ಎಲ್ ಆ್ಯಂಡ್ ಟಿ ಕಂಪನಿ ತಯಾರಿಸಿದ ಈ ಸಾಮಗ್ರಿಯನ್ನು ನೆಬ್ರೋಸ್ ಎಂಬ ಕಂಪನಿಯ ವಿಶೇಷ ವಾಹನದಲ್ಲಿ ಗುಜರಾತ್ ಸೂರತ್‌ನಿಂದ ಕಾರವಾರಕ್ಕೆ ತರಲಾಗಿತ್ತು. 107 ಟನ್ ತೂಕವಿರುವ ಈ ದೈತ್ಯಾಕಾರದ ಉಪಕರಣವು 9.3 ಮೀಟರ್ ಎತ್ತರ ಮತ್ತು ಅಗಲ ಹಾಗೂ 0.920 ಮೀಟರ್ ದಪ್ಪವನ್ನು ಹೊಂದಿದ ಈ ಉಪಕರಣ ಸಾಗಿಸುವುದು ದೊಡ್ಡ ಸವಾಲಾಗಿತ್ತು. ವಿವಿಧೆಡೆ ರಸ್ತೆಯ ಪಕ್ಕ ವಿದ್ಯುತ್ ಕಂಬಗಳನ್ನು ತೆಗೆದು ವಾಹನ ಸಾಗಿಸಲಾಗಿತ್ತು.
ಫೆ.9 ರಂದು ಸಂಚಾರ ಆರಂಭಿಸಿದ ಎಂಡ್ ಶೀಲ್ಡ್ ಎಂಬ ಸಾಮಗ್ರಿ ಆಮೆಯಂತೆ ಸಾಗಿ ಏ.9 ರಂದು ಕಾರವಾರ ತಲುಪಿತ್ತು. ಮೇ 5 ರಂದು ಮಲ್ಲಾಪುರ ತಲುಪಿತ್ತು. ಆದರೆ, ಕೈಗಾ ಅಣು ಸ್ಥಾವರಕ್ಕೆ ತಲುಪಲು ಸ್ವಲ್ಪವೇ ದೂರ ಮೊದಲು ಮೇ 7 ರಂದು ಹರ್ಟೂಗಾ ಗ್ರಾಮದ ಸಮೀಪ ಪಲ್ಟಿಯಾಗಿತ್ತು. ಅದನ್ನು ಸುರಕ್ಷಿತವಾಗಿ ಎತ್ತಿ ಕೈಗಾ ತಲುಪಿಸಲಾಗಿದ್ದು, ಸಾಮಗ್ರಿ ಸುರಕ್ಷಿತವಾಗಿದೆ ಎಂದು ಎನ್‌ಪಿಸಿಐಎಲ್ ಪ್ರಕಟಣೆ ತಿಳಿಸಿದೆ.
ಅತ್ಯಂತ ಸಂಕೀರ್ಣವಾಗಿದ್ದ ಈ ಇಳಿಸುವಿಕೆ ಪ್ರಕ್ರಿಯೆಯನ್ನು ಕಟ್ಟುನಿಟ್ಟಾದ ಯೋಜನೆ ಮತ್ತು ನಿಖರವಾದ ಸಮನ್ವಯದೊಂದಿಗೆ ಯಶಸ್ವಿಯಾಗಿ ನಿರ್ವಹಿಸಲಾಯಿತು. ಈ ಕಾರ್ಯಾಚರಣೆಗಾಗಿ 500 ಟನ್ ಕ್ರೇನ್, 70 ಟನ್ ಕ್ರೇನ್ ಮತ್ತು 10 ಟನ್ ಚೈನ್ ಪುಲ್ಲಿ ಬ್ಲಾಕ್ ಅನ್ನು ಬಳಸಿಕೊಳ್ಳಲಾಗಿತ್ತು ಎಂದು ವಿವರಿಸಲಾಗಿದೆ.
ಏನಿದರ ಪ್ರಾಮುಖ್ಯತೆ?:
ರಿಯಾಕ್ಟರ್ ಎಂಡ್ ಶೀಲ್ಡ್ ರಿಯಾಕ್ಟರ್ ಗರ್ಭದ ಒಂದು ಪ್ರಮುಖ ಉಪಕರಣವಾಗಿದೆ. ಒತ್ತಡದ ಭಾರಜಲ ರಿಯಾಕ್ಟರ್‌ನ ಪ್ರಮುಖ ಭಾಗವಾಗಿರುವ ಇದು, ಕೂಲಂಟ್ ಚಾನೆಲ್ ಜೋಡಣೆಗಳಿಗೆ ಅಗತ್ಯವಾಗಿದೆ ಅಲ್ಲದೆ, ಕಾರ್ಯಾಚರಣೆಯ ಸಮಯದಲ್ಲಿ ಇಂಧನ ಮರುಪೂರಣಕ್ಕೆ ಸುಲಭ ಪ್ರವೇಶ ಒದಗಿಸುತ್ತದೆ ಮತ್ತು ಕ್ಯಾಲ್ಯಾಂಡ್ರಿಯಾ ವಾಲ್ಟ್ ಆವರಣದ ಅವಿಭಾಜ್ಯ ಅಂಗವಾಗಿ ಕೆಲಸ ಮಾಡುತ್ತದೆ ಎಂದು ಎನ್‌ಪಿಸಿಐಎಲ್ ತಿಳಿಸಿದೆ.ಕೈಗಾ 5 ಮತ್ತು 6 ನೇ ಘಟಕಕ್ಕೆ 4 ಎಂಡ್ ಶೀಲ್ಡ್ಗಳು ಬೇಕಾಗಿದ್ದು, ಈಗ ಒಂದು ಮಾತ್ರ ಬಂದಿದೆ. ಇನ್ನೂ ಮೂರು ಪೂರೈಕೆಯಾಗಬೇಕಿದೆ.
ಸ್ವಾವಲಂಬಿ ಭಾರತದತ್ತ ಹೆಜ್ಜೆ:
ಸಂಪೂರ್ಣ ಭಾರತೀಯ ಕಂಪನಿಗಳಿಂದ ಇದು ತಯಾರಾಗಿದ್ದು, ಈ ಕಾರ್ಯವು ಎನ್‌ಪಿಸಿಐಎಲ್ ತಂಡ ಮತ್ತು ಗುತ್ತಿಗೆ ಸಂಸ್ಥೆಗಳ ಇಂಜಿನಿಯರಿಂಗ್ ಸಾಮರ್ಥ್ಯ ನಿಖರತೆ ಹಾಗೂ ಅಛಲ ಬದ್ಧತೆಗೆ ಸಾಕ್ಷಿಯಾಗಿದೆ. ಭಾರತದ ಸ್ವದೇಶಿ ಪರಮಾಣು ವಿದ್ಯುತ್ ಕಾರ್ಯಕ್ರಮವನ್ನು ಮುನ್ನಡೆಸುವಲ್ಲಿ ಮತ್ತು ದೇಶದ ಸುಸ್ಥಿರ ಇಂಧನ ಭವಿಷ್ಯವನ್ನು ಬಲಪಡಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸಲಿದೆ ಎಂದು ಎನ್‌ಪಿಸಿಐಎಲ್ ತಿಳಿಸಿದೆ.