ಗೋಕರ್ಣ: ಇಲ್ಲಿನ ಪ್ರವೇಶ ದ್ವಾರದಲ್ಲಿರುವ ಮಾರುತಿ ಗುಡಿಗೆ ಇತ್ತೀಚೆಗೆ ಹೊಸದಾಗಿ ತಾಮ್ರದ ಆಚ್ಛಾದನವನ್ನು ಹೊದೆಸಿ ವಿಶೇಷ ಸಮರ್ಪಣಾ ಕಾರ್ಯಕ್ರಮ ನಡೆಯಿತು. ತನ್ನಿಮಿತ್ತ ಕ್ಷೇತ್ರದ ಪ್ರಧಾನ ಆಗಮ ತಾಂತ್ರಿಕ ವೇ.ಗಣಪತಿ ಗಜಾನನ ಹಿರೇ ಮತ್ತು ಕ್ಷೇತ್ರ ಪುರೋಹಿತ ವೇ.ಉದಯ ಮಯ್ಯರ್ ನೇತೃತ್ವದಲ್ಲಿ ಬೆಳಗ್ಗೆ ಆಗಮೋಕ್ತ ಮಹಾಪೂಜೆ ಮತ್ತು ಸಂಜೆ ಪುಷ್ಪಪೂಜೆ ನೆರವೇರಿತು.
ಸಮಾರಂಭದ ಹಿನ್ನೆಲೆಯಲ್ಲಿ ದೇಗುಲವನ್ನು ತಳಿರು ತೋರಣ, ಬಗೆ ಬಗೆಯ ಹೂವು ಮತ್ತು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. 15 ಲಕ್ಷ ರೂ. ಅಂದಾಜು ವೆಚ್ಚದಲ್ಲಿ ನಿರ್ಮಿಸಲಾದ ತಾಮ್ರದ ಹೊದಿಕೆಗೆ ಧನ ಸಮರ್ಪಣೆ ಮಾಡಿದ ವಿವಿಧ ದಾನಿಗಳು ಮತ್ತು ಧಾರ್ಮಿಕ ಕಾರ್ಯ ನೆರವೇರಿಸಿದ ವೈದಿಕ ಪ್ರಮುಖರನ್ನು ದೇಗುಲ ನಿರ್ವಹಣಾ ಸಮಿತಿ ವತಿಯಿಂದ ಪ್ರಸಾದ ನೀಡಿ ಸನ್ಮಾನಿಸಲಾಯಿತು.
ಸಮಿತಿ ಅಧ್ಯಕ್ಷ ಅನಿಲ ನಾಡಕರ್ಣಿ, ಕಾರ್ಯದರ್ಶಿ ಮಹೇಶ ಗಣಪತಿ ಶೆಟ್ಟಿ, ಸದಸ್ಯರಾದ ಶ್ರೀಧರ ಬೋಮ್ಕರ್, ನಿತ್ಯಾನಂದ ಶೆಟ್ಟಿ, ಮಹೇಶ ಗಜಾನನ ಶೆಟ್ಟಿ, ಗಜಾನನ ರಾಮ ನಾಯಕ, ರವಿ ಗುನಗ, ಮಂಜುನಾಥ ಎಸ್. ಶೆಟ್ಟಿ ಇತರರು ಸ್ವಯಂಸೇವಾ ಕಾರ್ಯಗಳನ್ನು ನಿರ್ವಹಿಸಿದರು.