ಇಲ್ಲಿನ ಕೊಂಕಣ ರೈಲು ನಿಲ್ದಾಣದಲ್ಲಿ ಆರಂಭದಿಂದಲೂ ಕೇವಲ ಪ್ರಾಥಮಿಕ ಪ್ಲಾಟ್‌ಫಾರ್ಮ್ ಮಾತ್ರವಿತ್ತು. ಒಂದಕ್ಕಿಂತ ಹೆಚ್ಚಿನ ರೈಲಿನ ನಿಲುಗಡೆ, ಪಾಸಿಂಗ್‌ಗಾಗಿ ಮೂರು ಹಳಿಗಳನ್ನು ಹಾಕಲಾಗಿದ್ದರೂ ಎರಡನೇ ಪ್ಲಾಟ್‌ಫಾರ್ಮ್ ನಿರ್ಮಿಸಿರಲಿಲ್ಲ. ಕಾಲಾನುಕ್ರಮದಲ್ಲಿ ಕೊಂಕಣ ರೈಲು ಮಾರ್ಗದಲ್ಲಿ ರೋರೋ ಸೇವೆ ಸಹಿತ ಪ್ರತಿನಿತ್ಯ 35ಕ್ಕೂ ಹೆಚ್ಚು ರೈಲುಗಳು ಸಂಚರಿಸುತ್ತಿದ್ದಂತೆ ಕೇಂದ್ರ ಸ್ಥಳವಾದ ಕುಮಟಾ ರೈಲು ನಿಲ್ದಾಣದ ಅಗತ್ಯಗಳೂ ಬದಲಾದವು. ಒಂದನೇ ಪ್ಲಾಟ್‌ಫಾರ್ಮ್‌ನಲ್ಲಿ ಪ್ರಯಾಣಿಕ ರೈಲು ಇರುವಾಗಲೇ ಇನ್ನೊಂದು ಪ್ರಯಾಣಿಕ ರೈಲು ಆಗಮಿಸಿದಾಗಲೆಲ್ಲಾ ಎರಡನೇ ಪ್ಲಾಟ್‌ಫಾರ್ಮ್ ಸಮಸ್ಯೆ ಪ್ರಯಾಣಿಕರನ್ನು ಹಿಂಡುತ್ತಿತ್ತು. ರೈಲಿನ ಮೆಟ್ಟಿಲುಗಳಿಗೂ ನೆಲಕ್ಕೂ 5 ಅಡಿಗೂ ಹೆಚ್ಚು ವ್ಯತ್ಯಾಸ ಇರುವುದರಿಂದ ವೃದ್ಧರು, ಅಂಗವಿಕಲರು, ಗರ್ಭಿಣಿಯರು, ಮಕ್ಕಳು, ಸಾಮಾನು ಸರಂಜಾಮುಗಳೊಂದಿಗೆ ಜನ ಹತ್ತಿಳಿಯಲು ಹರಸಾಹಸ ಪಡಬೇಕಿತ್ತು. ಮಳೆಗಾಲದಲ್ಲಂತೂ ಕೆಸರುಗದ್ದೆಯಾಗಿರುತ್ತಿದ್ದ ಇಲ್ಲಿನ ಎರಡನೇ ಪ್ಲಾಟ್‌ಫಾರ್ಮ್‌ನಲ್ಲಿ ಕೊನೆಯ ಗಳಿಗೆಯಲ್ಲಿ ರೈಲಿನ ಪ್ಲಾಟ್‌ಫಾರ್ಮ್ ಬದಲಾದ ಸಂದೇಶ ಕೇಳುವಂತಾದಾಗ ಅಕ್ಷರಶಃ ದಿಗಿಲು ಉಂಟಾಗುತ್ತಿತ್ತು. ರೈಲು ಹತ್ತಿಳಿಯುವಾಗ ಪೆಟ್ಟು ಮಾಡಿಕೊಳ್ಳುತ್ತಿದ್ದರು. ಇಷ್ಟಕ್ಕೂ 2017ಕ್ಕೂ ಮುನ್ನ ಇಲ್ಲಿ ಪ್ಲಾಟ್‌ಫಾರ್ಮ್‌ಗಳ ನಡುವೆ ಮೇಲ್ಸೇತುವೆಯೂ ಇಲ್ಲದೇ ಪ್ರಯಾಣಿಕರು ಹಳಿಯ ಮೇಲೆ ಹಾರಿ ದಾಟಬೇಕಾದ ಅನಿವಾರ್ಯತೆ ಇತ್ತು.