ಕೋಸ್ಟ್‌ ಗಾರ್ಡ್‌ ಹಡಗು ಸಾವಿತ್ರಿಬಾಯಿ ಪುಲೆ ಸೆ.19 ರಂದು ನಿವೃತ್ತಿ

ಸಾವಿತ್ರಿ ಬಾಯಿ ಪುಲೆ ಹಡಗು
ಸಾವಿತ್ರಿ ಬಾಯಿ ಪುಲೆ ಹಡಗು
Published on

ಪ್ರಮುಖ ಮುಖ್ಯಾಂಶಗಳು

  • 20 ವರ್ಷ ಸೇವೆ
  • ಹಲವು ರೋಚಕ ಕಾರ್ಯಾಚರಣೆಗಳಲ್ಲಿ ಭಾಗಿ
ಕಾರವಾರ: ದೇಶದ ಪಶ್ಚಿಮ ಕರಾವಳಿ ಹಾಗೂ ವಿಶಾಲ ಅರಬ್ಬಿ ಸಮುದ್ರದಲ್ಲಿ ವಿವಿಧ ರೋಚಕ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ದೇಶಕ್ಕೆ 20 ವರ್ಷಗಳ ಕಾಲ ಸೇವೆ ಸಲ್ಲಿಸಿದ ಹಡಗು ಈಗ ತನ್ನ ಸೇವೆಗೆ ವಿದಾಯ ಹೇಳಲು ಸಜ್ಜಾಗಿದೆ. ಕಾರವಾರ ಕೋಸ್ಟ್ಗಾರ್ಡ್ ಸ್ಟೇಷನ್‌ಗೆ ಸೇರಿದ ಐಸಿಜಿಎಸ್ ಸಾವಿತ್ರಿಬಾಯಿ ಪುಲೆ ಇದೇ ಸೆ.19 ರಂದು ನಿವೃತ್ತವಾಗಲಿದೆ.
ಅಂದು ಸಾಯಂಕಾಲ 5.30 ಕ್ಕೆ ಹಡಗಿನ ಮೇಲಿರುವ ಧ್ವಜವನ್ನು ಇಳಿಸುವ ಮೂಲಕ ಹಡಗಿನ ಸೇವೆಯನ್ನು ಕೊನೆಗೊಳಿಸಲಾಗುವುದು ಎಂದು ಭಾರತೀಯ ತಟ ರಕ್ಷಕ ದಳದ ಮೂಲಗಳು ತಿಳಿಸಿವೆ.
2005 ರಲ್ಲಿ ಗೋವಾ ಶಿಪ್‌ಯಾರ್ಡ್ನಲ್ಲಿ ನಿರ್ಮಾಣ ಮಾಡಲಾದ ಹಡಗು 2006 ರ ಅಕ್ಟೋಬರ್ 28 ರಂದು ಗೋವಾದಲ್ಲಿ ದೇಶ ಸೇವೆಗೆ ಸಮರ್ಪಿತವಾಗಿತ್ತು. ನಂತರ ಹಡಗನ್ನು ಮಂಗಳೂರಿಗೆ ಆಗಮಿಸಿತ್ತು. 2021 ರ ಏಪ್ರಿಲ್‌ನಿಂದ ಈ ಹಡಗು ಕಾರವಾರದಲ್ಲಿ ನೆಲೆಸಿತ್ತು.
`ವಿ ಪ್ರೊಟೆಕ್ಟ್' (ನಾವು ರಕ್ಷಿಸುತ್ತೇವೆ) ಎಂಬುದು ಹಡಗಿನ ಧ್ಯೇಯ ವಾಕ್ಯ. 20 ವರ್ಷಗಳಲ್ಲಿ ಹಡಗು ಮಾದಕ ದ್ರವ್ಯ ಸಾಗಣೆದಾರರು, ವಿವಿಧ ರೀತಿಯ ಅಕ್ರಮ ಚಟುವಟಿಕೆಗಳನ್ನು ನಡೆಸುವವರನ್ನು ಹಿಡಿಯುವ ಹಲವು ಕಾರ್ಯಾಚರಣೆಗಳಲ್ಲಿ ಪಾಲ್ಗೊಂಡಿದೆ. ಮಾತ್ರವಲ್ಲ. ಮೀನುಗಾರಿಕೆ ದೇಣಿಗಳಿಗೆ ಬೆಂಕಿ ಹತ್ತಿರುವುದು, ಮೀನುಗಾರಿಕೆ ದೋಣಿಗಳ ಮುಳುಗಡೆ ಮುಂತಾದ ಪ್ರಸಂಗಗಳಲ್ಲಿ ಹುಡುಕಾಟ ಹಾಗೂ ರಕ್ಷಣೆಗೆ ಧಾವಿಸಿ ಕಾರ್ಯಾಚರಣೆ ನಡೆಸಿದೆ.
2720 ಕೆವಿ ಡೀಸೆಲ್ ಇಂಜಿನ್ ಹೊಂದಿರುವ ಹಡಗು ಗಂಟೆಗೆ 35 ನಾಟಿಕಲ್ ಮೈಲ್ ಕ್ರಮಿಸಬಲ್ಲ ಹಡಗು ಇದುವರೆಗೆ ಅರಬ್ಬಿ ಸಮುದ್ರದಲ್ಲಿ 122 ತಾಸುಗಳ 1464 ನಾಟಿಕಲ್ ಮೈಲ್ ಕ್ರಮಿಸಿ ಈಗ ವಿರಾಮ ಹೇಳುತ್ತಿದೆ. 3 ಪ್ರೊಫೈಲರ್‌ಗಳನ್ನು ಹಡಗು ಹೊಂದಿದ್ದು, 19 ಸಿಬ್ಬಂದಿ ಇದರಲ್ಲಿ ಕಾರ್ಯಾಚರಿಸುತ್ತಿದ್ದರು. 2006-07 ನೇ ಸಾಲಿನಲ್ಲಿ ಇದಕ್ಕೆ ಅತ್ಯುತ್ತಮ ಸರ್ಚ್ ಆ್ಯಂಡ್ ರೆಸ್ಕ್ಯೂ ಹಡಗು ಎಂಬ ಗೌರವ ಸಿಕ್ಕಿತ್ತು.

ವೇಗದ ಗಸ್ತು ನೌಕೆ

ಸಾವಿತ್ರಿಬಾಯಿ ಪುಲೆ ಸರೋಜಿನಿ ನಾಯ್ಡು ವರ್ಗಕ್ಕೆ ಸೇರಿದ ಶೀಘ್ರವಾಗಿ ಚಲಿಸುವ ಗಸ್ತು ನೌಕೆ (ಎಫ್‌ಪಿವಿ) ಯಾಗಿದೆ. 50.44 ಮೀಟರ್ ಉದ್ದ, 7.51 ಮೀಟರ್ ಅಗಲವಿದೆ. 270 ಟನ್ ಭಾರವಿದೆ. ಇದೇ ಮಾದರಿಯ ನೌಕೆ ಮೀರಾ ಬೆನ್ ಗುಜರಾತ್‌ನ ಓಕಾದಲ್ಲಿ ಕಳೆದ ತಿಂಗಳು ನಿವೃತ್ತಿಯಾಗಿತ್ತು. ಜೂನ್‌ನಲ್ಲಿ ತಟ ಗಸ್ತು ನೌಕೆ ಐಸಿಜಿಎಸ್ ಸಾರಂಗ್ ತಮಿಳುನಾಡಿನಲ್ಲಿ ನಿವೃತ್ತಿ ಹೊಂದಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net