ಸಿಎಂ ಕುರ್ಚಿ ಚರ್ಚೆಯೇ ಕಾಂಗ್ರೆಸ್ ಸಾಧನೆ

ವಿಶ್ವೇಶ್ವರ ಹೆಗಡೆ ಕಾಗೇರಿ
ವಿಶ್ವೇಶ್ವರ ಹೆಗಡೆ ಕಾಗೇರಿ
Published on
ವಿಜಯವಾಣಿ ಸುದ್ದಿಜಾಲ ಶಿರಸಿ
ರಾಜ್ಯದ ಕಾಂಗ್ರೆಸ್ ಸರ್ಕಾರದ ಮಂತ್ರಿಮಂಡಲ ಬರೀ ಮುಖ್ಯಮಂತ್ರಿ ಕುರ್ಚಿ ಬದಲಾವಣೆ ಕುರಿತು ಚರ್ಚೆ ನಡೆಸುವುದರಲ್ಲಿಯೇ ಮಗ್ನವಾಗಿದೆ. ಪರಿಣಾಮ ಜನರ ಕಷ್ಟ ನಿರ್ಲಕ್ಷ್ಯಕ್ಕೆ ಒಳಗಾಗಿ ಆಡಳಿತ ಯಂತ್ರ ಸಂಪೂರ್ಣ ಕುಸಿದಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಆರೋಪಿಸಿದರು.
ಮಂಗಳವಾರ ನಗರದ ಸಂಸದರ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಭ್ರಷ್ಟಾಚಾರದಲ್ಲಿ ನಂಬರ್ ಸ್ಥಾನದಲ್ಲಿದೆ. ಕೊಲೆ, ದರೋಡೆ, ಶಾಂತಿ-ಸುವ್ಯವಸ್ಥೆ ಹದಗೆಟ್ಟಿದೆ. ಜನಿವಾರ, ಹಿಜಾಬ್ ಸೇರಿದಂತೆ ಇನ್ನಿತರ ವಿವಾದಗಳ ಸರಮಾಲೆಗಳು, ಅಲ್ಪ ಸಂಖ್ಯಾತರ ಓಲೈಕೆಗೆ ಸಮರ್ಪಿತ ಸರ್ಕಾರವಾಗಿದೆ. ಆರ್ಥಿಕವಾಗಿ ದಿವಾಳಿಯಾಗಿ ಸಾಲ ಮಿತಿ ಮೀರುತ್ತಿದೆ. ಬಹುಸಂಖ್ಯಾತ ಹಿಂದೂಗಳ ಭಾವನೆಗಳನ್ನು ಧಿಕ್ಕರಿಸುತ್ತಿದೆ. ಕಾಂಗ್ರೆಸ್ಸಿನ ಮರಿ ಪುಡಾರಿಗಳ ಗೂಂಡಾ ವರ್ತನೆ ಮಿತಿ ಮೀರಿದೆ. ಸರ್ಕಾರದ ವಿರುದ್ಧ ಬೇಸತ್ತ ರಾಜ್ಯದ ಜನ ಬದಲಾವಣೆ ಬಯಸುತ್ತಿದ್ದಾರೆ. ಆರ್‌ಎಸ್‌ಎಸ್, ಕೇಂದ್ರ ಸರ್ಕಾರ, ನರೇಂದ್ರ ಮೋದಿ ಅವರ ಮೇಲೆ ಇಲ್ಲ ಸಲ್ಲದ ಆರೋಪ ಮಾಡುವುದು ಸರ್ಕಾರದ ಸಾಧನೆಯಾಗಿದೆ. ಗ್ಯಾರಂಟಿಯ ಕೀರಿಟವನ್ನು ತಲೆ ಮೇಲೆ ಇಟ್ಟಿಕೊಂಡು ಓಡಾಡುತ್ತಿದೆ. ಅದು ಡುಪ್ಲಿಕೇಟ್ ಕಿರೀಟ ಎಂಬುದು ರಾಜ್ಯಾದ್ಯಾಂತ ಚರ್ಚೆಯಾಗುತ್ತದೆ ಎಂದರು.
ಮಳೆಮಾಪನ ದುರಸ್ತಿ ಮಾಡುವ ಕುರಿತು ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಕ್ಕೆ 4 ಬಾರಿ ಸೂಚನೆ ನೀಡಿದೆ. ಹವಾಮಾನ ಆಧರಿತ ಬೆಳೆವಿಮೆಯ ಟೆಂಡರ್ ಅನ್ನು ಈ ವರ್ಷದಿಂದ ಹೊಸ ಕಂಪನಿ ಪಡೆದಿದ್ದು, ಮಳೆಮಾಪನ ಕೇಂದ್ರ ಶೀಘ್ರವಾಗಿ ದುರಸ್ತಿ ಮಾಡದಿದ್ದರೆ ಇನ್ನಷ್ಟು ತೊಂದರೆಯಾಗುವ ಲಕ್ಷಣ ಗೋಚರವಾಗುತ್ತಿದೆ. ಕೇಂದ್ರ ಸರ್ಕಾರವು ಹಣ ನೀಡಲು ಸಿದ್ಧವಿದೆ. ಅಗತ್ಯ ಪ್ರಸ್ತಾವನೆ ಸಲ್ಲಿಸಲು ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಭಾರತವನ್ನು ಅತ್ಯುತ್ತಮ, ಬಲಿಷ್ಠ, ಸರ್ವಶಕ್ತ ದೇಶವನ್ನಾಗಿ ಮಾಡಿದ್ದಾರೆ. ಭಾರತ ಪ್ರತಿಭೆ ಜಗತ್ತಿನಲ್ಲಿ ಬೆಳಗುತ್ತಿದೆ. ಅಂತಾರಾಷ್ಟ್ರೀಯ ಪರಿಸ್ಥಿತಿ ನೋಡಿದಾಗ ನರೇಂದ್ರ ಮೋದಿ ಕರೆ ನೀಡಿದಂತೆ ವಿದೇಶ ವಿನಿಮಯ, ಸಾವಯವ ಗೊಬ್ಬರ, ಚಿನ್ನ ಖರೀದಿ ತಾತ್ಕಾಲಿಕ ಮುಂದೂಡಿ, ಇಂಧನ ಮಿತವ್ಯಯವನ್ನು ರಾಷ್ಟ್ರೀಯ ಅಗತ್ಯತೆ ಎಂದು ಸ್ವೀಕರಿಸಿ, ನಮ್ಮ ಕೊಡುಗೆಯನ್ನು ನೀಡಬೇಕು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ತಾಪಂ ಮಾಜಿ ಸದಸ್ಯ ನಾಗರಾಜ ಶೆಟ್ಟಿ, ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ನಂದನ ಸಾಗರ, ಪ್ರಮುಖರಾದ ನವೀನ ಶೆಟ್ಟಿ ಚಿಪಗಿ, ಆರ್.ವಿ. ಹೆಗಡೆ ಚಿಪಗಿ ಮತ್ತಿತರರು ಇದ್ದರು.
"

ಶಿರಸಿ-ಹಾವೇರಿ ರಾಷ್ಟ್ರೀಯ ಹೆದ್ದಾರಿ ಅಸಮರ್ಪಕ ನಿರ್ವಹಣೆಯಿಂದ ಜನಸಾಮಾನ್ಯರು ದಿನನಿತ್ಯ ಅನುಭವಿಸುತ್ತಿರುವ ಕಷ್ಟ ಮನಗಂಡಿದ್ದೇನೆ. ಸಂಬಂಧಿಸಿದ ಅಧಿಕಾರಿ ಹಾಗೂ ಗುತ್ತಿಗೆದಾರನ ಬೇಜಬ್ದಾರಿಯಿಂದ ಈ ಪರಿಸ್ಥಿತಿ ನಿರ್ಮಾಣವಾಗಿದ್ದು, ನಿರ್ಮಾಣ ಹಂತದಲ್ಲಿರುವ ಹೆದ್ದಾರಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿ ಕಾಮಗಾರಿಗೆ ಚುರುಕು ನೀಡಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ.

— ವಿಶ್ವೇಶ್ವರ ಹೆಗಡೆ ಕಾಗೇರಿ, ಸಂಸದ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net