ಸಿದ್ದಾಪುರ ತಹಸೀಲ್ದಾರ್ ಕಚೇರಿ ಎದುರು ಅರಣ್ಯವಾಸಿಗಳು (Forest) ತಹಸೀಲ್ದಾರ್ ಅವರೊಂದಿಗೆ ಚರ್ಚೆ ನಡೆಸಿದರು. ರವೀಂದ್ರ ನಾಯ್ಕ, ಮಹಾಬಲೇಶ್ವರ ನಾಯ್ಕ, ಹರಿಹರ ನಾಯ್ಕ, ಮಂಜುನಾಥ ನಾಯ್ಕ, ಕೆ.ಟಿ.ನಾಯ್ಕ, ಸೀತಾರಾಮ ಇತರರಿದ್ದರು.
ಸಿದ್ದಾಪುರ: Forest ಅರಣ್ಯ ಹಕ್ಕು ಕಾಯಿದೆೆ ಅಡಿಯಲ್ಲಿ ತಿರಸ್ಕಾರವಾದ ಅರಣ್ಯವಾಸಿಗಳ ಸಾಗುವಳಿ ಕ್ಷೇತ್ರದ ಮಹಜರ್ ಪ್ರಕ್ರಿಯೆಯಲ್ಲಿ ಉಂಟಾದ ನ್ಯೂನತೆಯ ಸ್ಟಷ್ಟಿಕರಣಕ್ಕೆ ಜಿಲ್ಲಾಧಿಕಾರಿಯಿಂದ ಬಾರದ ಉತ್ತರಕ್ಕೆ ಅತೀ ಶೀಘ್ರದಲ್ಲಿ ನ್ಯೂನತೆ ಮಹಜರ್ ಸರಿಪಡಿಸಲು ಹೋರಾಟಗಾರರ ವೇದಿಕೆ ಆಗ್ರಹಿಸಿದೆ.
ರಾಜ್ಯ ಸರ್ಕಾರದ ಆದೇಶವನ್ನು ಉಲ್ಲಂಸಿ ಮಹಜರ್ ಪ್ರಕ್ರಿಯೆ ಜರುಗುತ್ತಿರುವುದಕ್ಕೆ ಜಿಲ್ಲಾಧಿಕಾರಿಗೆ ಪತ್ರ ನೀಡಿ 3 ತಿಂಗಳಾದರೂ ಉತ್ತರ ಬಾರದಿರುವುದರಿಂದ ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ನೇತೃತ್ವದಲ್ಲಿ ತಹಸೀಲ್ದಾರ್ ಎಂ.ಆರ್. ಕುಲಕರ್ಣಿ ಅವರೊಂದಿಗೆ ಬುಧವಾರ ಚರ್ಚೆ ನಡೆಸಿ ನ್ಯೂನತೆಯನ್ನು ಸರಿದೂಗಿಸಿ ಮಹಜರ್ ಪ್ರಕ್ರಿಯೆ ಮುಂದುವರಿಸಬೇಕೆಂದು ಜಿಲ್ಲಾಡಳಿತವನ್ನು ಆಗ್ರಹಿಸಲಾಯಿತು.
ಈ ಹಿಂದೆ ಜಿಲ್ಲಾಧಿಕಾರಿಯವರಿಗೆ ಬರೆದ ಮನವಿಯಲ್ಲಿ ತಿರಸ್ಕಾರವಾದ ಅರಣ್ಯವಾಸಿಗಳೆಲ್ಲರ ಅರ್ಜಿಗಳನ್ನು ಪರಿಗಣಿಸಿರುವುದಿಲ್ಲ, ಮಹಜರ್ ಸಂದರ್ಭದಲ್ಲಿ ಅಧಿಕಾರಿ ತಂಡದೊಂದಿಗೆ ಸ್ಥಳೀಯ ಮುಖಂಡರನ್ನು ಸೇರಿಸಿಕೊಂಡಿಲ್ಲ,
ಜಂಟಿ ಮಹಜರ್ ಯಾಂತ್ರಿಕವಾಗಿ ತಯಾರಿಸಿದ್ದು, ಅಪೂರ್ಣ ಅಂಶಗಳಿಂದ ಕೂಡಿದೆ.
ಜಂಟಿ ಮಹಜರ್ ಸಂದರ್ಭದಲ್ಲಿ ಅರಣ್ಯವಾಸಿಗೆ ಮುಂಚಿತವಾಗಿ ನೋಟಿಸ್ ನೀಡದೆ ಅರಣ್ಯವಾಸಿಗಳ ಅನುಪಸ್ಥಿತಿಯಲ್ಲಿ ಸ್ಥಳ ಪರಿಶೀಲನೆ ಮಾಡುವುದಿಲ್ಲ ಎಂದು ಪ್ರಸ್ತಾಪಿಸಲಾಗಿತ್ತು ಎಂದು ತಹಸೀಲ್ದಾರ ಗಮನಕ್ಕೆ ತರಲಾಯಿತು.
ತಹಸೀಲ್ದಾರ್ ಎಂ.ಆರ್.ಕುಲಕರ್ಣಿ ಮಾತನಾಡಿ, ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ತಿರಸ್ಕರಿಸಿದ ಅರ್ಜಿಗೆ ಮಹಜರ್ ಪ್ರಕ್ರಿಯೆಯಲ್ಲಿ ಉಂಟಾದ ಹತ್ತು ನ್ಯೂನತೆಯ ಸ್ಪಷ್ಟೀಕರಣ ಬಯಸಿ ಮೇ 20ರಂದು ನೀಡಿದ ಪತ್ರದ ಉತ್ತರವನ್ನ ಮುಂದಿನ ಹತ್ತು ದಿನಗಳ ಒಳಗೆ ನೀಡಲಾಗುವುದು ಎಂದು ಭರವಸೆ ನೀಡಿದರು.
ಹೋರಾಟಗಾರರ ವೇದಿಕೆ ಸಂಚಾಲಕ ಮಹಾಬಲೇಶ್ವರ ನಾಯ್ಕ ಬೇಡ್ಕಣಿ, ಹರಿಹರ ನಾಯ್ಕ ಓಂಕಾರ ಹೆಗ್ಗರಣೆ, ಸೀತಾರಾಮ ನಾಯ್ಕ ಹುಕ್ಕಳಿ, ಕೆ.ಟಿ. ನಾಯ್ಕ ಹೆಗ್ಗೇರಿ, ಮಂಜುನಾಥ ಮಡಿವಾಳ ಕಿಲಾರ, ಬಿ. ಡಿ. ನಾಯ್ಕ ಕುರಗೆತೋಟ, ಅಬ್ದುಲ್ ಸುಭಾನ ಅರೆಂದೂರು ಇತರರಿದ್ದರು.