4 ದಿನ ಕಾಡಿನಲ್ಲಿ ಓಡಾಡಿದ ಡೆನ್ಮಾರ್ಕ್‌ ಪ್ರಜೆ

ಮಾಗೋಡಿನಲ್ಲಿ ಮಾತನಾಡಿದ ಎರಿಕ
ಮಾಗೋಡಿನಲ್ಲಿ ಮಾತನಾಡಿದ ಎರಿಕ
Published on

ಪ್ರಮುಖ ಮುಖ್ಯಾಂಶಗಳು

  • ಪೊಲೀಸ್‌ ಠಾಣೆಯಲ್ಲಿ ಸತ್ಯ ಬಯಲು
  • ಡೆನ್ಮಾರ್ಕ್‌ನಿಂದ ಬಂದು ಕಾಡು ಸುತ್ತಿದ್ದ ಎರಿಕ್‌
ಯಲ್ಲಾಪುರ: ವಿದೇಶಿ ಪ್ರಜೆಯೊಬ್ಬ ನಾಲ್ಕು ದಿನ ಕಾಡಿನಲ್ಲಿ ಅಲೆದಾಡಿದ ಘಟನೆ ತಾಲೂಕಿನಲ್ಲಿ ನಡೆದಿದೆ. ಭೀಕರ ಹಸಿವಿನಿಂದ ಬಳಲಿದ ಆತ ಊರಿಗೆ ಬಂದು ಮಾತನಾಡಲೆಲ್ನಿಸಿದ. ಆದರೆ, ಆತನ ವರ್ತನೆ ನೋಡಿ ಭಯಗೊಂಡ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿದ್ದರು.
ಮೂಲತಃ ಡೆನ್ಮಾರ್ಕ್‌ ದೇಶದ ಎರಿಕ್‌(56) ಈ ರೀತಿ ಕಷ್ಟಕ್ಕೆ ಸಿಲುಕಿದವ.
ತಾಲೂಕಿನ ಮಾಗೋಡ ಭಾಗದ ಕಾಡಿನಲ್ಲಿ ಕಳೆದ ನಾಲ್ಕು ದಿವಸಗಳಿಂದ ಸಂಚರಿಸುತ್ತಿದ್ದ. ಗುರುವಾರ ಊರಿಗೆ ಆಗಮಿಸಿ ತನ್ನದೇ ಭಾಷೆಯಲ್ಲಿ ಏನೇನೋ ಬಡಬಡಿಸಲಾರಂಭಿಸಿದ್ದ. ಅದು ಊರಿನ ಜನರಿಗೆ ಅರ್ಥವಾಗಲಿಲ್ಲ. ಇದರಿಂದ ಯಲ್ಲಾಪುರ ಪೊಲೀಸರಿಗೆ ಕರೆ ಮಾಡಿದ್ದರು. ಪೊಲೀಸರು ಆಗಮಿಸಿ ವಿಚಾರಿಸಿದಾಗ ಅವರಿಗೂ ಸಮಸ್ಯೆ ಅರ್ಥವಾಗಲಿಲ್ಲ. ನಂತರ ಪೊಲೀಸ್‌ ಠಾಣೆಗೆ ಕರೆದೊಯ್ಯಲು ಯತ್ನಿಸಿ ಜೀಪ್‌ ಹತ್ತಲು ಸೂಚಿಸಿದರು. ಆದರೆ ಎರಿಕ್‌ ಅದಕ್ಕೆ ಸಿದ್ಧನಿಲ್ಲದ ಕಾರಣ ಆತನನ್ನು ಒಂದು ಬೈಕ್‌ ಮೇಲೆ ಕೂರಿಸಿಕೊಂಡು ಯಲ್ಲಾಪುರ ಠಾಣೆಗೆ ಹೋಗಲಾಯಿತು.

ಆಗಿದ್ದೇನು..?

ಎರಿಕ್‌ ಡೆನ್ಮಾರ್ಕ್‌ನಿಂದ 6 ತಿಂಗಳ ಪ್ರವಾಸಿ ವೀಸಾದ ಮೇಲೆ ಭಾರತಕ್ಕೆ ಬಂದಿದ್ದ. ಅಲ್ಲಿಂದ ಉತ್ತರ ಕನ್ನಡ ತಲುಪಿದ್ದ. ಯಲ್ಲಾಪುರ ಮಾಗೋಡು ಜಲಪಾತ ನೋಡಲು ಹೋದಾಗ ಆತನ ಮೊಬೈಲ್‌ ಬಿದ್ದು ಒಡೆದು ಹೋಗಿದೆ. ಆತನ ಬಳಿ ಇದ್ದ ಹಣವೂ ಖರ್ಚಾಗಿದ್ದು, ನಂತರ ಆಹಾರ ಹುಡುಕುತ್ತ ಕಾಡಿನಲ್ಲಿ ಅಲೆದಾಡಿದ್ದಾಗಿ ಎರಿಕ್‌ ತಿಳಿಸಿದ್ದ. ಆದರೆ, ಎರಿಕ್‌ ಸ್ಥಳೀಯರ ಬಳಿ ಮಾತನಾಡುವಾಗ

ಸಸ್ಯಗಳ ಕುರಿತಾದ ಸಂಶೋಧನೆಗೆ ಈ ಪ್ರದೇಶಕ್ಕೆ ಬಂದಿರುವುದಾಗಿ ತಿಳಿಸಿದ್ದಾನೆ. ಸಂಶೋಧನೆಗಾಗಿ ಬರುವ ಮುನ್ನ ಅರಣ್ಯ ಇಲಾಖೆಯ ಅನುಮತಿ ಪಡೆದ ಬಗ್ಗೆ ಕೇಳಿದ ಪ್ರಶ್ನೆಗೆ ಸಮರ್ಪಕವಾಗಿ ಉತ್ತರ ನೀಡಿಲ್ಲ.

ನಂತರ ದಾಖಲೆ ಪರಿಶೀಲನೆ ವೇಳೆ ಆತನ ಬಳಿ ವ್ಯಾಲೀಡ್‌ ವೀಸಾ ಹಾಗೂ ಪಾಸ್‌ಪೋರ್ಟ್‌ ಎರಡೂ ಸಿಕ್ಕಿದೆ. ಹಸಿವಿನಿಂದ ಬಳಲುತ್ತಿದ್ದ ಆತನಿಗೆ ಪೊಲೀಸರು ಊಟ ಕೊಡಿಸಿ ಮುಂದಿನ ಪ್ರಯಾಣಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಆದರೆ, ಈ ಘಟನೆಯಿಂದ ಮಾಡಗೋಡು ಭಾಗದ ಜನಾಗರಿಕರು ಆತಂಕಕ್ಕೊಳಗಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net