ಮೃತರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ವಂಚನೆ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಕಾರವಾರ:
ನಕಲಿ ದಾಖಲೆ ಸೃಷ್ಟಿಸಿ ಜಮೀನು ಪರಭಾರೆ ಮಾಡುವ ಜಾಲವೊಂದು ಅಂಕೋಲಾದಲ್ಲಿ ಪತ್ತೆಯಾಗಿದ್ದು, ಎರಡು ಪ್ರಕರಣಗಳು ಬೆಳಕಿಗೆ ಬಂದಿದ್ದು, ಕಂದಾಯ ಅಧಿಕಾರಿಗಳು ಮತ್ತಷ್ಟು ಹುಡುಕಾಟ ಆರಂಭಿಸಿದ್ದಾರೆ.
ಹೊರ ಊರುಗಳಲ್ಲಿರುವ, ಮೃತರ ಹೆಸರುಗಳಲ್ಲಿ ನಕಲಿ ದಾಖಲೆ ಸೃಷ್ಟಿಸಿ, ಅವರ ಹೆಸರಿನ ಜಮೀನನ್ನು ಅಂಕೋಲಾ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಬೇರೆಯವರ ಹೆಸರಿಗೆ ನೋಂದಣಿ ಮಾಡಿಸಿ ಲಪಟಾಯಿಸುವ ಕಾರ್ಯ ನಡೆದಿದೆ. ಇದೇ ವರ್ಷ ಜನವರಿ, ಫೆಬ್ರವರಿ ತಿಂಗಳುಗಳಲ್ಲಿ ನಡೆದ ನೋಂದಣಿ ಪ್ರಕ್ರಿಯೆಗಳು ಈಗ ಬೆಳಕಿಗೆ ಬಂದಿವೆ.
ಅಂಕೋಲಾ ಬೊಗ್ರಿಬೈಲ್ ಸರ್ವೇ ನಂಬರ್ 25 ರ ಹಿಸ್ಸಾ ನಂಬರ್ 1 ರ 7 ಎಕರೆ 26 ಗುಂಟೆ ಜಮೀನನ್ನು ಶಿವಮೊಗ್ಗದ ಶಿವಕುಮಾರ ಮುರುಗೇಶ ರಾಮಸ್ವಾಮಿ ಎಂಬುವವರಿಗೆ ಮಾರಾಟ ಮಾಡಿರುವ ಬಗ್ಗೆ ಫೆಬ್ರವರಿ ತಿಂಗಳಲ್ಲಿ ಅಂಕೋಲಾ ಉಪ ನೋಂದಣಿ ಕಚೇರಿಯಲ್ಲಿ ನೋಂದಣಿ ಮಾಡಿಸಲಾಗಿದೆ.
ಆದರೆ, ಜಮೀನಿನ ಮೂಲ 9 ಮಂದಿ ಮಾಲೀಕರಲ್ಲಿ ಹಲವರು ಈಗಾಗಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಕೆಲವರಂತೂ ಮೃತಪಟ್ಟು 40 ವರ್ಷಗಳೇ ಕಳೆದಿವೆ ಎಂಬ ಮಾಹಿತಿ ಕಂದಾಯ ಅಽಕಾರಿಗಳಿಗೆ ತಿಳಿದು ಬಂದಿದೆ. ಆದರೆ, ಅವರ ಹೆಸರಿನಲ್ಲಿ ನಕಲಿ ವ್ಯಕ್ತಿಗಳು, ಆಧಾರ ಕಾರ್ಡ್ಗಳನ್ನು ಸೃಷ್ಟಿಸಿ ನೋಂದಣಿ ಮಾಡಲಾಗಿರುವುದು ಈಗ ಬೆಳಕಿಗೆ ಬಂದಿದೆ. ಆರ್‌ಟಿಸಿ ಎಂಟ್ರಿಗಾಗಿ ತಹಸೀಲ್ದಾರ್ ಕಚೇರಿಗೆ ಬಂದಾಗ ಶಿರಸ್ತೇದಾರ್ ಅವರು ಅನುಮಾನ ಬಂದು ಪರಿಶೀಲಿಸಿದಾಗ ಪ್ರಕರಣ ಬಯಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ಮುಂಬೈನಲ್ಲಿರುವ ಅಂಕೋಲಾ ಮೂಲದ ವ್ಯಕ್ತಿಯೊಬ್ಬರು ಮೇ ತಿಂಗಳಲ್ಲಿ ರಜೆಗೆ ಬಂದು ಆರ್‌ಟಿಸಿ ತೆಗೆಸಿ ನೋಡಿದರೆ ಅವರ ತಂದೆಯ ಹೆಸರಿನ ಜಮೀನು ಅವರ ಹೆಸರಿನಲ್ಲಿರಲಿಲ್ಲ. ಬದಲಾಗಿ ಶಿವಕುಮಾರ ಮುರುಗೇಶ ರಾಮಸ್ವಾಮಿ ಅವರ ಹೆಸರಿಗೆ ಜನವರಿ ತಿಂಗಳಲ್ಲಿ ವರ್ಗಾವಣೆಯಾಗಿತ್ತು. ಸಂಬAಧವೇ ಇಲ್ಲದ ವ್ಯಕ್ತಿಯ ಹೆಸರಿನಲ್ಲಿ ತಮ್ಮ ಕುಟುಂಬದ ಜಮೀನು ವರ್ಗಾವಣೆಯಾಗಿರುವುದು ನೋಂಡಿ ಅವರು ಕಂಗಾಲಾಗಿದ್ದರು. ಈ ಬಗ್ಗೆ ಅವರು ತಹಸೀಲ್ದಾರರಿಗೆ, ಪೊಲೀಸ್‌ಠಾಣೆಗೂ ದೂರು ನೀಡಿದ್ದರು. ಶಿವಮೊಗ್ಗದ ರಾಮಸ್ವಾಮಿ ಹೆಸರಿನಲ್ಲಿ ಇನ್ನೂ ಒಂದು ಜಮೀನು ನೋಂದಣಿಯಾಗಿರುವ ಮಾಹಿತಿ ಇದ್ದು, ಹುಡುಕಲಾಗುತ್ತಿದೆ ಎಂದು ಕಂದಾಯ ಮೂಲಗಳು ತಿಳಿಸಿವೆ.

ದೊಡ್ಡ ಜಾಲದ ಶಂಕೆ

ಇದು ಕೇವಲ ನಕಲಿ ದಾಖಲೆ ಸೃಷ್ಟಿ ಪ್ರಕರಣವಲ್ಲ. ಭೂ ವ್ಯವಹಾರದ ದೊಡ್ಡ ಜಾಲದ ಶಂಕೆಯೇ ಇದೆ. ಇದರಲ್ಲಿ ಕಂದಾಯ ಮತ್ತು ನೋಂದಣಿ ಇಲಾಖೆಯ ಅಽಕಾರಿಗಳೂ ಶಾಮೀಲಾಗಿರುವ ಶಂಕೆ ಮೂಡಿದೆ. ಏಕೆಂದರೆ ಊರಿನಲ್ಲಿ ಇರದವರು, ಖಾಲಿ ಇರುವ ಹಲವಾರು ಜನ ಮಾಲೀಕರಿರುವ ಸಾಮೂಹಿಕ ಆಸ್ತಿಗಳ ಮಾಹಿತಿ ಕಂದಾಯ ಇಲಾಖೆ ಅಽಕಾರಿಗಳಿಗೆ ಮಾತ್ರ ಸುಲಭವಾಗಿ ಸಿಗುತ್ತದೆ. ಇನ್ನು ನೋಂದಣಿ ಕಚೇರಿಯಲ್ಲಿ ಯಾವುದೇ ದಾಖಲೆ ನೋಡದೇ ಬೇಕಾಬಿಟ್ಟಿ ನೋಂದಣಿಗಳು ನಡೆಯುತ್ತಿರುವ ಸಾಕಷ್ಟು ಆರೋಪಗಳಿಗೆ ಇದು ಸಾಕ್ಷಿಯಾಗಿದೆ.
"

ನಕಲಿ ದಾಖಲೆ ಸೃಷ್ಟಿಸಿ ಜಮೀನನ್ನು ನೋಂದಣಿ ಮಾಡಿರುವುದು ಗಮನಕ್ಕೆ ಬಂದಿದೆ. ಬೊಗ್ರಿಬೈಲ್ ಪ್ರಕರಣದ ನೋಂದಣಿ ತಡೆ ಹಿಡಿಯಲಾಗಿದೆ. ಆದರೆ, ಇನ್ನೊಂದು ಪ್ರಕರಣದಲ್ಲಿ ನಮ್ಮ ಗಮನಕ್ಕೂ ಬಾರದೇ ಆರ್‌ಟಿಸಿಯಲ್ಲಿ ಹೆಸರು ದಾಖಲಾಗಿದೆ. ಉಪ ನೋಂದಣಾಧಿಕಾರಿಗಳ ವಿರುದ್ಧ ಪ್ರಾಸಿಕ್ಯೂಶನ್‌ಗೆ ಅನುಮತಿ ನೀಡುವಂತೆ ಜಿಲ್ಲಾಧಿಕಾರಿ ಅವರಿಗೆ ಪತ್ರ ಬರೆಯಲಿದ್ದೇನೆ.

ನಿಶ್ಚಲ ನರೋನಾತಹಸೀಲ್ದಾರ್ ಅಂಕೋಲಾ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net