ಕಾಳಿ ಹುಲಿ ಸಂರಕ್ಷಿತಾರಣ್ಯದ ಸುತ್ತ 663.32 ಚದರ ಕಿಮೀ ಸಂರಕ್ಷಿತ ವಲಯ

ಇಎಸ್‌ಜಡ್‌ ನಕ್ಷೆ
ಇಎಸ್‌ಜಡ್‌ ನಕ್ಷೆ
Published on
ಕಾರವಾರ: ಕಾಳಿ ಹುಲಿ ಸಂರಕ್ಷಿತ ಅಭಯಾರಣ್ಯ(ಕೆಟಿಆರ್) ಸುತ್ತಲಿನ 663.32 ಚದರ ಕಿಮೀ ವಿಸ್ತೀರ್ಣದ ಪ್ರದೇಶದವನ್ನು ಪರಿಸರ ಸೂಕ್ಷ್ಮ ವಲಯ(ಇಎಸ್‌ಜಡ್) ಎಂದು ಘೋಷಿಸಿ ಕೇಂದ್ರ ಪರಿಸರ, ಅರಣ್ಯ, ಮತ್ತು ಹವಾಮಾನ ಬದಲಾವಣೆ ಸಚಿವಾಲಯ (ಎಂಒಇಎಫ್‌ಸಿಸಿ) ಕರಡು ಅಧಿಸೂಚನೆ ಹೊರಡಿಸಿದೆ. ಅಧಿಸೂಚನೆಗೆ ಪರಿಸರವಾದಿಗಳು ಸ್ವಾಗತಿಸಿದ್ದಾರೆ. ಆದರೆ, ಈ ವ್ಯಾಪ್ತಿಗೆ ಒಳಪಡುವ ಗ್ರಾಮಸ್ಥರು ಆತಂಕ ವ್ಯಪ್ತಪಡಿಸಿದ್ದಾರೆ.
ಏಪ್ರಿಲ್ 2 ರಂದು ಕೇಂದ್ರ ಸರ್ಕಾರದ ಅಧಿಕೃತ ಗೆಜೆಟ್ ಅಧಿಸೂಚನೆ ಪ್ರಕಟವಾಗಿದ್ದು, ಅಂದಿನಿಂದ 60 ದಿನಗಳವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಒಟ್ಟಾರೆ ಇಎಸ್‌ಜಡ್ ವ್ಯಾಪ್ತಿಗೆ ಜೊಯಿಡಾ, ಹಳಿಯಾಳ ಹಾಗೂ ಕಾರವಾರ ತಾಲೂಕುಗಳ 75.33 ಚದರ ಕಿಮೀ ಕಂದಾಯ ಪ್ರದೇಶ, ಜೊಯಿಡಾ, ಕಾರವಾರ, ಯಲ್ಲಾಪುರ, ಹಳಿಯಾಳ ವ್ಯಾಪ್ತಿಯ 88 ಗ್ರಾಮಗಳ3764 ಸರ್ವೇ ನಂಬರ್‌ಗಳ 84.46 ಚದರ ಕಿಮೀ ಕಂದಾಯ ಗ್ರಾಮಗಳು ಹಾಗೂ 503.51 ಚದರ ಕಿಮೀ ಅರಣ್ಯ ಪ್ರದೇಶ ಸೇರಿದೆ.
ಕೆಟಿಆರ್ ವ್ಯಾಪ್ತಿಯ ಉತ್ತರ, ಪಶ್ಚಿಮ ಹಾಗೂ ವಾಯುವ್ಯ ದಿಕ್ಕಿನಲ್ಲಿ ಬೆಳಗಾವಿ ಜಿಲ್ಲೆಯ ಭೀಮಗಡ ವನ್ಯಜೀವಿ ಧಾಮ ಇರುವುದರಿಂದ ಆ ದಿಕ್ಕಿನಲ್ಲಿ ಯಾವುದೇ ಎಸ್‌ಇಜಡ್ ಘೋಷಿಸಿಲ್ಲ. ಈಶಾನ್ಯ ದಿಕ್ಕಿನಲ್ಲಿ 5 ರಿಂದ 10 ಕಿಮೀ, ಪೂರ್ವದಲ್ಲಿ 1 ರಿಂದ 5 ಕಿಮೀ, ದಕ್ಷಿಣದಲ್ಲಿ 1 ರಿಂದ 3 ಕಿಮೀ ನೈರುತ್ಯ ದಿಕ್ಕಿನಲ್ಲಿ 1 ರಿಂದ 5 ಕಿಮೀ ವ್ಯಾಪ್ತಿಯನ್ನು ಎಸ್‌ಇಜಡ್ ಎಂದು ಘೋಷಿಸಲಾಗಿದೆ. ಆಕ್ಷೇಪಣೆ ಸ್ವೀಕೃತವಾಗಿ ಅಂತಿಮ ಅದಿಸೂಚನೆ ಹೊರಟ 2 ವರ್ಷಗಳ ಒಳಗೆ ರಾಜ್ಯ ಸರ್ಕಾರವು ಸರ್ವೇ ನಡೆಸಿ ಈ ನಿಯಮ ಜಾರಿಗೆ ತರಲು ಕ್ರಮವಹಿಸಬೇಕು ಎಂದು ಅಽಸೂಚನೆಯಲ್ಲಿ ತಿಳಿಸಲಾಗಿದೆ.

ಏಕೆ ಅಧಿಸೂಚನೆ..?

ಕಾಳಿ ಹುಲಿ ಸಂರಕ್ಷಿತ ಪ್ರದೇಶವು ಕಾಳಿ ನದಿ ಮತ್ತು ಅದರ ಉಪನದಿಗಳಾದ ನಾಗಝರಿ ಹಾಗೂ ಕಾನೇರಿ ನದಿಗಳ ಪ್ರಮುಖ ಜಲಾನಯನ ಪ್ರದೇಶವಾಗಿದೆ. ಇಲ್ಲಿ ಹುಲಿ, ಚಿರತೆ, ಕಾಡುನಾಯಿ, ಆನೆ, ಚಿಪ್ಪು ಹಂದಿ, ಮಂಗಟ್ಟೆ, ಕ್ಯಾಸಲ್‌ರಾಕ್ ನೈಟ್ ಫ್ರಾಗ್ ಸೇರಿದಂತೆ ಅಪಾಯದಲ್ಲಿರುವ ಮತ್ತು ಸ್ಥಳೀಯವಾಗಿ ಮಾತ್ರ ಕಂಡುಬರುವ ಅನೇಕ ಸಸ್ಯ-ಪ್ರಾಣಿ ಜಾತಿಗಳು ವಾಸಿಸುತ್ತವೆ. ಇವುಗಳ ರಕ್ಷಣೆಗಾಗಿ ಈ ಅಽಸೂಚನೆ ಹೊರಡಿಸಲಾಗಿದೆ ಎಂದು ಕರಡಿನಲ್ಲಿ ತಿಳಿಸಲಾಗಿದೆ.

ಕಾಳಿ ಹುಲಿ ಸಂರಕ್ಷಿತ ಅಭಯಾರಣ್ಯ

ಪ್ರಾರಂಭದಲ್ಲಿ ದಾಂಡೇಲಿ ವೈಲ್ಡ್ಲೈಫ್ ಸೆಂಚುರಿಯ 475.018 ಚದರ್ ಕಿಮೀ, ಅಣಶಿ ನ್ಯಾಷನಲ್ ಪಾರ್ಕ್ನ 339.866 ಚದರ ಕಿಮೀ, ಸೇರಿ ಒಟ್ಟು 814.88 ಚದರ ಕಿಮೀ ಪ್ರದೇಶವನ್ನು ದಾಂಡೇಲಿ, ಅಣಶಿ ಹುಲಿ ಸಂರಕ್ಷಿತ ಅಭಯಾರಣ್ಯ ಎಂದು ಘೋಷಿಸಲಾಯಿತು. ನಂತರ ಅದಕ್ಕೆ ಕಾಳಿ ಹುಲಿ ಸಂರಕ್ಷಿತ ಅಭಯಾರಣ್ಯ ಎಂದು ಮರು ನಾಮಕರಣ ಮಾಡಲಾಯಿತು. ಅದರ ಸುತ್ತಲಿನ ಹುಲಿಗಳ ಓಡಾಟ ಇರುವ 1 ರಿಂದ 10 ಕಿಮೀ ವ್ಯಾಪ್ತಿಯ ಸುಮಾರು 488.81 ಕಿಮೀ ಪ್ರದೇಶವನ್ನು ಬಫರ್ (ಸಂರಕ್ಷಿತ) ವಲಯ ಎಂದು ಘೋಷಿಸಲಾಗಿದೆ. ಒಟ್ಟಾರೆ ಈಗ ಕಾಳಿ ಹುಲಿ ಸಂರಕ್ಷಿತ ಅಭಯಾರಣ್ಯ ವ್ಯಾಪ್ತಿಗೆ ಈಗಾಗಲೇ ಜೊಯಿಡಾ, ದಾಂಡೇಲಿ, ಹಳಿಯಾಳ, ಕಾರವಾರ ತಾಲೂಕುಗಳ 1097.5166 ಕಿಮೀ ಪ್ರದೇಶ ಸೇರಿದೆ. ಈಗ ಘೋಷಣೆಯಾಗಿರುವ ಇಎಸ್‌ಜಡ್ ವಲಯ ಅದಕ್ಕೆ ರಕ್ಷಣಾ ಪ್ರದೇಶವಾಗಿ ಕಾರ್ಯ ನಿರ್ವಹಿಸಲಿದೆ.

ಸಾರ್ವಜನಿಕರ ಆತಂಕ

ತಮ್ಮ ಅವಶ್ಯಕತೆಗಳಿಗೆ ಬೇಕಾಗಿ ವ್ಯಾಪ್ತಿಯ ಒಳಗೇ ಸಾಕಷ್ಟು ಯೋಜನೆಗಳು ಜಾರಿಗೆ ತರುವ ಕೆಟಿಆರ್ ಆಡಳಿತ, ಈ ವ್ಯಪ್ತಿಯ ಜನರಿಗೆ ಅಗತ್ಯ ಮೂಲ ಸೌಕರ್ಯವಾದ ರಸ್ತೆ, ಕುಡಿಯುವ ನೀರು, ಮೊಬೈಲ್ ಟವರ್, ವಿದ್ಯುತ್ ಸಂಪರ್ಕಕ್ಕೂ ಅವಕಾಶ ನೀಡುತ್ತಿಲ್ಲ ಎಂಬ ದೊಡ್ಡ ಆಕ್ಷೇಪ ಸ್ಥಳೀಯರದ್ದು. ಇದೇ ಕಾರಣಕ್ಕೆ ಜೊಯಿಡಾ ಹಾಗೂ ಆ ತಾಲೂಕಿಗೆ ಸೇರಿಕೊಂಡಿರುವ ಕಾರವಾರದ ಗಡಿ ಗ್ರಾಮಗಳು ಇದುವರೆಗೂ ಕುಗ್ರಾಮಗಳಾಗೇ ಉಳಿದಿವೆ. ಈಗ ಈ ವ್ಯಾಪ್ತಿಗೆ ಮತ್ತಷ್ಟು ಪ್ರದೇಶಗಳು ಸೇರ್ಪಡೆಯಾಗುವುದರಿಂದ ಆ ಪ್ರದೇಶಗಳಲ್ಲೂ ಸಾಕಷ್ಟು ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
"

ಉದ್ದೇಶಿತ ಪರಿಸರ ಸೂಕ್ಷ್ಮ ವಲಯ ಅಽಸೂಚನೆಯಲ್ಲಿ ಸಾಕಷ್ಟು ಗೊಂದಲಗಳಿವೆ. ಅವುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಪಾಲುದಾರರ ಸಭೆ ಕರೆಯುವಂತೆ ಕೆಟಿಆರ್ ಡಿಸಿಎಫ್ ಅವರಿಗೆ ಪತ್ರ ಬರೆದಿದ್ದೇನೆ. ಏನೇ ಆಗಲಿ ಸ್ಥಳೀಯದ ದಿನನಿತ್ಯದ ಜೀವನಕ್ಕೆ ಯಾವುದೇ ತೊಂದರೆ ಆಗಬಾರದು. ಪರಿಸರಕ್ಕೆ ಹಾನಿ ಆಗುವಂತಹ ಯೋಜನೆಗಳಿಗೆ ಅನುಮತಿ ನೀಡಬಾರದು.

ಗಿರಿಧರ ಕುಲಕರ್ಣಿ ವನ್ಯಜೀವಿ ಸಂರಕ್ಷಣಾವಾದಿ

"

ದಾಂಡೇಲಿ ವೈಲ್ಡ್ಲೈಫ್ ಸೆಂಚುರಿ ಮತ್ತು ಅಣಶಿ ನ್ಯಾಷನಲ್ ಪಾರ್ಕ್ ಸಂರಕ್ಷಿತ ಪ್ರದೇಶದ ಹೊರಗೆ ಇಎಸ್‌ಜಡ್ ಪ್ರಾರಂಭವಾಗುತ್ತದೆ. ಅಲ್ಲಿ ಎಲ್ಲ ಚಟುವಟಿಕೆಗಳಿಗೂ ನಿರ್ಬಂಧ ಇರುತ್ತದೆ ಎಂಬುದು ತಪು÷್ಪ ಕಲ್ಪನೆ. ಇಎಸ್‌ಜಡ್ ವ್ಯಾಪ್ತಿಯ ಸಂರಕ್ಷಣೆಗೆ ಬೆಳಗಾವಿ ಪ್ರಾದೇಶಿಕ ಆಯುಕ್ತರ ನೇತೃತ್ವದಲ್ಲಿ ಒಂದು ಮೇಲ್ವಿಚಾರಣಾ ಸಮಿತಿ ಇರುತ್ತದೆ. ಅಲ್ಲಿ ಒಂದಿಷ್ಟು ಚಟುವಟಿಕೆಳಿಗೆ ಸಂಪೂರ್ಣ ನಿರ್ಬಂಧ ಇದ್ದರೆ, ಇನ್ನಷ್ಟು ಚಟುವಟಿಕೆಗಳು ನಿಯಂತ್ರಿತವಾಗಿದ್ದು, ಅನುಮತಿ ಪಡೆದು ಮಾಡಬಹುದಾಗಿದೆ. ಕೆಲವು ಚಟುವಟಿಕೆಗಳಿಗೆ ಯಾವುದೇ ಅನುಮತಿ ಬೇಕಾಗಿಲ್ಲ.

ನೀಲೇಶ ಶಿಂಧೆ ಕೆಟಿಆರ್ ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net