ಸಿಎನ್‌ಜಿ ಬದಲು ಸಿಬಿಜಿ ವಿತರಣೆ

ಜಿಲ್ಲಾಧಿಕಾರಿ ಅವರಿಗೆ ಆಟೋ ರಿಕ್ಷಾ, ಟ್ಯಾಕ್ಸಿ ಚಾಲಕರು, ಮಾಲೀಕರು ಮನವಿ ಸಲ್ಲಿಸಿದರು.
ಜಿಲ್ಲಾಧಿಕಾರಿ ಅವರಿಗೆ ಆಟೋ ರಿಕ್ಷಾ, ಟ್ಯಾಕ್ಸಿ ಚಾಲಕರು, ಮಾಲೀಕರು ಮನವಿ ಸಲ್ಲಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಶಿರಸಿ ಮುಂಡಗೋಡ ಆಟೋ, ಟ್ಯಾಕ್ಸಿ ಚಾಲಕರಿಗೆ ಸಂಕಷ್ಟ
  • ಜಿಲ್ಲಾಧಿಕಾರಿ ಭೇಟಿ ಮಾಡಿದ ಚಾಲಕ, ಮಾಲೀಕರು
ಕಾರವಾರ: ಶಿರಸಿಯ ಶಿವಾನಿ ಪೆಟ್ರೊಲ್ ಬಂಕ್ ಹಾಗೂ ಮುಂಡಗೋಡಿನ ಬಂಕ್‌ಗಳಲ್ಲಿ ಕಂಪ್ರೆಸ್ಡ ನ್ಯಾಚುರಲ್ ಗ್ಯಾಸ್(ಸಿಎನ್‌ಜಿ) ಬದಲು ಕಂಪ್ರೆಸ್ಡ ಬಯೋ ಗ್ಯಾಸ್(ಸಿಬಿಜಿ) ವಿತರಿಸುತ್ತಿರುವುದಕ್ಕೆ ಆಟೋ ರಿಕ್ಷಾ ಹಾಗೂ ಟ್ಯಾಕ್ಸಿ ಚಾಲಕರು ವಿರೋಧ ವ್ಯಕ್ತಪಡಿಸಿದ್ದು, ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಅವರಿಗೆ ಮನವಿ ಸಲ್ಲಿಸಿದರು. 
ಉತ್ತರ ಕನ್ನಡ ಜಿಲ್ಲಾ ಆಟೋ ರಿಕ್ಷಾ ಚಾಲಕ, ಮಾಲೀಕರ ಕ್ಷೇಮಾಭಿವೃದ್ಧಿ ಸಂಘ, ಶಿರಸಿ ಟ್ಯಾಕ್ಸಿ ಚಾಲಕ, ಮಾಲೀಕರ ಸಂಘದಿಂದ ಮನವಿ ಸಲ್ಲಿಸಿದ ಚಾಲಕರು, ಮಾಲೀಕರು, ಎಲ್ಲರೂ ಸಿಎನ್‌ಜಿ ಆಟೋಗಳನ್ನು, ಟ್ಯಾಕ್ಸಿಗಳನ್ನು ಖರೀದಿಸಿದ್ದಾರೆ. ಆರ್‌ಸಿ ಬುಕ್‌ನಲ್ಲಿಯೂ ಸಿಎನ್‌ಜಿ ಎಂದು ನಮೂದಿಸಲಾಗಿದೆ. ಆದರೆ, ಶಿರಸಿ ಹಾಗೂ ಮುಂಡಗೋಡಿನ ಬಂಕ್‌ಗಳಲ್ಲಿ ಸಿಬಿಜಿ ವಿತರಿಸಲಾಗುತ್ತಿದ್ದು, ಇದರಿಂದ ಆಟೋ ರಿಕ್ಷಾ, ಟ್ಯಾಕ್ಸಿಗಳ ಮೈಲೇಜ್ ಕಡಿಮೆ ಆಗುವುದರ ಜೊತೆಗೆ ವಾಹನಗಳು ಪದೇ, ಪದೇ ದುರಸ್ತಿಗೆ ಬರುತ್ತಿವೆ. ವಾಸನೆಯಿಂದ ಪ್ರಯಾಣಿಕರಿಗೆ ಕಿರಿಕಿರಿ ಉಂಟಾಗುತ್ತಿದೆ. 
ಈ ಬಗ್ಗೆ ಶಿರಸಿ ತಹಸೀಲ್ದಾರ್ ಕಚೇರಿಯಲ್ಲಿ ಶೋ ರೂಂ ಮಾಲೀಕರು, ಬಂಕ್ ಮಾಲೀಕರ ಜೊತೆ ಸಭೆ ನಡೆಸಿದಾಗ ಶೋ ರೂಂ ಮಾಲೀಕರು ಸಿಎನ್‌ಜಿ ಬಳಸುವುದೇ ಸುರಕ್ಷಿತ ಎಂದು ಸೂಚಿಸಿದ್ದಾರೆ. ಆದರೆ, ಬಂಕ್ ಮಾಲೀಕರು ಎಷ್ಟೇ ವಿನಂತಿ ಮಾಡಿದರೂ ಅದಕ್ಕೆ ಒಪ್ಪುತ್ತಿಲ್ಲ.  
ಸಿಬಿಜಿ ಗ್ಯಾಸ್ ವಿತರಿಸಲು ನಮ್ಮ ವಿರೋಧವಿಲ್ಲ. ಆದರೆ, ಸಿಎನ್‌ಜಿಯನ್ನೂ ವಿತರಿಸಲಿ, ಎರಡನ್ನೂ ಪ್ರತ್ಯೇಕವಾಗಿ ಬೋರ್ಡ್ ಹಾಕಿ ವಿತರಣೆ ಮಾಡಲಿ ಎಂದು ಒತ್ತಾಯಿಸಿದರು. ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಅವರು ಕಂಪನಿಯವರ ಜೊತೆ ಮಾತನಾಡಿ, ನಂತರ ಶಿರಸಿ ಹಾಗೂ ಮುಂಡಗೋಡಿನಲ್ಲಿ ಸಿಎನ್‌ಜಿ ಬಳಸುವ ಆಟೋ ಹಾಗೂ ಟ್ಯಾಕ್ಸಿಗಳ ಲಿಸ್ಟ್ ನೀಡುವಂತೆ ಸೂಚಿಸಿದರು. ಅಷ್ಟು ಪ್ರಮಾಣದ ಸಿಎನ್‌ಜಿ ಪೂರೈಕೆ ಮಾಡುವಂತೆ ಸಂಬಂಧಪಟ್ಟ ಕಂಪನಿ ಅಧಿಕಾರಿಗಳಿಗೆ ಸೂಚನೆ ನೀಡಿದರು. 
ಉತ್ತರ ಕನ್ನಡ ಜಿಲ್ಲಾ ಆಟೋ ರಿಕ್ಷಾ ಚಾಲಕ, ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ವಿಶ್ವನಾಥ ಗೌಡ, ಕಾರ್ಯದರ್ಶಿ ಉದಯ ನಾಯ್ಕ, ಶಿರಸಿ ಟ್ಯಾಕ್ಸಿ ಚಾಲಕ, ಮಾಲೀಕರ ಸಂಘದ ಅಧ್ಯಕ್ಷ ರಾಘು ಗೌಳಿ ಎಸ್‌ಪಿ ದೀಪನ್ ಎಂ.ಎನ್., ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ ಮಂಜುನಾಥ ರೇವಣಕರ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net