Schedule ಬಸ್ ವೇಳಾಪಟ್ಟಿಯಲ್ಲಿ ಬದಲಾವಣೆ

ಸಿದ್ದಾಪುರ-ಹಾರ್ಸಿಕಟ್ಟಾ-ವಾಜಗದ್ದೆ ಮಾರ್ಗವಾಗಿ ಶಿರಸಿಗೆ ತೆರಳುವ ಬಸ್.
ಸಿದ್ದಾಪುರ-ಹಾರ್ಸಿಕಟ್ಟಾ-ವಾಜಗದ್ದೆ ಮಾರ್ಗವಾಗಿ ಶಿರಸಿಗೆ ತೆರಳುವ ಬಸ್.
Published on

ಪ್ರಮುಖ ಮುಖ್ಯಾಂಶಗಳು

  • ಪ್ರಯಾಣಿಕರು ಅನುಭವಿಸುತ್ತಿದ್ದ ತೊಂದರೆ ನಿವಾರಣೆ
  • ಸಾರಿಗೆ ಸಂಸ್ಥೆ ಅಧಿಕೃತ ಆದೇಶ
ಸಿದ್ದಾಪುರ: ಪಟ್ಟಣದಿಂದ ಹಾರ್ಸಿಕಟ್ಟಾ-ವಾಜಗದ್ದೆ-ನಾಣಿಕಟ್ಟಾ ಮಾರ್ಗವಾಗಿ ಶಿರಸಿಗೆ ಸಂಚರಿಸುವ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದೆ. ಬೆಳಗ್ಗೆ 9.30ಕ್ಕೆ ಬಿಡುತ್ತಿದ್ದ ಬಸ್ ಅನ್ನು ಬೆಳಗ್ಗೆ 9 ಗಂಟೆಗೆ ಬಿಡುವುದಕ್ಕೆ ಸಂಸ್ಥೆ ಅಧಿಕೃತ ಆದೇಶ ಹೊರಡಿಸಿರುವುದರಿಂದ ಕಳೆದ ಆರು ವರ್ಷಗಳಿಂದ ಪ್ರಯಾಣಿಕರು ಅನುಭವಿಸುತ್ತಿದ್ದ ತೊಂದರೆ ನಿವಾರಣೆಯಾದಂತಾಗಿದೆ.
ಸುಮಾರು 20ವರ್ಷಗಳಿಂದ ಈ ಬಸ್ ಬೆಳಗ್ಗೆ 8.45ಕ್ಕೆ ಬಿಡುತ್ತಿದ್ದರು. ಆದರೆ, ಕರೊನಾ ಸಾಂಕ್ರಾಮಿಕದ ಸಮಯದಲ್ಲಿ ಜಾರಿಗೆ ತಂದ ಮಾರ್ಗ ಮತ್ತು ಸಮಯ ಬದಲಾವಣೆಯ ನಿಯಮಗಳಿಂದಾಗಿ ಈ ಬಸ್ಸಿನ ಸಮಯವನ್ನು 9.30ಕ್ಕೆ ನಿಗದಿಪಡಿಸಲಾಗಿತ್ತು. ಇದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆ ಅಗುತ್ತಿತ್ತು. ಅಂದು ಹಿರಿಯ ಅಧಿಕಾರಿಗಳು ಕೆಲವೇ ತಿಂಗಳಲ್ಲಿ ಸಮಯ ಸರಿಪಡಿಸುವ ಭರವಸೆ ನೀಡಿದ್ದರೂ, ಅದು ಈವರೆಗೂ ಜಾರಿಯಾಗಿರಲಿಲ್ಲ. ಆರು ವರ್ಷ ಕಳೆದರೂ ಯಾವುದೇ ಸ್ಪಂದನೆ ಸಿಗದ ಕಾರಣ ಸಾರ್ವಜನಿಕರು ಇದರ ಆಸೆಯನ್ನೇ ಕೈಬಿಟ್ಟಿದ್ದರು. ಆದರೆ, ಸಾರ್ವಜನಿಕರ ನಿರಂತರ ಒತ್ತಡ ಮತ್ತು ಹೋರಾಟದ ಫಲವಾಗಿ ಸಾರಿಗೆ ಸಂಸ್ಥೆ ಈಗ ಎಚ್ಚೆತ್ತುಕೊಂಡು ಸಮಯ ಬದಲಾವಣೆ ಮಾಡಿದೆ.
ಸಿದ್ದಾಪುರದಿಂದ ಕೊಲಸಿರ್ಸಿ, ಬಿದ್ರಕಾನ್, ಮುತ್ತಿಗೆ, ಕವಲಕೊಪ್ಪ ಹಾಗೂ ಹಾರ್ಸಿಕಟ್ಟಾ ಕಡೆಗೆ ತೆರಳುವ ಶಿಕ್ಷಕರು ಈವರೆಗೆ ಅನಿವಾರ್ಯವಾಗಿ ಖಾಸಗಿ ವಾಹನಗಳನ್ನು ಅವಲಂಬಿಸಬೇಕಿತ್ತು. ಬಸ್ 9.30ಕ್ಕೆ ಬಿಡುತ್ತಿದ್ದರಿಂದ ವಾಜಗದ್ದೆ ಭಾಗದ ಜನರಿಗೆ ಶಿರಸಿ ಹಾಗೂ ಸಿದ್ದಾಪುರಕ್ಕೆ ತೆರಳಲು ವಿಳಂಬವಾಗುತ್ತಿತ್ತು. ಈಗ ಸಮಯ ಬದಲಾವಣೆಯಿಂದ ಶಾಲಾ ಮಕ್ಕಳು ಹಾಗೂ ನಾಣಿಕಟ್ಟಾ ಸರ್ಕಾರಿ ಕಾಲೇಜ್‌ಗೆ ತೆರಳುವ ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ತರಗತಿಗಳಿಗೆ ತೆರಳಲು ಅನುಕೂಲವಾಗಲಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net