಕ ಕಚ್ಚಾಟ ಆರಂಭವಾಗಿದ್ದು, ಸದ್ಯ ಸರಿ ದಾರಿಗೆ ಬರುವಂತೆ ಕಾಣುತ್ತಿಲ್ಲ. ಈ ನಡುವೆ ರೈತರ ಪರಿಸ್ಥಿತಿಯನ್ನು ಕೇಳುವವರೇ ಇಲ್ಲದಂತಾಗಿದ್ದು, ಇದನ್ನೆಲ್ಲ ಖಂಡಿಸಿ ಬಿಜೆಪಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಮತ್ತು ಡಿ. 6ರಂದು ಶಿರಸಿಯಲ್ಲಿ ಜಿಲ್ಲಾ ಮಟ್ಟದ ಬೃಹತ್ ಪ್ರತಿಭಟನೆ ನಡೆಸಲಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹಗರಣವೇ ಕಾಂಗ್ರೆಸ್ ಸರ್ಕಾರದ ಅಜೆಂಡಾ ಆಗಿದೆ. ಅಧಿಕಾರಿಗಳ ವರ್ಗಾವಣೆ ದಂಧೆ ಜೋರಾಗಿದೆ. ಅಭಿವೃದ್ಧಿಗೆ ಹಣವಿಲ್ಲ, ಗುತ್ತಿಗೆದಾರರಿಗೆ ಕಾಮಗಾರಿಯ ಹಣ ಬಂದಿಲ್ಲ. ಇನ್ನೊಂದೆಡೆ ಅಲ್ಪ ಸಂಖ್ಯಾತರ ತುಷ್ಟೀಕರಣ, ಅಪರಾಧಿಗಳ ರಕ್ಷಿಸುವ ಕಾರ್ಯ ಸರ್ಕಾರದಿಂದಾಗುತ್ತಿದೆ ಎಂದರು.

ರೈತರ ಬವಣೆ ನೀಗಿಸಬೇಕಾದ ಕೃಷಿ ಸಚಿವ ಚಲುವರಾಯಸ್ವಾಮಿ, ತೊಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ, ಪಶು ಸಂಗೋಪನೆ ಸಚಿವರು, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ಅರಣ್ಯ ಸಚಿವ ಈಶ್ವರ ಖಂಡ್ರೆ ಕಳೆದುಹೋಗಿದ್ದಾರೆ. ದನ, ಕರು ಎಮ್ಮೆ ಕಳೆದು ಹೋಗುವುದನ್ನು ಕೇಳಿದ್ದೇವೆ. ಆದರೆ ಕಾಂಗ್ರೆಸ್ ಸರ್ಕಾರದಲ್ಲಿ ಮಹತ್ವದ ಇಲಾಖೆಗಳ ಮಂತ್ರಿಗಳೇ ಕಳೆದು ಹೋಗಿದ್ದಾರೆ, ಹುಡುಕಿಕೊಡಿ ಎಂದು ಜಿಲ್ಲೆಯಾದ್ಯಂತ ನಡೆಯುವ ಹೋರಾಟದ ಸಂದರ್ಭದಲ್ಲಿ ಆಗ್ರಹ ಮಾಡುತ್ತೇವೆ.

ಡಿ. 6ಕ್ಕೆ ಶಿರಸಿಯಲ್ಲಿ ರೈತ ಪ್ರತಿಭಟನೆ

ಅಡಕೆ ಹಾಗೂ ತೆಂಗು ಬೆಳೆಯುವ ಪ್ರದೇಶದ ಸಂಸದರ ನೇತೃತ್ವದಲ್ಲಿ ಸಭೆ ನಡೆಸಿ, ಪರಿಹಾರದ ಕ್ರಮದ ಕುರಿತು ರಾಜ್ಯಕ್ಕೆ ಪತ್ರ ಬರೆಯಲಾಗಿತ್ತು. ಆದರೆ ರಾಜ್ಯ ಸರ್ಕಾರ ಸೂಕ್ತ ಮಾಹಿತಿಯನ್ನೇ ಒದಗಿಸಿಲ್ಲ. ಶಾಸಕ, ಸಚಿವರಿಗೆ ಹಳದಿ, ಎಲೆಚುಕ್ಕೆ ರೋಗ ಪರಿಹಾರ ನೀಡುವ ಬಗ್ಗೆ ಮಾತೂ ಬರುತ್ತಿಲ್ಲ. ಕರಾವಳಿಯಲ್ಲಿ ಮೀನುಗಾರರ ಅನೇಕ ಸಮಸ್ಯೆಗಳಿವೆ. ಕಾಡುಪ್ರಾಣಿಗಳ ಹಾವಳಿಯಿಂದ ಪರಿಹಾರ ಹಣ ಕಾಲ ಕಾಲಕ್ಕೆ ಹೆಚ್ಚಳ ಮಾಡಲಾಗುತ್ತಿತ್ತು. ಅದರ ಬಗ್ಗೆ ಮಾತನಾಡುತ್ತಿಲ್ಲ. ಮಳೆಮಾಪನ ಕೇಂದ್ರ ಹಾಳಾಗಿರುವುದನ್ನು ರಾಜ್ಯ ಸರ್ಕಾರ ಸರಿಪಡಿಸದಿದ್ದರೂ ಶಾಸಕರು, ಜಿಲ್ಲಾ ಸಚಿವರು ಬಾಯಿಮುಚ್ಚಿಕೊಂಡಿದ್ದಾರೆ. ಈ ಎಲ್ಲದರ ಹಿನ್ನೆಲೆಯಲ್ಲಿ ರೈತ ವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟಕ್ಕೆ ಶಕ್ತಿ ಹೆಚ್ಚಿಸುವ ಉದ್ದೇಶದಿಂದ ಡಿ.6 ರಂದು ಶಿರಸಿಯಲ್ಲಿ ಜನಪರ ನೋಟ ರೈತಪರ ಹೋರಾಟ ಹಮ್ಮಿಕೊಳ್ಳಲಾಗಿದೆ.
ಡಿ. 2ರಂದು ಭಟ್ಕಳ, ಹಳಿಯಾಳ ಹಾಗೂ ಡಿ. 3ರಂದು ಕುಮಟಾ, ಕಾರವಾರ, ಮುಂಡಗೋಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ರೈತರ ವಿವಿಧ ಬೇಡಿಕೆ ಈಡೇರಿಕೆ ರೈತರ ಪರವಾಗಿ ಹೋರಾಟಕ್ಕೆ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ವಿನಂತಿಸಿದರು.
ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಹಾಗೂ ಮಾಜಿ ಶಾಸಕಿ ರೂಪಾಲಿ ನಾಯ್ಕ ಮಾತನಾಡಿ, ರೈತರ ಸಮಸ್ಯೆ ಬಗ್ಗೆ ಹೋರಾಟ ನಡೆಯುತ್ತಿದೆ. ಯಡಿಯೂರಪ್ಪ ಹಾಗೂ ಬೊಮ್ಮಾಯಿ ಸರ್ಕಾರ ರೈತರಿಗೆ ನೀಡಿದ ಅನುದಾನವನ್ನು ಕಾಂಗ್ರೆಸ್ ಸರ್ಕಾರ ಕಡಿತ ಮಾಡಿದೆ. ಮೀನುಗಾರರ ಸಮಸ್ಯೆ ಬಗ್ಗೆ ಧ್ವನಿ ಎತ್ತುತ್ತಿಲ್ಲ. ಕೇಣಿ ವಾಣಿಜ್ಯ ಬಂದರು ಯೋಜನೆ ಜಾರಿಗೊಳಿಸಿದ್ದಾರೆ ಎಂದರು.
ರಾಜ್ಯ ವಕ್ತಾರ ಹರಿಪ್ರಕಾಶ ಕೊಣೇಮನೆ, ಮಾಜಿ ಶಾಸಕ ಸುನೀಲ ಹೆಗಡೆ, ಕೆ.ಜಿ. ನಾಯ್ಕ, ಸದಾನಂದ ಭಟ್ಟ, ಗುರುಪ್ರಸಾದ ಹೆಗಡೆ, ಬನವಾಸಿ ಮಂಡಳ ಅಧ್ಯಕ್ಷ ರಮೇಶ ನಾಯ್ಕ, ಡಾನಿ ಡಿಸೋಜಾ, ಆರ್.ವಿ. ಹೆಗಡೆ ಚಿಪಗಿ, ರಾಘವೇಂದ್ರ ನಾಯ್ಕ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net