Bridge collapses ಕರ್ಕಿಸವಲ್ ಬಳಿ ಸೇತುವೆ ಕುಸಿತ

ಸಿದ್ದಾಪುರ ತಾಲೂಕಿನ ಕರ್ಕಿಸವಲ್ ಸಮೀಪದ ಸೇತುವೆಯ ಒಂದು ಭಾಗ ಕುಸಿದಿರುವುದು.
ಸಿದ್ದಾಪುರ ತಾಲೂಕಿನ ಕರ್ಕಿಸವಲ್ ಸಮೀಪದ ಸೇತುವೆಯ ಒಂದು ಭಾಗ ಕುಸಿದಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಸಾರಿಗೆ ಬಸ್ ಸಂಚಾರ ಸ್ಥಗಿತ
  • ರಸ್ತೆ ಸಂಪೂರ್ಣ ಹೊಂಡಮಯ
ಸಿದ್ದಾಪುರ: ತಾಲೂಕಿನ ಹಾರ್ಸಿಕಟ್ಟಾ ಸಮೀಪದ ಕರ್ಕಿಸವಲ್ ಸಮೀಪ ಸೇತುವೆ ಒಂದು ಭಾಗದಲ್ಲಿ ಕುಸಿದುಬಿದ್ದು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದ್ದಲ್ಲದೆ, ನಿತ್ಯ ಸಿದ್ದಾಪುರದಿಂದ ಹಾರ್ಸಿಕಟ್ಟಾ-ಕರ್ಕಿಸವಲ್-ಗಾಳಿಜಡ್ಡಿಗೆ ತೆರಳುತ್ತಿದ್ದ ಸಾರಿಗೆ ಬಸ್ ಸಂಚಾರ ಸ್ಥಗಿತಗೊಂಡಿದೆ.
ಹಾರ್ಸಿಕಟ್ಟಾ-ಹೇರೂರು ಮುಖ್ಯರಸ್ತೆಯ ಹೊನ್ನೆಹದ್ದ ಕ್ರಾಸ್‌ನಿಂದ ಕರ್ಕಿಸವಲ್ ಮಾರ್ಗವಾಗಿ ಗಾಳಿಜಡ್ಡಿ-ಮಟ್ಟೆಮನೆಯವರೆಗೆ ಸುಮಾರು 3.5 ಕಿಮೀ ಆಗುತ್ತಿದೆ. ಈ ಮಾರ್ಗ ಸಂಪೂರ್ಣ ಹೊಂಡಮಯವಾಗಿದ್ದಲ್ಲದೆ, ಅಲ್ಲಲ್ಲಿ ಧರೆ ಕುಸಿತಗೊಂಡಿರುವುದರಿಂದ ಸಂಚಾರ ಮಾಡುವುದೇ ದುಸ್ತರವಾದ ಸಂದರ್ಭದಲ್ಲಿ ಮತ್ತೊಂದು ಸಂಕಟ ಈ ಭಾಗದ ಜನರಿಗೆ ಎದುರಾಗಿದೆ.
ಸಾರಿಗೆ ಬಸ್, ಹಾಲಿನ ವಾಹನ ಸೇರಿದಂತೆ ನಿತ್ಯ ನೂರಾರು ಖಾಸಗಿ ವಾಹನಗಳು ಸಂಚರಿಸುತ್ತವೆ. ಗಾಳಿಜಡ್ಡಿಯಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹಾಲು ಉತ್ಪಾದಕರ ಸಹಕಾರಿ ಸಂಘಗಳಿವೆ. ಅಲ್ಲದೆ, ನಿತ್ಯ ಶಾಲಾ-ಕಾಲೇಜ್‌ಗಳಿಗೆ ಓಡಾಡುವ ವಿದ್ಯಾರ್ಥಿಗಳು, ವಿವಿಧ ಉದ್ಯೋಗಕ್ಕಾಗಿ ಸಿದ್ದಾಪುರ ಹಾಗೂ ಶಿರಸಿಗೆ ಓಡಾಡುವವರಿದ್ದಾರೆ. ಸಾರಿಗೆ ಬಸ್ ಸ್ಥಗಿತಗೊಂಡಿದ್ದರಿಂದ ನಿತ್ಯ ಸಂಚಾರ ಮಾಡುವ ಶಾಲಾ-ಕಾಲೇಜ್ ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರಿಗೆ ಹೆಚ್ಚು ತೊಂದರೆ ಉಂಟಾಗಿದೆ.
ಕರ್ಕಿಸವಲ್ ಸಮೀಪದ ತಿರುವಿನಲ್ಲಿರುವ ಸುಮಾರು 68 ಮೀಟರ್ ಉದ್ದವಿರುವ ಈ ಸಣ್ಣ ಸೇತುವೆಗೆ ತಾಗಿಕೊಂಡು ಒಂದು ಅತ್ತಿಮರ ಇದ್ದು, ಈ ಅತ್ತಿಮರ ಸೇರಿದಂತೆ ಸೇತುವೆ ಕುಸಿದುಬಿದ್ದಿದೆ. ಕುಸಿದು ಬಿದ್ದ ಸ್ಥಳ ಕಿರಿದಾಗಿರುವುದರಿಂದ ಸಂಚಾರಕ್ಕೆ ಮತ್ತಷ್ಟು ತೊಂದರೆ ಉಂಟಾಗಿದ್ದು, ರಸ್ತೆ ನಿರ್ವಹಣೆ ಮಾಡುತ್ತಿರುವ ಜಿಪಂ ಇಲಾಖೆ ಕೂಡಲೇ ರಸ್ತೆಯಲ್ಲಿನ ಹೊಂಡ ಮುಚ್ಚುವುದರ ಜತೆಗೆ ಕುಸಿದು ಬಿದ್ದ ಸೇತುವೆಯನ್ನು ನಿರ್ಮಿಸಿಕೊಂಡುವಂತೆ ಕರ್ಕಿಸವಲ್, ಗಾಳಿಜಡ್ಡಿ, ಮಟ್ಟೆಮನೆ, ಬಾಳೇಹಳ್ಳಿ, ಹಿರೇಕೈ, ಹೂಡೇಹದ್ದ, ದಂಟಕಲ್, ಸಂಪೇಸರ, ಗಾಳೀಮನೆ ಮತ್ತಿತರ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಕರ್ಕಿಸವಲ್ ಸಮೀಪ ಸೇತುವೆ ಕುಸಿದು ಬಿದ್ದ ಸ್ಥಳವನ್ನು ಪರಿಶೀಲಿಸಲಾಗುವುದು. ಈಗ ಮಳೆಗಾಲ ಆಗಿದ್ದರಿಂದ ದುರಸ್ತಿ ಮಾಡುವುದು ಕಷ್ಟವಾಗಿದೆ. ಆದರೆ, ನಿತ್ಯ ಸಂಚಾರಕ್ಕೆ ತೊಂದರೆಯಾಗದಂತೆ ವ್ಯವಸ್ಥೆ ಮಾಡಿಕೊಡಲಾಗುವುದು.

— ಗಣೇಶ ಹೆಗಡೆ ಜಿಪಂ ಇಂಜಿನಿಯರ್, ಸಿದ್ದಾಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net