ಸೈಲ್‌ ಮೇಲೆ ಆರೋಪ ಸರಿಯಲ್ಲಿ : ಶಾಸಕರ ಪರ ನಿಂತ ಜಿಲ್ಲಾ ಕಾಂಗ್ರೆಸ್‌ ಕಮಿಟಿ

ಕೆ.ಶಂಬು ಶೆಟ್ಟಿ
ಕೆ.ಶಂಬು ಶೆಟ್ಟಿ
Published on
ಕಾರವಾರ: ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ನಾಯಕ ಮೇಲಿನ ಹಲ್ಲೆ ಪ್ರಕರಣವನ್ನು ಖಂಡಿಸುತ್ತೇವೆ. ಆದರೆ, ನಾಯಕ ಅವರು ಶಾಸಕ ಸತೀಶ ಸೈಲ್ ಮೇಲೆ ಅನುಮಾನ ಬರುವಂತೆ ಮಾಡಿದ ಆರೊಪಗಳೂ ಖಂಡನೀಯ ಎಂದು ಕಾಂಗ್ರೆಸ್ ಜಿಲ್ಲಾ ವಕ್ತಾರ ಕೆ.ಶಂಭು ಶೆಟ್ಟಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ಗೋಪಾಲಕೃಷ್ಣ ನಾಯಕ ಅವರ ಮೇಲೆ ಮಾರಣಾಂತಿಕ ಹಲ್ಲೆಯಾಗಿದ್ದು ಬೇಸರದ ಸಂಗತಿ. ಅದನ್ನು ಶಾಸಕ ಸತೀಶ ಸೈಲ್ ಅವರು ತಕ್ಷಣ ಖಂಡಿಸಿದ್ದಾರೆ. ಆದರೆ, ಆ ಸಂಬಂಧ ವಿರೋಧಾಭಾಸದ ಸುದ್ದಿಗಳು ಹರಿದಾಡುತ್ತಿವೆ. ಅಲ್ಲದೇ, ಗೋಪಾಲಕೃಷ್ಣ ನಾಯಕ ಅವರು ಮಾಧ್ಯಮದಲ್ಲಿ ಮಾತನಾಡಿ, `ತಮ್ಮ ಹತ್ಯೆ ಯತ್ನಕ್ಕೆ ಸುಪಾರಿ ಕೊಟ್ಟವರಿಗೆ ಶಾಸಕ ಸತೀಶ ಸೈಲ್ ಬೆಂಬಲ ಇದೆ' ಎಂದು ಹೇಳಿದ್ದಾರೆ. ಇದು ನಮ್ಮ ಕ್ಷೇತ್ರದ ಜನರಲ್ಲಿ ದ್ವಂದ್ವ ಮೂಡಿಸಿದೆ. ಅನಾವಶ್ಯಕವಾಗಿ ಶಾಸಕ ಸತೀಶ ಸೈಲ್ ಹೆಸರನ್ನು ಎಳೆದು ತರಲಾಗಿದೆ. ಇದರಿಂದ ಪಕ್ಷದ ಹೆಸರೂ ಹಾಳಾಗುತ್ತಿದೆ. ಸತೀಶ ಸೈಲ್ ಅವರ ಹೆಸರೂ ಹಾಳಾಗುತ್ತಿದೆ ಈ ಸಂಬಂಧ ನಾನು ಪಕ್ಷದ ವರಿಷ್ಠರಿಗೆ ದೂರು ನೀಡುತ್ತೇನೆ ಎಂದರು.

ದೂರು ನೀಡಲಿ:

ಹತ್ಯೆಗೆ ಪ್ರಚೋದನೆ, ಸಹಾಯ ಕೂಟ ಚಟುವಟಿಕೆ ಮಾಡಿದರೆ ಆ ಬಗ್ಗೆ ಗೋಪಾಲಕೃಷ್ಣ ನಾಯಕ ಅವರು ಪೊಲೀಸರಿಗೆ ದೂರು ನೀಡಬೇಕು.ಅದನ್ನು ಬಿಟ್ಟು ಮಾಧ್ಯಮಗಳ ಎದುರು ಬಂದು, ಉದ್ವೇಗದಿಂದ ಮಾತನಾಡುವುದರಿಂದ ಸಮಾಜದಲ್ಲಿ ಅಶಾಂತಿ ಉಂಟಾಗಬಹುದು. ಹಾಗಾಗಿ ಗೋಪಾಲಕೃಷ್ಣ ನಾಯಕ ಅವರು ಮಾಡಿದ ಆರೋಪ ಸತ್ಯವಾಗಿದ್ದಲ್ಲಿ ಪೊಲೀಸರು ಸತೀಶ ಸೈಲ್ ಮೇಲೆ ಎಫ್‌ಐಆರ್ ದಾಖಲಿಸಲಿ. ನಾಯಕ ಅವರ ಆರೋಪ ಸುಳ್ಳಾಗಿದ್ದರೆ ಪೊಲೀಸರು ಗೋಪಾಲಕೃಷ್ಣ ಮೇಲೆಯೇ ಸ್ವಮೋಟೊ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಬೇಕು ಎಂದು ಒತ್ತಾಯಿಸಿದರು.
ರಾಜಕೀಯದಲ್ಲಿ ಭಿನ್ನಾಭಿಪ್ರಾಯ ಇರಬಹುದು. ಆದರೆ, ದ್ವೇಷವಿಲ್ಲ.ಅಲ್ಲದೇ, ಸತೀಶ ಸೈಲ್ ಅವರ ಉದ್ಯಮದ ವಿಚಾರವಾಗಿ ಪ್ರಕರಣ ದಾಖಲಾಗಿರಬಹುದು. ಆದರೆ, ಎಲ್ಲೂ ರೌಡಿಸಂ ಮಾಡಿದ ಉದಾಹರಣೆ ಇಲ್ಲ. ಸತೀಶ ಸೈಲ್ ಕೊಲೆಗೆ ಸುಪಾರಿ ನೀಡುವಂಥ ವ್ಯಕ್ತಿಯಲ್ಲ. ಎಂದರು. ಪಕ್ಷದ ಪ್ರಮುಖರಾದ ಅರವಿಂದ ಕಲ್ಗುಟಕರ್, ಸಮೀರ ನಾಯ್ಕ, ಸೀಮಾ ಪಾಟೀಲ್, ಕೃಷ್ಣಾ ಮೆಹತಾ, ನೂತನ ಜೈನ್, ವಿಶ್ವನಾಥ ಕಲ್ಗುಟಕರ್, ಸೋಹಾನಿ ನಾಯ್ಕ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

ಊಹಾಪೋಹಗಳಿಗೆ ಅವಕಾಶ ಬೇಡ

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಾಯಿ ಗಾಂವಕರ್ ಮಾತನಾಡಿ, ಸುಶಿಕ್ಷಿತರ ಜಿಲ್ಲೆಯಲ್ಲಿ ಆಗಬಾರದ್ದು ಆಗಿದೆ. ಹಲ್ಲೆಗೊಳಗಾದ ಗೋಪಾಲಕೃಷ್ಣ ನಾಯಕ ಅವರು ದೇವರ ಕೃಪೆಯಿಂದ ಬಚಾವಾಗಿದ್ದಾರೆ. ಜಿಲ್ಲಾ ಕಾಂಗ್ರೆಸ್ ಸಮಿತಿ ಇದನ್ನು ಖಂಡಿಸಿದೆ. ಸಚಿವ ಮಂಕಾಳ ವೈದ್ಯ, ಶಾಸಕರಾದ ದೇಶಪಾಂಡೆ ಸತೀಶ ಸೈಲ್ ಅವರು ಅವರೂ ಖಂಡಿಸಿದ್ದಾರೆ. ಭೀಮಣ್ಣ ನಾಯ್ಕ, ಅವರು ಎಸ್‌ಪಿ ಅವರಿಗೆ ಕರೆ ಮಾಡಿ ತನಿಖೆಗೆ ಸೂಚಿಸಿದ್ದಾರೆ. ಮಾತ್ರವಲ್ಲ ಗೃಹ ಮಂತ್ರಿಗಳೂ ಘಟನೆ ಖಂಡಿಸಿ, ತನಿಖೆಗೆ ಆದೇಶ ನೀಡಿದ್ದಾರೆ.
ರಾಜಕೀಯದಲ್ಲಿ ಭಿನ್ನಾಭಿಪ್ರಾಯಗಳು ಸಹಜ. ಆದರೆ, ಸತೀಶ ಸೈಲ್ ಆ ಹಂತಕ್ಕೆ ಇಳಿಯುವವರಲ್ಲ ಎಂದರು. ಮಯೂರ ನಾಯ್ಕ ಕುಟುಂಬದವರೂ ತಮಗೂ ಈ ಘಟನೆಗೂ ಸಂಬಂಧವಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಪೊಲೀಸ್ ತನಿಖೆ ನಡೆಯುತ್ತದೆ. ಶೀಘ್ರ ಘಟನೆಯ ಹಿಂದೆ ಯಾರಿದ್ದಾರೆ ಎಂಬುದು ಗೊತ್ತಾಗುತ್ತದೆ. ಊಹಾಪೋಹಗಳಿಗೆ ಅವಕಾಶ ಬೇಡ ಎಂದು ಮನವಿ ಮಾಡುತ್ತೇನೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net