ಜಿಲ್ಲಾ ಯೋಜನಾ ಸಮಿತಿಗೆ 108 ರಲ್ಲಿ ನಾಲ್ವರು ಸದಸ್ಯರು ಮಾತ್ರ ಆಯ್ಕೆ

ಜಿಲ್ಲಾ ಯೋಜನಾ ಸಮಿತಿ
ಜಿಲ್ಲಾ ಯೋಜನಾ ಸಮಿತಿ
Published on
ಕಾರವಾರ: ಬಹಳ ವರ್ಷಗಳ ಬಳಿಕ ಜಿಲ್ಲಾ ಯೋಜನಾ ಸಮಿತಿಗೆ ಸೋಮವಾರ ಚುನಾವಣೆ ನಡೆಯಿತು. ಆದರೆ, 108 ರಲ್ಲಿ ನಾಲ್ವರು ಸದಸ್ಯರನ್ನು ಮಾತ್ರ ಆಯ್ಕೆ ಮಾಡಲಾಗಿದೆ.
ಮಂಕಿ ಹಾಗೂ ಜಾಲಿ ಪಟ್ಟಣ ಪಂಚಾಯಿತಿ ಕ್ಷೇತ್ರಗಳಿಂದ ಉಲ್ಲಾಸ ಆನಂದ ನಾಯ್ಕ, ಮಹಮದ್ ಸಿದ್ದಿಕ್ ಹಸನ್ ಬಾಪು, ಮಿಸ್ಬಾ ಉಲ್ ಹಕ್ ಉಮರ್ ನಶೀಮನ್ ಹಾಗೂ ಮುನೀರ್ ಅಹ್ಮದ್ ಮೊಹಿದ್ದಿನ್ ಸಾಬ್ ಅವರು ತಲಾ 22 ಮತ ಪಡೆದು ಆಯ್ಕೆಯಾದರು. ಜಿಲ್ಲಾ ಪಂಚಾಯಿತಿ ಸಿಇಒ ಡಾ.ದಿಲೀಶ್ ಶಶಿ ಅವರು ಚುನಾವಣಾಽಕಾರಿಯಾಗಿದ್ದರು. ಎರಡೂ ಪಪಂಗಳ ಸದಸ್ಯರು ಮತದಾರರಾಗಿದ್ದರು.

ಏನಿದು ಜಿಲ್ಲಾ ಯೋಜನಾ ಸಮಿತಿ:

ರಾಜ್ಯ ಸರ್ಕಾರಕ್ಕೆ ಜಿಲ್ಲೆಯ ಅವಶ್ಯಕತೆಗಳ ಬಗ್ಗೆ ಯೋಜನೆ ರೂಪಿಸಿ ಕಳಿಸುವ ಜವಾಬ್ದಾರಿಯನ್ನು ಜಿಲ್ಲಾ ಯೋಜನಾ ಸಮಿತಿ ಹೊಂದಿದೆ. ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯ ಜಿಲ್ಲಾ ಯೋಜನಾ ಸಮಿತಿಗೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಹಾಗೂ ಕಾರವಾರ ನಗರಸಭೆಯ ಅಧ್ಯಕ್ಷರು ಸಹ ಅಧ್ಯಕ್ಷರಾಗಿದ್ದಾರೆ. ಎಲ್ಲ ತಾಲೂಕು ಯೋಜನಾ ಸಮಿತಿಯ ಉಪಾಧ್ಯಕ್ಷರು ಈ ಸಮಿತಿಯ ಆಹ್ವಾನಿತ ಸದಸ್ಯರಾಗಿರುತ್ತಾರೆ. ಉಳಿದಂತೆ ಜನಸಂಖ್ಯೆಗೆಗೆ ಅನುಗುಣವಾಗಿ 108 ಸದಸ್ಯರನ್ನು ವಿವಿಧ ತಾಲೂಕುಗಳಿಂದ ಚುನಾಯಿಸಬೇಕಿದೆ. ನಗರ ಅಥವಾ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಸದಸ್ಯರಾಗಿದ್ದಲ್ಲಿ ಮಾತ್ರ ಈ ಸಮಿತಿಗೆ ಚುನಾಯಿತರಾಗಲು ಅವಕಾಶವಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ನಗರ ಸ್ಥಳೀಯ ಸಂಸ್ಥೆಗಳ ವಿಭಾಗದಿಂದ 32 ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ವಿಭಾಗದಿಂದ 72 ಸದಸ್ಯ ಸ್ಥಾನಗಳಿವೆ.

ನಾಲ್ಕಕ್ಕೆ ಮಾತ್ರ ಅವಕಾಶ:

ಜಿಲ್ಲಾ ಯೋಜನಾ ಸಮಿತಿ ರಚನೆ ಮಾಡಬೇಕು ಎಂಬ ಅಂಶ ಕಾಯ್ದೆಯಲ್ಲಿದ್ದರೂ ಜಿಲ್ಲೆಯಲ್ಲಿ ಚುನಾವಣೆ ನಡೆದು ಯೋಜನಾ ಸಮಿತಿ ರಚನೆಯಾಗಿದ್ದು ಅಪರೂಪ. ಇನ್ನು ಈ ಸಮಿತಿ ಸಭೆ ಸೇರಿ ಜಿಲ್ಲೆಯ ಬೇಡಿಕೆಗಳನ್ನು ರಾಜ್ಯದ ಬಜೆಟ್ ಸಂದರ್ಭದಲ್ಲಿ ತಲುಪಿಸಿದ್ದು ಇಲ್ಲವೇ ಇಲ್ಲ ಎನ್ನಬಹುದು. ಈ ಬಾರಿ ಸರ್ಕಾರ ಯೋಜನಾ ಸಮಿತಿಗಳನ್ನು ಕಡ್ಡಾಯವಾಗಿ ಅನುಷ್ಠಾನಕ್ಕೆ ತರಬೇಕು ಎಂದು ಸೂಚನೆ ನೀಡಿದೆ. ಹಾಗಾಗಿ ಈ ವರ್ಷ ಔಪಚಾರಿಕವಾಗಿ ಜಿಲ್ಲಾ ಯೋಜನಾ ಸಮಿತಿಯಿಂದ ಜಿಲ್ಲೆಯ ಬೇಡಿಕೆಗಳನ್ನು ರಾಜ್ಯಕ್ಕೆ ಸಲ್ಲಿಸಲಾಗಿದೆ.
ಕಾಯ್ದೆಯಂತೆ ಪರಿಪೂರ್ಣ ಸಮಿತಿ ಅನುಷ್ಠಾನಕ್ಕೆ ತೊಡಕು ಉಂಟಾಗಿದೆ. ಜಿಪಂ, ತಾಪಂಗಳಿಗೆ ಸದಸ್ಯರಿಲ್ಲದೇ ಐದು ವರ್ಷ ಕಳೆದಿದೆ. ಜಿಲ್ಲೆಯಲ್ಲಿ 13 ರಲ್ಲಿ 11 ನಗರ ಸ್ಥಳೀಯ ಸಂಸ್ಥೆಗಳ ಆಡಳಿತ ಸಮಿತಿಯ ಅವಽ ಮುಕ್ತಾಯವಾಗಿದೆ. ಗ್ರಾಪಂಗಳ ಅಽಕಾರಾವಽ ಇದೇ 28 ರೊಳಗೆ ಮುಕ್ತಾಯವಾಗಲಿದೆ. ಜಾಲಿ ಮತ್ತು ಮಂಕಿ ಪಪಂಗಳಲ್ಲಿ ಮಾತ್ರ ಚುನಾಯಿತ ಸದಸ್ಯರಿದ್ದು, ಅವರನ್ನು ಮಾತ್ರ ಆಯ್ಕೆ ಮಾಡಲಾಯಿತು ಎಂದು ಜಿಲ್ಲಾ ಯೋಜನಾಽಕಾರಿ ಸೋಮಶೇಖರ ಮೇಸ್ತ ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net