ಪಶ್ಚಿಮಘಟ್ಟಗಳ ಸಂರಕ್ಷಣೆ ಹೆಸರಿನಲ್ಲಿ ಸಿದ್ಧಪಡಿಸಲಾಗಿರುವ ಕಸ್ತೂರಿ ರಂಗನ್ ವರದಿಯನ್ನು ಯಾವುದೇ ಕಾರಣಕ್ಕೂ ಜಾರಿಗೆ ತರಬಾರದು ಎಂದು ಆಗ್ರಹಿಸಿ ಶಾಸಕ ಭೀಮಣ್ಣ ನಾಯ್ಕ ಅವರು ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅವರನ್ನು ಗುರುವಾರ ಭೇಟಿಯಾಗಿ ಮನವಿ ಸಲ್ಲಿಸಿದರು.
ಶಾಸಕರ ಭೇಟಿ ಹಾಗೂ ವಿಷಯದ ತೀವ್ರತೆಯನ್ನು ಪರಿಗಣಿಸಿದ ಸಚಿವರು, ಮಲೆನಾಡು ಭಾಗದ ಜನರ ಹಿತರಣೆಗೆ ಸರ್ಕಾರ ಬದ್ಧವಾಗಿದ್ದು, ಕಸ್ತೂರಿ ರಂಗನ್ ವರದಿ ಕೈಬಿಡುವುದಾಗಿ ಸ್ಪಷ್ಟ ಭರವಸೆ ನೀಡಿದ್ದಾರೆ.
ಮನವಿ ಸಲ್ಲಿಕೆ ವೇಳೆ ಕಸ್ತೂರಿ ರಂಗನ್ ವರದಿ ಜಾರಿಯಾದಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಮತ್ತು ಶಿರಸಿ&ಸಿದ್ದಾಪುರ ಸೇರಿದಂತೆ ಮಲೆನಾಡು ಹಾಗೂ ಕರಾವಳಿ ಭಾಗದ ಜನರು ಅನುಭವಿಸಬೇಕಾಗುವ ಸಂಕಷ್ಟಗಳನ್ನು ಶಾಸಕ ಭೀಮಣ್ಣ ನಾಯ್ಕ ಅವರು ಸಚಿವರಿಗೆ ಮನವರಿಕೆ ಮಾಡಿಕೊಟ್ಟರು.
ಪಶ್ಚಿಮ ಟ್ಟದ 59,949 ಚದರ ಕಿ.ಮೀ. ವ್ಯಾಪ್ತಿಯ ಪ್ರದೇಶವನ್ನು ಇಕೋ ಸೆನ್ಸೀಟಿವ್ ಏರಿಯಾಗೆ ಒಳಪಡಿಸಿ ನಿರ್ಬಂಧ ವಿಧಿಸಲಾಗಿದೆ. ಈ ವ್ಯಾಪ್ತಿಗೆ ಜಿಲ್ಲೆಯ ಒಟ್ಟು 604 ಹಳ್ಳಿಗಳು ಒಳಪಟ್ಟಿದ್ದು, ಇದರಲ್ಲಿ ಶಿರಸಿ ತಾಲೂಕಿನ 125 ಹಾಗೂ ಸಿದ್ದಾಪುರ ತಾಲೂಕಿನ 103 ಹಳ್ಳಿಗಳು ಸೇರಿವೆ. ಈ ವರದಿ ಅನುಷ್ಠಾನಗೊಂಡರೆ ಜನರ ಆರ್ಥಿಕ ಮತ್ತು ಸಾಮಾಜಿಕ ಜೀವನದ ಮೇಲೆ ತೀವ್ರ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದರು.
ಕಸ್ತೂರಿ ರಂಗನ್ ಸಮಿತಿಯು ತನ್ನ ವರದಿಯನ್ನು ಸಲ್ಲಿಸುವಾಗ ಸ್ಥಳಿಯ ಜನರ ಅಭಿಪ್ರಾಯ ಸಂಗ್ರಹಿಸದಿರುವುದರಿಂದ, ಅರಣ್ಯ ಪ್ರದೇಶವನ್ನೇ ನಂಬಿ ಬದುಕುತ್ತಿರುವ ಜನಾಂಗದ ಬದುಕನ್ನು ಕಸಿದುಕೊಂಡಂತಾಗುತ್ತದೆ.
ವರದಿ ಜಾರಿಯಾದಲ್ಲಿ ಗುರುತಿಸಲ್ಪಟ್ಟ ಭೂಭಾಗಗಳು ರಾಜ್ಯದ ನಿಯಂತ್ರಣದಿಂದ ಕೆತಪ್ಪಿ ನೇರವಾಗಿ ಕೇಂದ್ರ ಸರ್ಕಾರದ ನಿಯಂತ್ರಣಕ್ಕೆ ಒಳಪಡಲಿದ್ದು, ಇದು ರಾಜ್ಯದ 10 ಜಿಲ್ಲೆಗಳ ಅಭಿವೃದ್ಧಿ ಹಾಗೂ ಪ್ರಗತಿಗೆ ಅಡ್ಡಿಯಾಗುತ್ತದೆ. ಈ ವರದಿಯನ್ನು ವೈಮಾನಿಕ ದತ್ತಾಂಶದ ಆಧಾರದ ಮೇಲೆ ತಯಾರಿಸಲಾಗಿದ್ದು, ವಾಸ್ತವಿಕ ಹಾಗೂ ನೈಜ ಚಿತ್ರಣವನ್ನು ಪರಿಗಣಿಸಿಲ್ಲ ಎಂದು ಭೀಮಣ್ಣ ಮನವರಿಕೆ ಮಾಡಿಕೊಟ್ಟರು.
ಇದಕ್ಕೆ ಸ್ಪಂದಿಸಿದ ಅರಣ್ಯ ಸಚಿವ ರಾಮಲಿಂಗಾರೆಡ್ಡಿ, ಉತ್ತರ ಕನ್ನಡ ಜಿಲ್ಲೆಯ ಮತ್ತು ಶಿರಸಿ&ಸಿದ್ದಾಪುರ ಭಾಗದ ಜನರ ಹಿತರಣೆ ನಮಗೆ ಮುಖ್ಯವಾಗಿದ್ದು, ಜನರ ಜೀವನಕ್ಕೆ ಮಾರಕವಾಗುವ ಮತ್ತು ಅಭಿವೃದ್ಧಿಗೆ ತೊಡಕಾಗುವ ಕಸ್ತೂರಿ ರಂಗನ್ ವರದಿಯನ್ನು ಕೈಬಿಡಲಾಗುವುದು ಎಂದು ಭರವಸೆ ನೀಡಿದರು.