excise department ಅಬಕಾರಿ ಇಲಾಖೆ ಕುರುಡು ನಡೆ

ದಾಂಡೇಲಿಯಲ್ಲಿರುವ ಅಬಕಾರಿ ನಿರೀಕ್ಷಕರ ಕಚೇರಿ.
ದಾಂಡೇಲಿಯಲ್ಲಿರುವ ಅಬಕಾರಿ ನಿರೀಕ್ಷಕರ ಕಚೇರಿ.
Published on

ಪ್ರಮುಖ ಮುಖ್ಯಾಂಶಗಳು

  • ದೇವಸ್ಥಾನಕ್ಕೂ ಮುನ್ನ ತೆರೆಯುವ ಮದ್ಯದಂಗಡಿ
  • ಅಕ್ರಮ ಮಾರಾಟ ಅವ್ಯಾಹತ
  • ದಾಂಡೇಲಿಗರಿಂದ ಆಕ್ರೋಶ
ಅಕ್ಷಯಗಿರಿ ಗೋಸಾವಿ ದಾಂಡೇಲಿ
ನಗರದಲ್ಲಿ ಅಕ್ರಮ ಮದ್ಯ ಮಾರಾಟ ಮತ್ತು ನಿಯಮ ಉಲ್ಲಂಘನೆಗಳ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆರೋಪಗಳು ಕೇಳಿಬರುತ್ತಿವೆ. ಆದರೂ, ಅಬಕಾರಿ ಇಲಾಖೆ ಮಾತ್ರ ಕಣ್ಮುಚ್ಚಿ ಕುಳಿತಿದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ.
ನಗರದ ವಿವಿಧ ಪ್ರದೇಶಗಳಲ್ಲಿ ಅಕ್ರಮ ಮದ್ಯ ಮಾರಾಟ ಅವ್ಯಾಹತವಾಗಿ ನಡೆಯುತ್ತಿದೆ ಎಂಬ ಆರೋಪಗಳಿವೆ. ಕೆಲವೆಡೆ ಪರವಾನಗಿ ಇಲ್ಲದೇ ಮದ್ಯ ಮಾರುತ್ತಿರುವ ಕುರಿತು ಸಾರ್ವಜನಿಕರು ದೂರು ನೀಡುತ್ತಿದ್ದರೂ, ಸಂಬಂಧಪಟ್ಟ ಅಧಿಕಾರಿಗಳಿಂದ ಪರಿಣಾಮಕಾರಿ ಕ್ರಮವಾಗಿಲ್ಲ ಎಂದು ಸ್ಥಳೀಯರು ಅಸಮಾಧಾನ ಮತ್ತು ಆಕ್ರೋಶ ಹೊರಹಾಕುತ್ತಿದ್ದಾರೆ.
ನಿಗದಿತ ಸಮಯಕ್ಕೂ ಮುನ್ನವೇ ಮದ್ಯದಂಗಡಿಗಳ ಬಾಗಿಲು ತೆರೆಯುತ್ತಿದ್ದು, ನಿಯಮಗಳನ್ನು ಉಲ್ಲಂಸಿ ವ್ಯಾಪಾರ ನಡೆಸುತ್ತಿರುವುದರಿಂದ ಸಾರ್ವಜನಿಕ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುತ್ತಿದ್ದರೂ ಅಬಕಾರಿ ಇಲಾಖೆಯ ಅಧಿಕಾರಿಗಳು ಜಾಣ ಕುರುಡರಾಗಿದ್ದಾರೆ. ನಗರದ ಜೆ.ಎನ್. ರಸ್ತೆ, ಸಂಡೇ ಮಾರ್ಕೆಟ್ ಹಿಂಬದಿಯಲ್ಲಿ, ಲಿಂಕ್ ರಸ್ತೆ ಹಾಗೂ ಬರ್ಚಿ ರಸ್ತೆಯಲ್ಲಿರುವ ಮದ್ಯದಂಗಡಿಗಳು ಬೆಳಗ್ಗೆ 7 ಗಂಟೆಗೂ ಮುನ್ನ ಅರ್ಧ ಬಾಗಿಲು ತೆಗೆದು ಹೆಚ್ಚಿನ ದರಕ್ಕೆ ರಾಜಾರೋಷವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆ. ಹೀಗಾಗಿ ಕುಡುಕರಿಂದ ಶಾಲಾ ವಿದ್ಯಾರ್ಥಿಗಳು, ವಾಯವಿಹಾರಿಗಳು ಹಾಗೂ ಪಾದಚಾರಿಗಳಿಗೆ ತೀವ್ರ ತೊಂದರೆಯಾಗುತ್ತಿದೆ. ಕಾನೂನಿನ ಪ್ರಕಾರ ಬೆಳಗ್ಗೆ 10 ಗಂಟೆ ನಂತರ ಮದ್ಯದ ಅಂಗಡಿ ತೆಗೆಯುವ ನಿಯಮವಿದ್ದರೂ ಇಲ್ಲಿಯ ಕೆಲ ಮದ್ಯದಂಗಡಿಯವರು ದೇವಸ್ಥಾನ ಬಾಗಿಲು ತೆರೆಯುವ ಮುನ್ನವೇ ಬಾರ್‌ಗಳನ್ನು ತೆರೆದಿರುತ್ತಾರೆ. ಇದೆಲ್ಲ ಗಮನಕ್ಕಿದ್ದರೂ ಅಬಕಾರಿ ಇಲಾಖೆ ಅಧಿಕಾರಿಗಳು ಮೌನ ವಹಿಸುತ್ತಿರುವುದೇಕೆ ಎಂಬುದು ಯಕ್ಷ ಪ್ರಶ್ನೆಯಾಗಿದೆ.
ರೆಸ್ಟೋರೆಂಟ್ ಹೆಸರಲ್ಲಿ ಮದ್ಯ ಮಾರಾಟ
ಕೆಲವು ಬಾರ್ ಮತ್ತು ರೆಸ್ಟೋರೆಂಟ್ ಎಂದು ಬೋರ್ಡ್ ಹಾಕಿಕೊಂಡು ಅಗತ್ಯ ಪರವಾನಗಿ ನವೀಕರಣವಿಲ್ಲದೆ ಅಥವಾ ಪರವಾನಗಿ ಪಡೆಯದೆ ಮಾರಾಟ ಮಾಡುತ್ತಿವೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ.
ನಗರದ ಕೆಲ ಬೆರಳೆಣಿಕೆಯಷ್ಟೇ ಬಾರ್ ಮತ್ತು ರೆಸ್ಟೋರೆಂಟ್ ಪರವಾನಗಿ ಪಡೆದಿದ್ದು, ಉಳಿದ ಬಹುತೇಕ ಬಾರ್‌ಗಳು ಅಕ್ರಮವಾಗಿ ನಡೆಯುತ್ತಿವೆ. ನಗರದ ಕೆಲ ಹೋಟೆಲ್‌ಗಳಲ್ಲಿ ಸಣ್ಣ ಸಣ್ಣ ಕ್ಯಾಬಿನ ಮಾಡಿ ಅದಕ್ಕೆ ಪರದೆ ಮುಚ್ಚಿ ಮದ್ಯ ಸೇವಿಸಲು ಅವಕಾಶ ನೀಡುತ್ತಿರುವುದನ್ನು ನೋಡಿದರೆ ಇದು ್ಯಾಮಿಲಿ ಹೋಟೆಲಾ? ಅಥವಾ ಬಾರ್ ಎಂದು ಜನರು ಗೊಂದಲಕ್ಕೀರಾಗುವಂತಾಗಿದೆ.
ದಾಂಡೇಲಿ ನಗರದ ಹಳಿಯಾಳ ರಸ್ತೆ , ಬರ್ಚಿ ರಸ್ತೆ, ಬಿರಂಪಾಲಿ ಕ್ರಾಸ್‌ನ ರಾಜ್ಯ ಹೆದ್ದಾರಿ ಪಕ್ಕದ ಅಂಗಡಿ ಹಾಗೂ ನಗರದ ಗಾಂಧಿನಗರ ಹಾಗೂ ಹಳೇ ದಾಂಡೇಲಿ ಜನವಸತಿ ಪ್ರದೇಶದಲ್ಲಿ ಮನೆ ಹಾಗೂ ಗೂಡಂಗಡಿಗಳಲ್ಲಿ ಪರವಾನಗಿ ಇಲ್ಲದೆ ಹೆಚ್ಚಿನ ದರದಲ್ಲಿ ಮದ್ಯ ಮಾರಲಾಗುತ್ತಿದೆ. ಇದಕ್ಕೂ ಕಣ್ಣಾರೆ ಕಂಡರೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಯಾವ ಕ್ರಮವನ್ನೂ ಕೈಗೊಂಡಿಲ್ಲ.
ಅಬಕಾರಿ ಇಲಾಖೆ ಕೂಡಲೆ ಎಚ್ಚೆತ್ತುಕೊಂಡು ಅಕ್ರಮ ಮದ್ಯ ಮಾರಾಟ, ನಿಯಮಬಾಹಿರವಾಗಿ ಕಾರ್ಯನಿರ್ವಹಿಸುತ್ತಿರುವ ಬಾರ್ ಆ್ಯಂಡ್ ರೆಸ್ಟೋರೆಂಟ್ ಹಾಗೂ ಪರವಾನಗಿಯಿಲ್ಲದ ಮದ್ಯ ವ್ಯಾಪಾರ ಕೇಂದ್ರಗಳ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಬೇಕು ಎಂದು ದಾಂಡೇಲಿಗರು ಒತ್ತಾಯಿಸಿದ್ದಾರೆ.

ಅಕ್ರಮ ನಡೆಯದಂತೆ ನಿಗಾ ವಹಿಸಲಾಗಿದೆ. ದೂರುಗಳಿದ್ದಲ್ಲಿ ಪರಿಶೀಲಿಸಿ ಕಾನೂನು ಕ್ರಮ ವಹಿಸಲಾಗುವುದು.

— ಅಮಾನುಲ್ಲಾ ಖಾನ್ ಅಬಕಾರಿ ಉಪ ಆಯುಕ್ತರು,ಕಾರವಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net