ಕಾರವಾರ: ಜಿಲ್ಲೆಯಲ್ಲಿ ಮಾದಕ ವಸ್ತುಗಳ ಬಳಕೆ ಮತ್ತು ಸರಬರಾಜು ತಡೆಯಲು ಅನುಮಾನಾಸ್ಪದವಾಗಿ ಕಂಡು ಬರುವ ಹೋಂ ಸ್ಟೇ ಗಳು ಮತ್ತು ರೆಸಾರ್ಟ್ಗಳಲ್ಲಿ ಅನಿರೀಕ್ಷಿತ ತಪಾಸಣೆಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಸೂಚನೆ ನೀಡಿದರು.
ಅವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜನೆಯಾಗಿದ್ದ ಎನ್‌ಕಾರ್ಡ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಾದಕ ವಸ್ತುಗಳ ಸೇವನೆ ಕುರಿತಂತೆ ಪೊಲೀಸ್ ಇಲಾಖೆಯಲ್ಲಿ ದಾಖಲಾಗುವ ಪ್ರಕರಣಗಳಲ್ಲಿ 18 ರಿಂದ 35 ವಯೋಮಿತಿಯ ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಈ ದುಶ್ಚಟಕ್ಕೆ ಬಲಿಯಾಗುತ್ತಿರುವುದು ಕಂಡು ಬರುತ್ತಿದ್ದು, ಜಿಲ್ಲೆಯ ಎಲ್ಲ ಕಾಲೇಜುಗಳಲ್ಲಿ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತಂತೆ ವಿದ್ಯಾರ್ಥಿಗಳಿಗೆ ಹೆಚ್ಚಿನ ಸಂಖ್ಯೆಯ ಅರಿವು ಕಾರ್ಯಕ್ರಮಗಳನ್ನು ಅಯೋಜಿಸುವಂತೆ ತಿಳಿಸಿದರು.
ಜಿಲ್ಲೆಯ ಎಲ್ಲಾ ಮೆಡಿಕಲ್ ಶಾಪ್ ಗಳಲ್ಲಿ ವೈದ್ಯರ ಸಲಹಾ ಚೀಟಿ ಇಲ್ಲದೇ ಔಷಧಗಳನ್ನು ಸರಬರಾಜು ಮಾಡದಂತೆ ಸೂಚನೆ ನೀಡುವಂತೆ ಮತ್ತು ಈ ಕುರಿತು ಮೆಡಿಕಲ್ ಶಾಪ್ ಗಳಲ್ಲಿ ಭಿತ್ತಿಪತ್ರ ಅಳವಡಿಸುವ ಕುರಿತು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಔಷಧ ನಿಯಂತ್ರಕರಿಗೆ ಸೂಚಿಸಿದ ಜಿಲ್ಲಾಧಿಕಾರಿಗಳು, ಸಲಹಾ ಚೀಟಿ ಇಲ್ಲದೇ ಔಷಧ ವಿತರಿಸುವ ಶಾಪ್ ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ತಿಳಿಸಿದರು.
ನಾಲ್ಕು ತಿಂಗಳಲ್ಲಿ 112 ಮಂದಿ ಬಂಧನ
ಜಿಲ್ಲೆಯಲ್ಲಿ 2026 ರಲ್ಲಿ ಇದುವರೆಗೆ ಮಾದಕ ವಸ್ತು ಸರಬರಾಜಿನ 8 ಪ್ರಕರಣಗಳಲ್ಲಿ 14 ಮಂದಿಯನ್ನು ಬಂಧಿಸಿ, ರೂ. 1,49 ಲಕ್ಷ ರೂ. ಮೌಲ್ಯದ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಮಾದಕ ವಸ್ತು ಸೇವನೆಯ 97 ಪ್ರಕರಣಗಳಲ್ಲಿ 112 ಮಂದಿಯನ್ನು ಬಂಧಿಸಲಾಗಿದೆ ಎಂದು ಎಸ್‌ಪಿ ದೀಪನ್ ಎಂ.ಎನ್.ತಿಳಿಸಿದರು.