ಉಕ ಬಾಳೆ ಗೊನೆಗೆ ದಕದಲ್ಲಿ ಬೇಡಿಕೆ BANANA

ಶಿರಸಿಯಲ್ಲಿ ವ್ಯಾಪಾರಸ್ಥರು ರೈತರಿಂದ ಖರೀದಿಸಿದ ಬಾಳೆ (Banana)ಗೊನೆಗಳು.
ಶಿರಸಿಯಲ್ಲಿ ವ್ಯಾಪಾರಸ್ಥರು ರೈತರಿಂದ ಖರೀದಿಸಿದ ಬಾಳೆ (Banana)ಗೊನೆಗಳು.
Published on

ಪ್ರಮುಖ ಮುಖ್ಯಾಂಶಗಳು

  • ಮಂಗಳೂರು, ಕುಂದಾಪುರ ವ್ಯಾಪಾರಸ್ಥರಿಂದ ಖರೀದಿಗೆ ಉತ್ಸಾಹ
  • ರೈತರ ಮುಖದಲ್ಲಿ ಮಂದಹಾಸ
  • ಗೋವಾ ಮಾರುಕಟ್ಟೆಗೆ ದಾವಣಗೆರೆ ಬಾಳೆ
ಶಿರಸಿ: ಜಿಲ್ಲೆಯ ಬಾಳೆ ಗೊನೆಗಳಿಗೆ (Banana) ಈಗ ಮಂಗಳೂರು ಮತ್ತು ಕುಂದಾಪುರ ಮಾರುಕಟ್ಟೆಯಿಂದ ಬೇಡಿಕೆ ಬರತೊಡಗಿದೆ.
ಹೀಗಾಗಿ, ಬಾಳೆ ಗೊನೆಗಳ ದರ ಮಾರುಕಟ್ಟೆಯಲ್ಲಿ ನಿಧಾನವಾಗಿ ಏರತೊಡಗಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿದೆ.
ನಗರದ ಬಾಳೆಕಾಯಿ ವ್ಯಾಪಾರಸ್ಥರಿಗೆ ಗೋವಾ ರಾಜ್ಯ ಮುಖ್ಯ ಮಾರುಕಟ್ಟೆಯಾಗಿತ್ತು.
ಮಹಾರಾಷ್ಟ್ರದ ಕುಡಾಳ್ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಬಾಳೆಕಾಯಿಗೆ ಬೇಡಿಕೆ ಇದ್ದು, ಗೋವಾದ ವ್ಯಾಪಾರಸ್ಥರು ಜಿಲ್ಲೆಯ ವ್ಯಾಪಾರಸ್ಥರಿಂದ ಬಾಳೆಕಾಯಿ ಖರೀದಿಸಿ ಮಹಾರಾಷ್ಟ್ರದ ಈ ಜಿಲ್ಲೆಗಳಿಗೂ ಕಳಿಸುತ್ತಿದ್ದರು.
ಆದರೆ, ಕಳೆದ ವರ್ಷದಿಂದ ಗೋವಾ ಮಾರುಕಟ್ಟೆಯನ್ನು ದಾವಣಗೆರೆ ಭಾಗದ ಬಾಳೆ ಬೆಳೆಗಾರರು ಅತಿಕ್ರಮಿಸಿಕೊಂಡಿದ್ದಾರೆ.
ಹೀಗಾಗಿ ಪೂರೈಕೆ ಜಾಸ್ತಿಯಾಗಿ ಜಿಲ್ಲೆಯ ವ್ಯಾಪಾರಸ್ಥರಿಗೆ ಗೋವಾ ಮಾರುಕಟ್ಟೆ ಸೀಮಿತವಾಗತೊಡಗಿತ್ತು. ಇದರಿಂದಾಗಿ ಜಿಲ್ಲೆಯ ಬಾಳೆ ಗೊನೆಗಳಿಗೆ ದರ ಸಹ ಕುಸಿತಗೊಂಡಿತ್ತು.
ಬೇಸಿಗೆಯ ದಿನಗಳಲ್ಲಿ ಮೊದಲ ದರ್ಜೆಯ ಮೆಟ್ಲಿ ಬಾಳೆ 16ರಿಂದ 18 ರೂ. ಪ್ರತಿ ಕೆಜಿ, ಕರಿ ಬಾಳೆ 6ರಿಂದ 8 ರೂ.ವರೆಗೆ ಲಭಿಸಿತ್ತು. ಎರಡನೇ ಮತ್ತು ಮೂರನೇ ದರ್ಜೆಯ ಬಾಳೆಕಾಯಿಗಳನ್ನು ಖರೀದಿಸುವವರೂ ಇಲ್ಲದ ಸ್ಥಿತಿ ಉಂಟಾಗಿತ್ತು.
ಕಳೆದ ಒಂದು ವಾರದಿಂದೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಇಲ್ಲಿಯ ಬಾಳೆ ಗೊನೆಗಳಿಗೆ ಬೇಡಿಕೆ ಬಂದಿದೆ.
ವಿಶೇಷವಾಗಿ ಕುಂದಾಪುರದ ವರ್ತಕರು ಇಲ್ಲಿಯ ಬಾಳೆ ಗೊನೆಗಳನ್ನು ಖರೀದಿಸಲು ಆಸಕ್ತಿ ತೋರಿದ್ದಾರೆ. ಹೀಗಾಗಿ, ಮೊದಲ ದರ್ಜೆಯ ಮೆಟ್ಲಿ ಬಾಳೆಗೆ ಪ್ರತಿ ಕೆಜಿ ಗೆ 30ರಿಂದ 35 ರೂ.ವರೆಗೆ ಸ್ಥಳೀಯ ವ್ಯಾಪಾರಸ್ಥರು ರೈತರಿಂದ ಖರೀದಿಸುತ್ತಿದ್ದಾರೆ.
ದ್ವಿತೀಯ ದರ್ಜೆಯ ಮೆಟ್ಲಿಗೆ 20 ರೂ., ಕರಿ ಬಾಳೆಗೆ 16ರಿಂದ 17 ರೂ., ಮೈಸೂರು ಮೆಟ್ಲಿಗೆ 10 ರೂ., ಪಚ್ಚ ಬಾಳೆಗೆ ಪ್ರತಿ ಕೆಜಿಗೆ 11 ರೂ. ಲಭಿಸುತ್ತಿದೆ. ದರ ಏರಿಕೆ ಮುಂದುವರಿಯುವ ಆಶಾಭಾವ ಈಗ ವ್ಯಕ್ತಗೊಂಡಿದೆ.
ಪ್ರತಿ ದಿನ ಮೂರು ಅಥವಾ ನಾಲ್ಕು ಲಾರಿಗಳು ಈಗ ಬಾಳೆ ಗೊನೆ ತುಂಬಿಕೊಂಡು ದಕ್ಷಿಣ ಕನ್ನಡ ಜಿಲ್ಲೆಯತ್ತ ಮುಖ ಮಾಡುತ್ತಿವೆ.
ಈ ವರ್ಷ ಶ್ರಾವಣಕ್ಕೂ ಮುನ್ನವೇ ಬೇಡಿಕೆ ಬಂದಿರುವುದರಿಂದ ಶ್ರಾವಣ ಮಾಸ ಹಾಗೂ ಹಬ್ಬದ ದಿನಗಳಲ್ಲಿ ಸ್ಥಳೀಯವಾಗಿ ಹಾಗೂ ಹೊರ ಜಿಲ್ಲೆಯಿಂದ ಬೇಡಿಕೆ ಹೆಚ್ಚುವ ನಿರೀಕ್ಷೆ ಇದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ 8900 ಹೆಕ್ಟೇರ್ ಪ್ರದೇಶದಲ್ಲಿ ಬಾಳೆ ಬೆಳೆ ಇದ್ದರೂ ಈ ಬೆಳೆಯೇ ಇಲ್ಲಿ ಪ್ರಧಾನವಾಗಿಲ್ಲ.
ಕಳೆದ ವರ್ಷ ಕೊಳೆ ರೋಗ ಆವರಿಸಿಕೊಂಡಿದ್ದರಿಂದ ಮಲೆನಾಡಿನ ಅಡಕೆ ಬೆಳೆ ಗಣನೀಯವಾಗಿ ಇಳಿಕೆ ಆಗಿತ್ತು.
ಬಹುತೇಕ ರೈತರು ತಮ್ಮ ವಾರ್ಷಿಕ ಸರಾಸರಿ ಅಡಕೆ ಬೆಳೆಯಲ್ಲಿ ಶೇ. 40ರಿಂದ 60ರಷ್ಟು ಬೆಳೆ ಕೊರತೆ ಅನುಭವಿಸಿದ್ದಾರೆ.
ಹೀಗಾಗಿ, ರೈತರ ಆದಾಯವೂ ಕ್ಷೀಣಿಸಿದೆ. ಸದ್ಯ ಬಾಳೆ ಬೆಳೆಗೆ ದರ ಏರಿಕೆ ಆಗುತ್ತಿರುವುದು ರೈತರ ದೈನಂದಿನ ಖರ್ಚುಗಳಿಗೆ ನೆರವಾಗತೊಡಗಿದೆ.
"

ಸಾಮಾನ್ಯವಾಗಿ ಮಾವಿನ ಹಣ್ಣಿನ ಸೀಜನ್ ಮುಕ್ತಾಯಗೊಂಡು, ಶ್ರಾವಣ ಮಾಸದಿಂದ ಬಾಳೆಗೊನೆಗಳಿಗೆ ಬೇಡಿಕೆ ಹಾಗೂ ದರ ಲಭಿಸಲಾರಂಭಿಸುತ್ತಿತ್ತು. ಈ ವರ್ಷ ಇಲ್ಲಿಯ ಬಾಳೆ ಗೊನೆಗಳಿಗೆ ಉತ್ತಮ ಬೇಡಿಕೆ ಬರುತ್ತಿರುವುದು ರೈತರ ದೃಷ್ಟಿಯಿಂದ ಉತ್ತಮ ಬೆಳವಣಿಗೆಯಾಗಿದೆ.

— ವಿನಾಯಕ ಶೇಟ್ ವ್ಯಾಪಾರಸ್ಥ, ಶಿರಸಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net