ಕಾರವಾರ: ಸಿಎಂ ವಿರುದ್ಧ ಪ್ರತಿಭಟನೆ ನಡೆಸುವವರು ಕಾಂಗ್ರೆಸ್ ನೀಡಿದ ಗ್ಯಾರಂಟಿ ಸೌಲಭ್ಯ ಪಡೆಯುವುದಿಲ್ಲ ಎಂದು ಅಫಿಡಾವಿಟ್ ಸಲ್ಲಿಸಿ ಬರಲಿ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಶಂಭು ಶೆಟ್ಟಿ ಸವಾಲು ಹಾಕಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಸ್ಪತ್ರೆ ಉದ್ಘಾಟನೆ ವಿಚಾರವಾಗಿ ಮಾಜಿ ಶಾಸಕಿ, ಬಿಜೆಪಿಯ ರೂಪಾಲಿ ನಾಯ್ಕ ಅವರು ನೀಡಿರುವ ಪತ್ರಿಕಾ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಮುಖ್ಯಮಂತ್ರಿಗಳ ನೈತಿಕತೆಯ ಬಗ್ಗೆ ಪ್ರಶ್ನಿಸುವ ಮೊದಲು ಬಿಜೆಪಿಗರು ಕಾಂಗ್ರೆಸ್ ನೀಡಿರುವ ಐದು ಗ್ಯಾರಂಟಿ ಪಡೆಯುವುದಿಲ್ಲ ಎಂದು ಬರೆದುಕೊಟ್ಟು ತಮ್ಮ ನೈತಿಕತೆಯನ್ನು ಸಾಬೀತು ಮಾಡಲಿ ಎಂದರು.
101 ಕೋಟಿಗೂ ಹೆಚ್ಚು ಹಣ ಮಂಜೂರು
ಸರ್ಕಾರಿ ಮೆಡಿಕಲ್ ಕಾಲೇಜ್ (ಕ್ರಿಮ್ಸ್) ಆಸ್ಪತ್ರೆ ವಿಚಾರದಲ್ಲಿ ಮಾಜಿ ಶಾಸಕಿ, ಬಿಜೆಪಿಯ ರೂಪಾಲಿ ನಾಯ್ಕ ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿವೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರವೇ ಆಸ್ಪತ್ರೆಗೆ 100 ಕೋಟಿಗೂ ಅಧಿಕ ಹಣ ಬಿಡುಗಡೆಯಾಗಿದೆ ಎಂದು ಕಾಂಗ್ರೆಸ್ ಜಿಲ್ಲಾ ವಕ್ತಾರ ಕೆ.ಶಂಭು ಶೆಟ್ಟಿ ಹೇಳಿದರು.
ಕ್ರಿಮ್ಸ್ 450 ಹಾಸಿಗೆಗಳ ಹೊಸ ಆಸ್ಪತ್ರೆಯ ಕಟ್ಟಡಕ್ಕೆ ಯಡಿಯೂರಪ್ಪ ಸಿಎಂ ಆಗಿದ್ದಾಗ ಅನುದಾನ ನೀಡಿದ್ದರು. ಹಾಗಾಗಿ ಈಗಿನ ಸಿಎಂ ಸಿದ್ದರಾಮಯ್ಯ ಅವರಿಗೆ ಉದ್ಘಾಟನೆ ಮಾಡುವ ನೈತಿಕ ಹಕ್ಕಿಲ್ಲ ಎಂದು ರೂಪಾಲಿ ನಾಯ್ಕ ಹೇಳಿದ್ದಾರೆ. ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದ್ದಾರೆ. ಒಬ್ಬ ಜವಾಬ್ದಾರಿಯುತ ಸ್ಥಾನದಲ್ಲಿದ್ದವರು. ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇದ್ದವರು ವಾಸ್ತವ ಅರಿತು ಮಾತನಾಡಬೇಕು. ಇವರು ಹೇಳಿದ್ದನ್ನೆಲ್ಲ ನಂಬಲು ಜನರು ದಡ್ಡರಲ್ಲ ಎಂದರು.
ಹಿಂದೆ ಸತೀಶ ಸೈಲ್ ಶಾಸಕತ್ವದ ಅವಧಿಯಲ್ಲಿ ಮೆಡಿಕಲ್ ಕಾಲೇಜ್ ಆಸ್ಪತ್ರೆಯ ಸಾಮರ್ಥ್ಯ ಉನ್ನತೀಕರಿಸಬೇಕು ಎಂಬ ಕಾರಣಕ್ಕೆ 450 ಹಾಸಿಗೆಗಳಿಗೆ 2017-18 ನೇ ಸಾಲಿನಲ್ಲಿ ಪ್ರಸ್ತಾವನೆ ಸಲ್ಲಿಕೆಯಾಗಿತ್ತು. ನಂತರ ಬಂದ ಕಾಂಗ್ರೆಸ್ ಬೆಂಬಲಿತ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಅವರು ಆಸ್ಪತ್ರೆ ನಿರ್ಮಾಣಕ್ಕೆ 150 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದರು. 2022 ರಲ್ಲಿ ಆಸ್ಪತ್ರೆ ಕಟ್ಟಡ ಕಾಮಗಾರಿ ಪ್ರಾರಂಭವಾಗಿತ್ತು. ನಿರ್ಮಾಣ ವೆಚ್ಚ 198 ಕೋಟಿ ರೂ.ಗಳಿಗೆ ಹೋಗಿದೆ. ಆಗಲೂ ಹಣ ಬಿಡುಗಡೆಯಾಗಿದೆ.
2023 ರಲ್ಲಿ ಕಾಂಗ್ರೆಸ್ ಸರ್ಕಾರ ಅಽಕಾರಕ್ಕೆ ಬಂದ ನಂತರ ಕಾಮಗಾರಿಗೆ 101 ಕೋಟಿ ರೂ. ಬಿಡುಗಡೆಯಾಗಿದೆ. 24 ಕೋಟಿ ರೂ.ಗಳಲ್ಲಿ ಸಾಮಗ್ರಿ ಖರೀದಿಯಾಗಿದೆ. ಎಂಆರ್‌ಐ ಯಂತ್ರ ಖರೀದಿ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಕ್ಯಾನ್ಸರ್ ಆಸ್ಪತ್ರೆ, ಕ್ರಿಟಿಕಲ್ ಕೇರ್ ಸೆಂಟರ್ ಕಾಮಗಾರಿ ಪ್ರಗತಿಯಲ್ಲಿದೆ ಸದ್ಯದಲ್ಲಿಯೇ ಎಲ್ಲವೂ ಮುಕ್ತಾಯವಾಗಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣವಾಗಲಿದೆ ಎಂದು ಆರ್‌ಟಿಐ ದಾಖಲೆಗಳನ್ನು ಬಿಡುಗಡೆ ಮಾಡಿದರು.
ಕಾಂಗ್ರೆಸ್ ಪ್ರಮುಖರಾದ ಜಿ.ಪಿ.ನಾಯಕ, ಬಾಬು ಶೇಖ್, ಮಚ್ಚೇಂದ್ರ ಮಹಾಲೆ, ರೋಹಿದಾಸ ವೈಂಗಣಕರ್, ಪ್ರದೀಪ ಬಾನಾವಳಿ, ಪ್ರಾಂಕಿ ಗುಡಿನೋ, ಯಲ್ಲಮ್ಮ ವಡ್ಡರ್, ಶಂಕರ ಗುನಗಿ ಇತರರು ಸುದ್ದಿಗೋಷ್ಠಿಯಲ್ಲಿದ್ದರು.