ಜಿಲ್ಲೆಯಲ್ಲಿ ಪ್ರತಿ ದಿನ ಮಾಧ್ಯಮಗಳಲ್ಲಿ ಬರುವ ಕುಂದು ಕೊರತೆಗಳಿಗೆ ಪರಿಹಾರ ನೀಡಲು ಎರಡು ವರ್ಷಗಳಿಂದ ಕ್ರಮ ವಹಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ತಿಳಿಸಿದರು.
ಭಾರತ ಸರ್ಕಾರದ ವಾರ್ತಾ ಶಾಖೆ (ಪಿಐಬಿ) ಬೆಂಗಳೂರು ವಿಭಾಗ, ಉಕ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲೆಯ ಮಾಧ್ಯಮ ಪ್ರತಿನಿಧಿಗಳಿಗಾಗಿ ಆಯೋಜಿಸಿದ್ದ, ಕೇಂದ್ರ ಪುರಸ್ಕೃತ ಯೋಜನೆಗಳ ಕುರಿತ `ವಾರ್ತಾಲಾಪ' ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಉತ್ತರ ಕನ್ನಡ ಜಿಲ್ಲೆ ದೊಡ್ಡದಿರುವುದರಿಂದ ಎಲ್ಲೆಡೆ ಹೋಗಿ ನಾವು ಸಮಸ್ಯೆ ಆಲಿಸಲು ಸಾಧ್ಯವಾಗುವುದಿಲ್ಲ. ನಮ್ಮ ಹಾಗೂ ಜನರ ನಡುವೆ ಸೇತುವೆಯಾಗಿ ಮಾಧ್ಯಮಗಳು ಕಾರ್ಯ ನಿರ್ವಹಿಸುತ್ತಿವೆ. ಪತ್ರಿಕೆಗಳಲ್ಲಿ ಬರುವ ಸಮಸ್ಯೆಗಳಿಗೆ ಸಂಬAಧಪಟ್ಟ ವಿಷಯಗಳನು ವಾರ್ತಾ ಇಲಾಖೆಯಿಂದ ಪಡೆದು ಜಿಲ್ಲಾ ಕಂಟ್ರೋಲ್ ರೂಂನಲ್ಲಿ ಅವುಗಳನ್ನು ರಿಸಿಸ್ಟರ್‌ನಲ್ಲಿ ದಾಖಲಿಸಲಾಗುತ್ತದೆ. ನಂತರ ಸಂಬಂಧಪಟ್ಟ ಇಲಾಖೆಗೆ ಕಳಿಸಿ, ಫಾಲೋ ಅಪ್ ಮಾಡಲಾಗುತ್ತಿದೆ ಎಂದರು.
ಜಿಪಂ ಸಿಇಒ ಡಾ.ದಿಲೀಶ್ ಶಶಿ ಮಾತನಾಡಿ, ಕುಡಿಯುವ ನೀರಿನ ಅಭಾವದ ಸಮಯದಲ್ಲಿ ಮಾಧ್ಯಮ ವರದಿಗಳನ್ನು ಆಧರಿಸಿ ಶೀಘ್ರವಾಗಿ ಸ್ಪಂದಿಸಲು ಅಧಿಕಾರಿಗಳಿಗೆ ತಿಳಿಸಲಾಗಿದೆ.
ಎಸ್‌ಪಿ ದೀಪನ್ ಎಂ.ಎನ್.ಮಾತನಾಡಿ, ಪ್ರಸ್ತುತ ಮಾಹಿತಿಯಷ್ಟೇ ವೇಗವಾಗಿ ತಪ್ಪು ಮಾಹಿತಿ, ಸುಳ್ಳು ಸುದ್ದಿ ಹಾಗೂ ವದಂತಿಗಳು ಹರಡುತ್ತಿವೆ. ಇದರಿಂದ ಸಾರ್ವಜನಿಕರಲ್ಲಿ ಆತಂಕ ಹಾಗೂ ಗೊಂದಲ ಉಂಟಾಗುವ ಸಾಧ್ಯತೆಯಿದೆ. ಇಂತಹ ಸಂದರ್ಭಗಳಲ್ಲಿ ವಾಸ್ತವಾಂಶ ಪರಿಶೀಲಿಸಿ ಜವಾಬ್ದಾರಿಯುತವಾಗಿ ಸುದ್ದಿ ಪ್ರಕಟಿಸುವ ಮೂಲಕ ಮಾಧ್ಯಮಗಳು ಸುಳ್ಳು ಸುದ್ದಿಗಳ ನಿಯಂತ್ರಣಕ್ಕೆ ಸಹಕರಿಸಬೇಕು ಎಂದರು.
ಭಾರತ ಸರ್ಕಾರದ ವಾರ್ತಾ ಶಾಖೆಯ ಹೆಚ್ಚುವರಿ ಮಹಾನಿರ್ದೇಶಕ ಜಿ.ಎಸ್. ರವಿಂದ್ರ ಅಧ್ಯಕ್ಷತೆ ವಹಿಸಿ ಧನ ಧಾನ್ಯ ಕೃಷಿ ಯೋಜನೆ, ನಮೋ ಡ್ರೋನ್ ದೀದಿ, ಇ-ನ್ಯಾಮ, ಮತ್ಸ್ಯ ಸಂಪದ ಯೋಜನೆ, ಸ್ಟಾರ್ಟ್ ಅಪ್, ಸ್ಟೆಮ್ ಮುಂತಾದ ಕೇಂದ್ರ ಪುರಸ್ಕೃತ ಯೋಜನೆಗಳು ಹಾಗೂ ಅವುಗಳ ಅನುಷ್ಠಾನದ ಅಂಕಿ ಅಂಶಗಳ ಕುರಿತು ಮಾಹಿತಿ ನೀಡಿದರು.
ಡಿಎಫ್‌ಒ ಅಂತೋನಿ ಎಸ್. ಮರಿಯಪ್ಪ, ಗೋಕರ್ಣ ಇನ್ಸ್ಪೆಕ್ಟರ್ ಶ್ರೀಧರ ಎಸ್ .ಆರ್.,ಶಿಶು ಅಭಿವೃದ್ಧಿ ಯೋಜನಾಧಿಕಾರಿ ನಂದಕುಮಾರ್,ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕ ಪ್ರತೀಕ್, ಲೀಡ್ ಬ್ಯಾಂಕ್ ಅಧಿಕಾರಿಗಳು ವಿವಿಧ ಯೋಜನೆಗಳ ಮಾಹಿತಿ ನೀಡಿದರು. ಕಾರ್ಯಾಗಾರದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಶಿವಕುಮಾರ್, ವಾರ್ತಾ ಶಾಖೆ ಬೆಂಗಳೂರಿನ ಸಹಾಯಕ ನಿರ್ದೇಶಕ ಮಧು, ಲಕ್ಷ್ಮೀಕಾಂತ ಇದ್ದರು.