ಹಬ್ಬುವಾಡ ರಸ್ತೆ ಹಾಳು ಮಾಡಿದವರ ವಿರುದ್ಧ ಕ್ರಮಕ್ಕೆ ಒತ್ತಾಯ

ಬಿಜೆಪಿ ಪ್ರಮುಖರು ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಅವರಿಗೆ ಮನವಿ ಸಲ್ಲಿಸಿದರು.
ಬಿಜೆಪಿ ಪ್ರಮುಖರು ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಅವರಿಗೆ ಮನವಿ ಸಲ್ಲಿಸಿದರು.
Published on
ಕಾರವಾರ: ಹಬ್ಬುವಾಡ ರಸ್ತೆ ಹಾಳುಗೆಡವಿದ ಗುತ್ತಿಗೆದಾರನ ವಿರುದ್ಧ ಕ್ರಮ ವಹಿಸಬೇಕು. ರಸ್ತೆ ದುರವಸ್ಥೆ ಸರಿಪಡಿಸಬೇಕು ಎಂದು ಆಗ್ರಹಿಸಿ ಬಿಜೆಪಿ ಪ್ರಮುಖರು ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಅವರಿಗೆ ಮನವಿ ಸಲ್ಲಿಸಿದರು.
ಕಾರವಾರ-ಇಳಕಲ್ ರಾಜ್ಯ ಹೆದ್ದಾರಿಯಲ್ಲಿ ಗೀತಾಂಜಲಿ ಚಿತ್ರ ಮಂದಿರದಿಂದ ಇಸ್ಕಾನ್ ಮಂದಿರ ರಸ್ತೆಯವರೆಗೆ ಮೂರು ವರ್ಷಗಳ ಹಿಂದೆಯೇ ಸುಸಜ್ಜಿತ ಕಾಂಕ್ರಿಟ್ ರಸ್ತೆ ಮಾಡಲಾಗಿದೆ. ಈಗ ಇದ್ದಕ್ಕಿದ್ದಂತೆ ಅದರ ಮೇಲೆ ಯಾವುದೋ ಗುತ್ತಿಗೆದಾರ ಬಂದು ಮಂಗಳವಾರ ಡಾಂಬರು ಹಾಕಿದ್ದಾನೆ. ಅದನ್ನು ನಗರಸಭೆ ಅಧಿಕಾರಿಗಳು ವಿರೋಧ ವ್ಯಕ್ತಪಡಿಸಿದ ನಂತರ ಬುಧವಾರ ಹಾಕಿದ ಡಾಂಬರು ತೆಗೆದಿದ್ದಾನೆ. ಇದರಿಂದ ರಸ್ತೆಯಲ್ಲಿ ಜಲ್ಲಿಯಂಥ ಸಾಮಗ್ರಿ ಎದ್ದು ಹೋಗಿದೆ. ಅಪಘಾತವಾಗುವ ಸಾಧ್ಯತೆ ಇದೆ ಎಂದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸಂಜಯ ಸಾಳುಂಕೆ ಮಾತನಾಡಿ, ಇದರ ಹಿಂದೆ ಲೋಕೋಪಯೋಗಿ ಇಲಾಖೆ ಹಾಗೂ ಶಾಸಕರ ಕೈವಾಡ ಇರುವಂತೆ ಕಂಡುಬರುತ್ತದೆ. ಈ ಬಗ್ಗೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ನಗರಸಭೆ ಮಾಜಿ ಅಧ್ಯಕ್ಷ ರವಿರಾಜ ಅಂಕೋಲೆಕರ್ ಮಾತನಾಡಿ, ನಗರಸಭೆಯಿಂದ ಒಂದು ಬಾರಿ ಅಭಿವೃದ್ಧಿಗಾಗಿ ರಸ್ತೆಯನ್ನು ಪಿಡಬ್ಲುಡಿಗೆ ಹಸ್ತಾಂತರಿಸಲಾಗಿದೆ. ಅವರು ರಸ್ತೆ ಕಾಮಗಾರಿ ಮುಗಿದ ನಂತರ ಮತ್ತೆ ನಗರಸಭೆಗೆ ಮರಳಿಸಿಲ್ಲ. ಇದರಿಂದ ಲೋಕೋಪಯೋಗಿ ಅಧಿಕಾರಿಗಳೇ ಅದಕ್ಕೆ ಹೊಣೆ ಎಂದರು. ಬಿಜೆಪಿ ಪ್ರಮುಖರಾದ ನಾಗೇಶ ಕುರ್ಡೇಶಕರ್, ಸುಭಾಷ ಗುನಗಿ, ಹನುಮಂತಪ್ಪ, ಅರುಣ ಹಬ್ಬು, ಸುಭಾಷ ನಾಯ್ಕ, ಅಮಿತ್ ಕಾಮತ್ ಇತರರು ಇದ್ದರು.

ರೂಪಾಲಿ ಆಕ್ರೋಶ

ಹಬ್ಬುವಾಡ ಕಾಂಕ್ರಿಟ್ ರಸ್ತೆಯ ಮೇಲೆ ಡಾಂಬರು ಹಾಕಿ ಮತ್ತೆ ಅದನ್ನು ಕೀಳುತ್ತಿರುವ ಗುತ್ತಿಗೆದಾರನ ಕ್ರಮವನ್ನು ಮಾಜಿ ಶಾಸಕಿ ರೂಪಾಲಿ ನಾಯ್ಕ ಖಂಡಿಸಿದ್ದು, ಬುಧವಾರ ಕಾಮಗಾರಿ ನಡೆಯುವ ವೇಳೆ ಸ್ಥಳಕ್ಕೆ ತೆರಳಿ ಆಕ್ಷೇಪ ವ್ಯಕ್ತಪಡಿಸಿದರು.
ಕಾಮಗಾರಿ ನಡೆಸುವ ಸ್ಥಳದಲ್ಲಿದ್ದ ಸುಪ್ರವೈಸರ್‌ನನ್ನು ತರಾಟೆಗೆ ತೆಗೆದುಕೊಂಡ ಅವರು, ಗ್ರಾಮೀಣ ಪ್ರದೇಶದ ಎಷ್ಟೋ ರಸ್ತೆಗಳು ಹದಗೆಟ್ಟು ಹೋಗಿವೆ. ಅಲ್ಲಿ ಕೇಳುವವರೇ ಇಲ್ಲ. ಸುಸ್ಥಿತಿಯಲ್ಲಿರುವ ಕಾಂಕ್ರಿಟ್ ರಸ್ತೆಗೆ ಡಾಂಬರು ಹಾಕುವ ಅವಶ್ಯಕತೆ ಏನಿತ್ತು ಎಂದು ಪ್ರಶ್ನಿಸಿದರು. ಜನತೆಯ ಬೇಡಿಕೆಯ ಮೇರೆಗೆ ನಾನು ಶಾಸಕಿಯಾಗಿದ್ದಾಗ ಉತ್ತಮ ಕಾಂಕ್ರಿಟ್ ರಸ್ತೆ ಮಾಡಿಸಿದ್ದೆ. ಅದನ್ನೂ ಹಾಳು ಮಾಡುವ ಮನಸ್ಥಿತಿ ಏಕೆ ಎಂದು ಪ್ರಶ್ನಿಸಿದರು.
ರಸ್ತೆ ಕಾಮಗಾರಿ ಸ್ಥಳಕ್ಕೆ ರೂಪಾಲಿ ನಾಯ್ಕ ಭೇಟಿ ನೀಡಿ ಆಕ್ಷೇಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net